ಸುಂಟಿಕೊಪ್ಪ, ಸೆ.೨೦ :ಸುಂಟಿಕೊಪ್ಪ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘವು ೨೦೨೫-೨೬ ನೇ ಸಾಲಿನಲ್ಲಿ ರೂ ೫೯,೫೩,೬೭೧ ನಿವ್ವಳ ಲಾಭವನ್ನು ಗಳಿಸಿದೆ. ಇಲ್ಲಿನ ಗುಂಡುಗುಟ್ಟಿ ಮಂಜನಾಥಯ್ಯ ಸಹಕಾರ ಭವನದಲ್ಲಿ ಸಂಘದ ವಾರ್ಷಿಕ ಮಹಾಸಭೆಯು ಅಧ್ಯಕ್ಷ ಜೆರ್ಮಿ ಡಿಸೋಜ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.
ವಾರ್ಷಿಕ ಮಹಾಸಭೆಯನ್ನು ಉದ್ದೇಶಿಸಿ ಮಾತನಾಡಿದ ಜೆರ್ಮಿಡಿಸೋಜ ಅವರು ಸಂಘದ ಪ್ರಗತಿಯ ಬಗ್ಗೆ ಮಾಹಿತಿ ನೀಡಿದರು. ಸಂಘದಲ್ಲಿ ೧೯೯೯ ಮಂದಿ ಸದಸ್ಯರಿದ್ದು, ಇದರಲ್ಲಿ ಎ ಸದಸ್ಯರ ಪಾಲು ಹಣ ೮೬,೨೭,೨೮೦ ಸರ್ಕಾರದ ಪಾಲು ಹಣ ರೂ.೭೮,೦೦೦ ಆಗಿರುತ್ತದೆ. ಸಂಘದ ಸಾಲ ಮರುಪಾವತಿ ಪ್ರಮಾಣವು ಶೇ.೯೮.೫೦ ಇದ್ದು, ಸರಕಾರದ ಬಡ್ಡಿ ರಿಯಾಯಿತಿ ಯೋಜನೆಯು ಜಾರಿಯಲ್ಲಿರುತ್ತದೆ ಎಂದು ಮಾಹಿತಿ ನೀಡಿದರು.
ಚಂದ್ರಶೇಖರ್ ಮಾತನಾಡಿ, ಸಂಘದ ಸದಸ್ಯರ ಮಕ್ಕಳು ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿ ನಂತರ ಪ್ರತಿಭಾ ಪುರಸ್ಕಾರದಿಂದ ವಂಚಿತರಾಗಿದ್ದಾರೆ. ಪ್ರತಿಭಾ ಪುರಸ್ಕಾರ ನೀಡಬೇಕೆಂದು ಆಗ್ರಹಿಸಿದರು. ಇದಕ್ಕೆ ಸದಸ್ಯರಾದ ಬಿ.ಜಿ. ಜವಹರ್, ಕರುಣ ಮತ್ತಿತರ ಸದಸ್ಯರು ಧ್ವನಿಗೂಡಿಸಿದರು. ಈ ಹಿನ್ನಲೆಯಲ್ಲಿ ಸಂಘದ ಸದಸ್ಯರ ಮಕ್ಕಳಿಗೆ ಸರಕಾರಿ ಕಾಲೇಜುಗಳಲ್ಲಿ ಪದವಿ ವ್ಯಾಸಂಗದಲ್ಲಿ ಮೊದಲ ೨ ಸ್ಥಾನ ಪಡೆಯುವ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಲು ತೀರ್ಮಾನಿಸಲಾಯಿತು.
