ಮಡಿಕೇರಿ, ಸೆ. ೧೩: ಪೊನ್ನಂಪೇಟೆ ಅರಣ್ಯ ಮಹಾವಿದ್ಯಾಲಯದ ವಿದ್ಯಾರ್ಥಿಗಳ ವತಿಯಿಂದ ಮರಗೋಡಿನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಆವರಣದಲ್ಲಿ ಬೆಳೆ ವಿಚಾರ ಸಂಕಿರಣವನ್ನು ಆಯೋಜಿಸಲಾಗಿತ್ತು.
ರೈತರು, ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರಿಗೆ ಕೃಷಿ ಮತ್ತು ಕೃಷಿ ಸಂಬAಧಿತ ಕ್ಷೇತ್ರಗಳ ಕುರಿತು ವೈಜ್ಞಾನಿಕ ಹಾಗೂ ಪ್ರಾಯೋಗಿಕ ಮಾಹಿತಿ ಒದಗಿಸುವ ಉದ್ದೇಶದಿಂದ ಕಾರ್ಯಕ್ರಮ ಆಯೋಜಿಸಲಾಗಿತ್ತು. ವಿವಿಧ ಕ್ಷೇತ್ರಗಳ ತಜ್ಞ ಸಂಪನ್ಮೂಲ ವ್ಯಕ್ತಿಗಳು ಭಾಗವಹಿಸಿ ತಮ್ಮ ಅನುಭವ ಹಾಗೂ ತಾಂತ್ರಿಕ ಜ್ಞಾನವನ್ನು ಹಂಚಿಕೊAಡರು.
ವಿಚಾರ ಸಂಕಿರಣದಲ್ಲಿ ಆರ್ಕಿಡ್ ಕೃಷಿ ಮತ್ತು ನಿರ್ವಹಣೆ, ಕೀಟ ಹಾಗೂ ರೋಗಗಳ ನಿರ್ವಹಣೆ, ಔಷಧೀಯ ಸಸ್ಯಗಳ ಕೃಷಿ ಮತ್ತು ಬಳಕೆ, ಪಶುವೈದ್ಯಕೀಯ ಪದ್ಧತಿಗಳು ಸೇರಿದಂತೆ ಕೃಷಿಗೆ ಸಂಬAಧಿಸಿದ ವಿವಿಧ ಪ್ರಮುಖ ವಿಷಯಗಳ ಕುರಿತು ಮಾಹಿತಿ ನೀಡಲಾಯಿತು. ಕಾಫಿ ಮಂಡಳಿಯ ಪ್ರತಿನಿಧಿಗಳು ಕಾಫಿ ಬೆಳೆಯ ನಿರ್ವಹಣಾ ಕ್ರಮಗಳು ಹಾಗೂ ರೈತರಿಗೆ ಉಪಯುಕ್ತವಾದ ಸಲಹೆಗಳನ್ನು ಹಂಚಿಕೊAಡರು.
ವಿವಿಧ ಕೃಷಿ ತಂತ್ರಜ್ಞಾನಗಳನ್ನು ಪ್ರಾಯೋಗಿಕವಾಗಿ ಅರ್ಥಮಾಡಿಕೊಳ್ಳಲು ಸಹಕಾರಿಯಾಗುವ ಜೀವಂತ ಮಾದರಿಗಳು, ಕೃಷಿ ಉತ್ಪನ್ನಗಳು ಹಾಗೂ ಕಾರ್ಯನಿರ್ವಹಿಸುವ ಮಾದರಿಗಳನ್ನು ಪ್ರದರ್ಶಿಸಲಾಯಿತು. ಅಣಬೆ ಕೃಷಿಯ ಬ್ಯಾಗ್‌ಗಳು ಮತ್ತು ಸ್ಪಾನ್, ಔಷಧೀಯ ಸಸ್ಯಗಳು, ವಿವಿಧ ತಳಿಯ ಆರ್ಕಿಡ್‌ಗಳು ಹಾಗೂ ಜೀವಂತ ಹೈಡ್ರೋಪೊನಿಕ್ಸ್ ವ್ಯವಸ್ಥೆ ಪ್ರದರ್ಶನದಲ್ಲಿದ್ದವು.
ಇದರೊಂದಿಗೆ ಭತ್ತ-ಮೀನು ಸಂಯೋಜಿತ ಕೃಷಿ ಪದ್ಧತಿ, ಆನೆ ತಡೆ ಕಂದಕ, ಮಳೆನೀರು ಕೊಯ್ಲು, ಸಮಗ್ರ ಕೃಷಿ ಪದ್ಧತಿ ಹಾಗೂ ಜೈವ ಅನಿಲ ಘಟಕಗಳ ಕಾರ್ಯನಿರ್ವಹಿಸುವ ಮಾದರಿಗಳನ್ನು ಪ್ರದರ್ಶಿಸಲಾಯಿತು. ಈ ಮಾದರಿಗಳ ಮೂಲಕ ಸುಸ್ಥಿರ ಕೃಷಿ, ನೀರಿನ ಸಂರಕ್ಷಣೆ, ವನ್ಯಜೀವಿ-ಮಾನವ ಸಂಘರ್ಷ ನಿರ್ವಹಣೆ, ಸಂಪನ್ಮೂಲಗಳ ಸಮರ್ಪಕ ಬಳಕೆ ಹಾಗೂ ಪರ್ಯಾಯ ಶಕ್ತಿಯ ಮಹತ್ವವನ್ನು ಪ್ರಾಯೋಗಿಕವಾಗಿ ವಿವರಿಸಲಾಯಿತು.
ಜೇನು ಸಾಕಾಣಿಕೆ ಮತ್ತು ಅಣಬೆ ಕೃಷಿಗೆ ಸಂಬAಧಿಸಿದ ಶೈಕ್ಷಣಿಕ ಚಾರ್ಟ್ಗಳನ್ನು ಸಹ ಪ್ರದರ್ಶಿಸಿ, ಅವುಗಳ ಉತ್ಪಾದನಾ ವಿಧಾನ, ನಿರ್ವಹಣೆ ಹಾಗೂ ಆರ್ಥಿಕ ಮಹತ್ವದ ಕುರಿತು ಮಾಹಿತಿ ನೀಡಲಾಯಿತು.
ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ರೈತರು ಸಂಪನ್ಮೂಲ ವ್ಯಕ್ತಿಗಳೊಂದಿಗೆ ಸಂವಾದ ನಡೆಸಿ ಕೃಷಿ ಚಟುವಟಿಕೆಗಳಿಗೆ ಸಂಬAಧಿಸಿದ ಸಮಸ್ಯೆಗಳು ಹಾಗೂ ಅನುಮಾನಗಳಿಗೆ ಪರಿಹಾರ ಮತ್ತು ಸಲಹೆಗಳನ್ನು ಪಡೆದುಕೊಂಡರು.