ಸೋಮವಾರಪೇಟೆ, ಸೆ. ೧೬: ಇಲ್ಲಿನ ತಾಕೇರಿ ಗ್ರಾಮದ ಟೀಂ ತಾಕೇರಿ ವತಿಯಿಂದ ಆಯೋಜಿಸಿದ್ದ ಮೂರನೇ ವರ್ಷದ ಪಂಚಾಯಿತಿ ಮಟ್ಟದ ಫುಟ್‌ಬಾಲ್ ಪಂದ್ಯಾಟದಲ್ಲಿ ಪ್ರಥಮ ಸ್ಥಾನ ಗಳಿಸಿದ ತಂಡಕ್ಕೆ ಆಕರ್ಷಕ ಟ್ರೋಫಿಯೊಂದಿಗೆ ೪೦ ಕೆ.ಜಿ. ಟಗರನ್ನು ಬಹುಮಾನವಾಗಿ ನೀಡಲಾಯಿತು.

ದ್ವಿತೀಯ ಸ್ಥಾನ ಪಡೆದ ತಂಡಕ್ಕೆ ೩೦ ಕೆ.ಜಿ. ಕುರಿ ಹಾಗೂ ಆಕರ್ಷಕ ಟ್ರೋಫಿ, ವೈಯಕ್ತಿಕ ವಿಭಾಗದಲ್ಲಿ ಪ್ರಶಸ್ತಿ ಪಡೆದ ಆಟಗಾರರಿಗೆ ನಾಟಿ ಕೋಳಿಯನ್ನು ಬಹುಮಾನವಾಗಿ ನೀಡುವ ಮೂಲಕ ಗೌರಿ ಗಣೇಶ ಹಬ್ಬದ ‘ಹೊಸ್ತೊಡುಕು’ ದಿನಕ್ಕೆ ಭರ್ಜರಿ ಪ್ರೋತ್ಸಾಹ ನೀಡಲಾಯಿತು.

ಪಂದ್ಯದಲ್ಲಿ ಸುಮಾರು ೮ ತಂಡಗಳು ಭಾಗವಹಿಸಿದ್ದವು. ಮಧು ತಂಡ ಪ್ರಥಮ ಸ್ಥಾನಗಳಿಸಿ ಚಾಂಪಿಯನ್ ಆಗಿ ಹೊರಹೊಮ್ಮಿದರೆ, ಕೀರ್ತನ್ ತಂಡ ದ್ವಿತೀಯ ಸ್ಥಾನಗಳಿಸಿತು. ಉತ್ತಮ ಆಟಗಾರರಿಗೆ ನಾಟಿ ಕೋಳಿ ಬಹುಮಾನವಾಗಿ ನೀಡಲಾಯಿತು.

ಅತಿ ಹೆಚ್ಚು ಗೋಲ್‌ಗಳಿಸಿದ ಮಲ್ಲಾಜೀರ ಪ್ರವೀಣ್, ಉತ್ತಮ ಆಲ್ ರೌಂಡರ್ ಮಧು, ಬೆಸ್ಟ್ ಪ್ಲೇಯರ್ ಕೀರ್ತನ್, ಎಮರ್ಜಿಂಗ್ ಪ್ಲೇಯರ್ ಮೇಘನ್ ಅವರನ್ನು ಗೌರವಿಸಲಾಯಿತು. ಶಾಸಕ ಮಂತರ್ ಗೌಡ ಕ್ರೀಡಾಕೂಟಕ್ಕೆ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿ, ಯುವಕರು ಒಗ್ಗೂಡಲು ಕ್ರೀಡೆ ಸಹಕಾರಿ, ಈ ಕೆಲಸವನ್ನು ಟೀಂ ತಾಕೇರಿ ತಂಡ ಮಾಡಿಕೊಂಡು ಬರುತ್ತಿದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಕಾರ್ಯಕ್ರಮ ಮಾಡುವಂತಾಗಲಿ ಎಂದು ಹೇಳಿದರು.

ಉದ್ಯಮಿ ಪ್ರಸನ್ನ ಎಡಿಕೇರಿ ಮಾತನಾಡಿ, ಹಳ್ಳಿಗಾಡಿನಲ್ಲಿ ಎಲ್ಲರೂ ಒಗ್ಗೂಡುವ ಸಲುವಾಗಿ ಈ ರೀತಿಯ ಕ್ರೀಡಾಕೂಟ ಆಯೋಜನೆ ಮಾಡಿಕೊಂಡು ಬರುತ್ತಿರುವುದು ಶ್ಲಾಘನೀಯ. ಮುಂದಿನ ದಿನಗಳಲ್ಲಿ ಇನ್ನಷ್ಟು ಈ ರೀತಿಯ ಕಾರ್ಯಕ್ರಮ ನಡೆಯುವಂತಾಗಲಿ ಎಂದರು. ತಾಕೇರಿ ಗ್ರಾಮದ ಅಧ್ಯಕ್ಷ ಎಸ್.ಪಿ.ಪೊನ್ನಪ್ಪ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ.ಬಿ.ಸತೀಶ್, ಮಿಥುನ್ ಹಾನಗಲ್ ಹಾಗೂ ಟೀಂ ತಾಕೇರಿಯ ಸದಸ್ಯರು ಪಾಲ್ಗೊಂಡಿದ್ದರು.

ತಾಕೇರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ೧೦ಕ್ಕೂ ಹೆಚ್ಚು ವರ್ಷ ಸೇವೆ ಸಲ್ಲಿಸಿದ ಶಿಕ್ಷಕ ರಮೇಶ್ ಹಾಗೂ ವನಜಾ ಅವರಿಗೆ ಟೀಂ ತಾಕೇರಿ ವತಿಯಿಂದ ಗೌರವ ಸಲ್ಲಿಸಲಾಯಿತು. ತೀರ್ಪುಗಾರರಾಗಿ ಪವನ್ ಹಾಗೂ ಅಮೃತ್ ತಾಕೇರಿ ಕಾರ್ಯ ನಿರ್ವಹಿಸಿದರು.