ಸಂಘದ ಬೆಳವಣಿಗೆ ಮತ್ತು ಲಾಭದ ದೃಷ್ಟಿಯ ಹಿನ್ನಲೆಯಲ್ಲಿ ಪ್ರತಿಯೊಬ್ಬ ಸದಸ್ಯನು ಸಂಘದ ವಿವಿಧ ಶಾಖೆಗಳಲ್ಲಿ ಕನಿಷ್ಟ ರೂ.೫,೦೦೦ ವ್ಯವಹಾರ ನಡೆಸಬೇಕು ಎಂದು ಜೆರ್ಮಿಡಿಸೋಜ ಮನವಿ ಮಾಡಿದರು. ಸಂಘದ ಹಿರಿಯ ಸದಸ್ಯರಾದ ಬಾಲಕೃಷ್ಣ ರೈ ಮಾತನಾಡಿ ಕಳೆದ ಮಹಾಸಭೆಯಲ್ಲಿ ಆನೇಕ ಪ್ರಶ್ನೆಗಳನ್ನು ಕೇಳಿ ಅದಕ್ಕೆ ಸಮಜಾಯಿಷಿಕೆ ಉತ್ತರಗಳನ್ನು ಪಡೆದಿದ್ದೇವೆ ಆದರೆ ಅದು ದಾಖಲಾತಿ ಪುಸ್ತಕದಲ್ಲಿ ನಮೂದಾಗದ ಬಗ್ಗೆ ಅಸಾಮಾಧಾನ ವ್ಯಕ್ತಪಡಿಸಿದರು. ಇದಕ್ಕೆ ಪೂರಕವಾಗಿ ಮಾತನಾಡಿದ ಬಿ.ಜಿ.ಜವಹರ್ ಇತರ ಬ್ಯಾಂಕುಗಳಿಗೆ ಇರುವ ರೀತಿಯಲ್ಲಿ ೨ನೇ ಹಾಗೂ ೪ನೇ ಶನಿವಾರ ದಂದು ರಜೆ ನೀಡುವ ಬಗ್ಗೆ ಯಾವುದೇ ಚರ್ಚೆ ಆಗದಿದ್ದರೂ ನಾವು ರಜೆ ಕೇಳಿದ್ದೇವೆ ಎಂಬ ರೀತಿಯಲ್ಲಿ ನಿರ್ಣಯ ನಮೂದಿಸಿರುವ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದರು. ಈ ಲೋಪವನ್ನು ಸರಿಪಡಿಸಿಕೊಳ್ಳುವುದಾಗಿ ಅಧ್ಯಕ್ಷರು ತಿಳಿಸಿದರು.
ಸಂಘದ ಹಿರಿಯ ಸದಸ್ಯ ಕೆ.ಡಿ.ರಾಮಯ್ಯ ಮಾತನಾಡಿ ಸಂಘದ ರೂ.೫೯ ಲಕ್ಷ ಲಾಭದಲ್ಲಿ ರೂ.೨೮ ಲಕ್ಷ ಬಾಡಿಗೆ ರೂಪದಲ್ಲಿ ಬಂದಿದೆ ಉಳಿದ ಲಾಭಾಂಶ ಸಾಲದು ಎಂದು ಹೇಳಿದರಲ್ಲದೆ ಸಂಘದ ಆರ್ಥಿಕ ವ್ಯವಹಾರವನ್ನು ಹೆಚ್ಚು ಮಾಡಲು ಸಲಹೆ ನೀಡಿದರು. ಈ ಸಂದರ್ಭ ವಿವರಣೆ ನೀಡಿದ ಜೆರ್ಮಿಡಿಸೋಜ ಅವರು ರೂ ೧೯ ಲಕ್ಷ ಮಾತ್ರ ಬಾಡಿಗೆ ಬರುತ್ತಿದ್ದು ರೂ ೪೬ ಲಕ್ಷ ಆಡಳಿತ್ಮಾಕ ವೆಚ್ಚ ಬರುತ್ತಿದೆ. ಈಗಾಗಲೇ ಕಾನ್‌ಬೈಲ್‌ನಲ್ಲಿ ರೂ.೨೫ ಲಕ್ಷ ವ್ಯಯಿಸಿ ಗೋದಾಮು ನಿರ್ಮಿಸಲಾಗಿದೆ ಸಂಘದ ೬ ಗ್ರಾಹಕರ ಶಾಖೆಗಳ ಮುಖಾಂತರ ವಾರ್ಷಿಕ ರೂ.