ಚೆಯ್ಯಂಡಾಣೆ: ಸ್ಥಳೀಯ ಶ್ರೀ ಗಣೇಶ ಸೇವಾ ಸಮಿತಿಯ ವತಿಯಿಂದ ಶ್ರೀಲಕ್ಷ್ಮಿ ಮಹಿಳಾ ಸಮಾಜದಲ್ಲಿ ವರ್ಷಂಪ್ರತಿ ಆಚರಿಸಿಕೊಂಡು ಬರುವ ಶ್ರೀ ಗೌರಿ - ಗಣೇಶೋತ್ಸವ ವಿಜೃಂಭಣೆಯಿAದ ನಡೆಯಿತು.
ಬೆಳಿಗ್ಗೆ ೭ ಗಂಟೆಗೆ ಶ್ರೀ ಮಹಾ ಗಣಪತಿ ಹೋಮ, ನಂತರ ಗೌರಿ - ಗಣಪತಿ ಮೂರ್ತಿಗಳ ಪ್ರತಿಷ್ಠಾಪನೆ, ಮಹಾ ಮಂಗಳಾರತಿ, ಪ್ರಸಾದ ವಿನಿಯೋಗ ನಡೆಯಿತು. ನೆರದಿದ್ದ ಭಕ್ತಾದಿಗಳಿಗೆ ಮಧ್ಯಾಹ್ನದ ಊಟದ ವ್ಯವಸ್ಥೆ ಕೂಡ ಆಯೋಜಿಸಲಾಗಿತ್ತು.
ಪೂಜಾ ಕಾರ್ಯಗಳನ್ನು ಅರ್ಚಕರಾದ ಪ್ರಥ್ವಿರಾಜ್, ರಾಜೇಶ್ ಅವರ ನೇತೃತ್ವದಲ್ಲಿ ನೆರವೇರಿತು. ಮಧ್ಯಾಹ್ನದ ನಂತರ ಮಹಾಗಣಪತಿ ಮೂರ್ತಿಯನ್ನು ಅಲಂಕೃತ ಮಂಟಪದಲ್ಲಿ ಕುಳ್ಳಿರಿಸಿ ಚೆಯ್ಯಂಡಾಣೆಯ ಪಟ್ಟಣದ ಮುಖ್ಯ ಬೀದಿಗಳಲ್ಲಿ ಸಂಚರಿಸಿತು.
ಮೆರವಣಿಗೆಯಲ್ಲಿ ಭಕ್ತರಿಂದ ಜೈ ಘೋಷ ಮೊಳಗಿತ್ತು, ಪುಟಾಣಿ ಮಕ್ಕಳ, ಹಿರಿಯರ ನೃತ್ಯ ನೋಡುಗರ ಗಮನ ಸೆಳೆಯಿತು. ಪಟಾಕಿ ಸಿಡಿಸಿ ಸಂಭ್ರಮಿಸಿದರು. ನಂತರ ಕರಡ ಹೊಳೆಯಲ್ಲಿ ವಿಸರ್ಜಿಸಲಾಯಿತು.
ಈ ಸಂದರ್ಭ ಶ್ರೀಗಣೇಶ ಸೇವಾ ಸಮಿತಿಯ ಪದಾಧಿಕಾರಿಗಳು, ಗ್ರಾಮಸ್ಥರು ಪಾಲ್ಗೊಂಡಿದ್ದರು.
ಗೋಣಿಕೊಪ್ಪಲು: ಗೋಣಿಕೊಪ್ಪಲುವಿನ ನೇತಾಜಿ ಬಡಾವಣೆಯಲ್ಲಿರುವ ಶ್ರೀ ನೇತಾಜಿ ಭಕ್ತ ಮಂಡಳಿ ವತಿಯಿಂದ ಗೌರಿ - ಗಣೇಶ ಹಬ್ಬವನ್ನು ಆಚರಿಸಲಾಯಿತು. ೩ನೇ ವರ್ಷದ ಗೌರಿ - ಗಣೇಶ ಪ್ರತಿಷ್ಠಾಪನೆ ಮಾಡಿದ ಆಡಳಿತ ಮಂಡಳಿಯು ಮುಂಜಾನೆ ೬ ಗಂಟೆಗೆ ಗಣಪತಿ ಹೋಮ ನಡೆಸಿದರು.
ಮುಖ್ಯ ರಸ್ತೆಯಿಂದ ಮಹಿಳೆಯರು ಕಲಶ ಹಿಡಿದು ಗೌರಿಯನ್ನು ಮೆರವಣಿಗೆಯಲ್ಲಿ ಕರೆ ತಂದರು. ಮೆರವಣಿಗೆಯಲ್ಲಿ ಮಹಿಳೆಯರು, ಮಕ್ಕಳು, ಹಿರಿಯರು ಭಾಗವಹಿಸಿದ್ದರು. ಗೌರಿ - ಗಣೇಶ ಪ್ರತಿಷ್ಠಾಪನೆಯ ನಂತರ ಸಮಿತಿಯ ಅಧ್ಯಕ್ಷ ಮಹಾದೇವ್ ಅಧ್ಯಕ್ಷತೆಯಲ್ಲಿ ಸ್ಥಳೀಯ ಬಡಾವಣೆಯ ನಿವಾಸಿಗಳಿಗೆ ವಿವಿಧ ಆಟೋಟ ಸ್ಪರ್ಧೆಗಳನ್ನು ಹಾಗೂ ಮನೋರಂಜನೆಯ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು.
ಅಧ್ಯಕ್ಷ ಮಹಾದೇವ್ ಮಾತನಾಡಿ, ಕಳೆದ ೩ ವರ್ಷದಿಂದ ಬಡಾವಣೆಯ ನಿವಾಸಿಗಳು ಒಟ್ಟಾಗಿ ಸೇರಿ ಬಡಾವಣೆಯ ನಿವಾಸಿಗಳಿಗೆ ಕ್ರೀಡೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ. ಜಾತಿ, ಮತ, ಬೇಧವಿಲ್ಲದೆ ಬಡಾವಣೆ ನಿವಾಸಿಗಳು ಒಟ್ಟಾಗಿ ಸೇರಿ ಗೌರಿ ಗಣೇಶ ಹಬ್ಬವನ್ನು ಆಚರಿಸುತ್ತಿದ್ದೇವೆ ಎಂದರು.
ಕಾರ್ಯಕ್ರಮದಲ್ಲಿ ಶ್ರೀ ನೇತಾಜಿ ಭಕ್ತ ಮಂಡಳಿಯ ಪದಾಧಿಕಾರಿಗಳು, ಮಹಿಳೆಯರು ಉಪಸ್ಥಿತರಿದ್ದರು.