ಕೂಡಿಗೆ, ಸೆ. ೧೯: ಜಿಲ್ಲೆಯಲ್ಲಿ ಮಳೆಯ ಕೊರತೆ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಕೂಡುಮಂಗಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ೪ ಗ್ರಾಮಗಳಲ್ಲಿ ಅಂತರ್ಜಲ ಭಾರಿ ಕುಸಿತಗೊಂಡ ಹಿನ್ನೆಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಹೆಚ್ಚಾಗಿದೆ.
ವ್ಯಾಪ್ತಿಯ ಚಿಕ್ಕತ್ತೂರು, ದೊಡ್ಡತ್ತೂರು ಸುಂದರನಗರ, ನವಗ್ರಾಮ ವ್ಯಾಪ್ತಿಯಲ್ಲಿ ಈಗಾಗಲೇ ಕುಡಿಯುವ ನೀರಿನ ಸರಬರಾಜು ವ್ಯವಸ್ಥೆಗೆ ತೊಂದರೆಗಳು ಅಗುತ್ತಿರುವ ಹಿನ್ನೆಲೆಯಲ್ಲಿ ಮೂರು ದಿನಗಳಿಗೆ ಒಮ್ಮೆ ಕುಡಿಯುವ ನೀರು ಪೂರೈಕೆ ಮಾಡುವುದಾಗಿ ಪಂಚಾಯಿತಿ ಪ್ರಕಟಣೆಯಲ್ಲಿ ಮಾಹಿತಿ ನೀಡಲಾಗಿದೆ. ಕೂಡುಮಂಗಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಮಳೆಯ ಕೊರತೆಯಿಂದಾಗಿ ಕುಡಿಯುವ ನೀರಿನ ಮೂಲಗಳಲ್ಲಿ ಜಲಮಟ್ಟ ಗಣನೀಯವಾಗಿ ಕಡಿಮೆಯಾಗಿದೆ. ಇದರಿಂದಾಗಿ ಸಾರ್ವಜನಿಕರಿಗೆ ನೀರು ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದ್ದು, ಸಾರ್ವಜನಿಕರು ನೀರನ್ನು ಮಿತವಾಗಿ ಬಳಸುವಂತೆ ಗ್ರಾಮ ಪಂಚಾಯಿತಿ ವತಿಯಿಂದ ಭಿತಿ ಪತ್ರಗಳ ಮೂಲಕ ಜಾಗೃತಿ ಮೂಡಿಸಲಾಗುತ್ತಿದೆ.
ಮುಂಗಾರು ಮಳೆ ಪ್ರಾರಂಭವಾಗುವವರೆಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಇನ್ಮುಂದೆ ೩ ದಿನಕ್ಕೊಮ್ಮೆ ಮಾತ್ರ ಕುಡಿಯುವ ನೀರನ್ನು ಸರಬರಾಜು ಮಾಡಲಾಗುವುದು. ಕುಡಿಯುವ ನೀರಿನ ನಲ್ಲಿಗಳಿಗೆ ನೇರವಾಗಿ ಮೋಟಾರ್ ಅಳವಡಿಸುವುದನ್ನು ಕಡ್ಡಾಯವಾಗಿ ನಿಷೇಧಿಸಲಾಗಿದೆ. ಕುಡಿಯುವ ನೀರನ್ನು ಕೈತೋಟಗಳಿಗೆ ಅಥವಾ ಇತರೆ ಉದ್ದೇಶಗಳಿಗೆ ಬಳಸುವುದನ್ನು ನಿಷೇಧಿಸಲಾಗಿದೆ. ನಲ್ಲಿಗಳನ್ನು ತೆರೆದಿಟ್ಟು ನೀರನ್ನು ಪೋಲು ಮಾಡಬಾರದು. ಪೈಪ್‌ಲೈನ್ ಸಂಪರ್ಕಗಳಲ್ಲಿ ನೀರು ಸೋರಿಕೆಯಾಗುತ್ತಿದ್ದರೆ ತಕ್ಷಣ ದುರಸ್ತಿ ಮಾಡಿಸಬೇಕು. ವಾಹನ ತೊಳೆಯಲು ಮನೆ, ರಸ್ತೆ ಸ್ವಚ್ಛಗೊಳಿಸಲು ಸೇರಿದಂತೆ ಅನಗತ್ಯ ಕೆಲಸಗಳಿಗೆ ಕುಡಿಯುವ ನೀರನ್ನು ಬಳಸಬಾರದು. ಪಂಚಾಯಿತಿ ಹೊರಡಿಸಿರುವ ನಿಯಮಗಳನ್ನು ಉಲ್ಲಂಘಿಸಿದಲ್ಲಿ, ಪಂಚಾಯತ್ ರಾಜ್ ಅಧಿನಿಯಮದಡಿ ನೀರು ಸರಬರಾಜು ಸಂಪರ್ಕವನ್ನು ಕಡಿತಗೊಳಿಸಿ ದಂಡ ವಿಧಿಸಲಾಗುವುದು ಎಂದು ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
- ಕೆ.ಕೆ. ನಾಗರಾಜಶೆಟ್ಟಿ