೧೫ ಲಕ್ಷ ಲಾಭಗಳಿಸುತ್ತಿದ್ದೇವೆ. ನಿರಖು ಠೇವಣಿಗಳ ಬಡ್ಡಿ ದರ ಕಡಿಮೆಯಿದ್ದು ನಿರೀಕ್ಷಿತ ಪ್ರಮಾಣದಲ್ಲಿ ನಿರಖು ಠೇವಣಿಗಳನ್ನು ಸಂಗ್ರಹಿಸಲು ಆಗುತ್ತಿಲ್ಲ ಎಂದು ಮಾಹಿತಿ ನೀಡಿದರು. ಈಗಾಗಲೇ ಸಂಘದ ಕಲ್ಲೂರು ಶಾಖೆಯನ್ನು ನವೀಕರಣಗೊಳಿಸಿ ಗೋದಾಮು ಮತ್ತು ಸಿಸಿ ಕ್ಯಾಮರಾ ಅಳವಡಿಸಲಾಗಿದೆ. ಕಾನ್‌ಬೈಲ್ ಶಾಖೆಯನ್ನು ಕೂಡ ನವೀಕರಣಗೊಳಿಸಿ ಗೊದಾಮು ಮತ್ತು ಬ್ಯಾಂಕಿAಗ್ ವ್ಯವಸ್ಥೆಯನ್ನು ಆರಂಭಿಸಲಾಗುವುದು ಎಂದರು. ವಾರ್ಷಿಕ ಮಹಾಸಭೆಯಲ್ಲಿ ಸುಂಟಿಕೊಪ್ಪ ಹೋಬಳಿ ವ್ಯಾಪ್ತಿಯಲ್ಲಿನ ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿಯಲ್ಲಿ ಅಧಿಕ ಅಂಕಗಳಿಸಿದ ವಿದ್ಯಾರ್ಥಿನಿಯರಿಗೆ ಪ್ರೋತ್ಸಾಹಕ ಬಹುಮಾನವನ್ನು ನೀಡಲಾಯಿತು.
ಸಹಕಾರ ರತ್ನ ಎಂ.ಎನ್. ಕೊಮರಪ್ಪ ಅವರ ೪ ದಶಕಗಳ ಸಹಕಾರಿ ಸೇವೆಯನ್ನು ಸಂಘದ ಮಾಜಿ ಅಧ್ಯಕ್ಷ ಎನ್.ಸಿ.ಕ್ಲೆÊವ್ ಪೊನ್ನಪ್ಪ ಮಾತನಾಡಿದರು. ಸಭೆಯಲ್ಲಿ ಉಪಾಧ್ಯಕ್ಷರಾದ ಪಿ.ಪಿ. ಉದಯಕುಮಾರ್, ನಿರ್ದೇಶಕರುಗಳಾದ ಎನ್.ಸಿ. ಪೊನ್ನಪ್ಪ, ಡಿ.ಬಿ.ರಮೇಶ್ ಚಂಗಪ್ಪ, ಕೆ.ಎಸ್.ಮಂಜುನಾಥ್, ಡಿ.ಕೆ.ಗಂಗಾಧರ, ಡಾ. ಶಶಿಕಾಂತ ರೈ, ಕೆ.ಪಿ. ಜಗನ್ನಾಥ್, ಕೆ.ಆರ್.ಮಂಜುನಾಥ, ಡಿ.ಎಚ್. ಚಂದ್ರಶೇಖರ್, ಬಿ.ಕೆ.ದಯಾನಂದ, ಪಿ.ಪಿ.ಲೀಲಾವತಿ, ಕೆ.ವಿ.ರಮ್ಯ ಮತ್ತು ಪ್ರಬಾರ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸುಮಿತ್ರ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು. ಅಕ್ಷತಾ ಯೋಗೇಶ್ ಪ್ರಾರ್ಥಿಸಿ, ಮಾಜಿ ಅಧ್ಯಕ್ಷ ಕೆ.ಎಸ್. ಮಂಜುನಾಥ್ ಸ್ವಾಗತಿಸಿ, ನಿರ್ದೇಶಕ ಡಾ. ಶಶಿಕಾಂತ ರೈ ನಿರೂಪಿಸಿ, ಪ್ರಬಾರ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸುಮಿತ್ರ ವಂದಿಸಿದರು.