ಪೊನ್ನಂಪೇಟೆ, ಸೆ.೧೩: ಜಾರ್ಖಂಡ್‌ನ ರಾಂಚಿಯ ಮೊರಾಬಾದಿಯ ಮರಂಗ್‌ಗೊಮ್ಕೆ ಜೈಪಾಲ್ ಸಿಂಗ್ ಆಸ್ಟ್ರೋ ಟರ್ಫ್ ಹಾಕಿ ಕ್ರೀಡಾಂಗಣದಲ್ಲಿ ಸೆ.೧೦ರಿಂದ ೧೨ರವರೆಗೆ ನಡೆದ ಕ್ರೋ ನ್ಯಾಷನಲ್ ಹಾಕಿ ಟೂರ್ನಿ- ೨೦೨೬ರ ಅಂಡರ್-೧೭ ಬಾಲಕಿಯರ ವಿಭಾಗದಲ್ಲಿ ಅISಅ ಕರ್ನಾಟಕ ತಂಡ ಚಾಂಪಿಯನ್ ಆಗಿ ಹೊರಹೊಮ್ಮಿದೆ. ಟೂರ್ನಿಯ ಪೂಲ್ ‘ಎ’ ನಲ್ಲಿ ಒಡಿಶಾ, ಪಶ್ಚಿಮ ಬಂಗಾಳ ಹಾಗೂ ಉತ್ತರ ಪ್ರದೇಶ ತಂಡಗಳೊAದಿಗೆ ಸೆಣಸಿದ ಕರ್ನಾಟಕ, ಆರಂಭಿಕ ಪಂದ್ಯದಲ್ಲಿ ಒಡಿಶಾ ವಿರುದ್ಧ ೦-೧ ಅಂತರದ ಸೋಲು ಕಂಡಿತು. ಬಳಿಕ ಎಚ್ಚೆತ್ತುಕೊಂಡ ತಂಡ ಪಶ್ಚಿಮ ಬಂಗಾಳ ಹಾಗೂ ಉತ್ತರ ಪ್ರದೇಶ ತಂಡಗಳನ್ನು ತಲಾ ೧೧-೦ ಅಂತರದಲ್ಲಿ ಭರ್ಜರಿಯಾಗಿ ಮಣಿಸಿ ಸೆಮಿಫೈನಲ್ ಪ್ರವೇಶಿಸಿತು.

ಸೆಮಿಫೈನಲ್‌ನಲ್ಲಿ ನಾರ್ತ್ ಈಸ್ಟ್ ತಂಡದ ವಿರುದ್ಧ ೧-೦ ಅಂತರದ ಗೆಲುವು ದಾಖಲಿಸಿದ ಕರ್ನಾಟಕ ಫೈನಲ್‌ಗೆ ಲಗ್ಗೆ ಇಟ್ಟಿತು. ನಿರ್ಣಾಯಕ ಫೈನಲ್ ಪಂದ್ಯದಲ್ಲಿ ಮಹಾರಾಷ್ಟ್ರ ವಿರುದ್ಧ ತೀವ್ರ ಪೈಪೋಟಿ ನೀಡಿದ ಕರ್ನಾಟಕ ತಂಡ, ಒಂದು ಗೋಲು ದಾಖಲಿಸಿ ೧-೦ ಅಂತರದ ರೋಚಕ ಗೆಲುವು ಸಾಧಿಸುವ ಮೂಲಕ ಚಾಂಪಿಯನ್ ಪಟ್ಟ ಅಲಂಕರಿಸಿತು.

ಕೊಡಗಿನ ೯ ಆಟಗಾರ್ತಿಯರ ಗಮನಾರ್ಹ ಕೊಡುಗೆ

ಕರ್ನಾಟಕದ ಈ ಸಾಧನೆಯಲ್ಲಿ ಕೊಡಗಿನ ಪ್ರತಿಭಾವಂತ ಆಟಗಾರ್ತಿಯರ ಕೊಡುಗೆಯೂ ಗಮನಾರ್ಹವಾಗಿದೆ. ಅಮ್ಮಂಡ ಕಾರ್ಯಪ್ಪ ಅವರ ತರಬೇತಿಯಲ್ಲಿ ಕೊಡಗಿನಿಂದ ಆಯ್ಕೆಯಾಗಿದ್ದ ಅನ್ಶಿ ಪೊನ್ನಮ್ಮ ಬಾಳೆಯಡ, ಎಂ.ಬಿ. ಲಸೀನಾ ಮಂದಮಾಡ, ದಿಯಾ ಬೋಜಮ್ಮ ತೆಕ್ಕಡ, ಅದಿತಿ ಮುತ್ತಮ್ಮ ಕುಟ್ಟಂಡ, ರಿಯಾ ದೇಚಮ್ಮ ತೀತರಮಾಡ, ಟಿಯಾ ಮರಿಯಾ ಥಾಮಸ್ ಕರಿಪ್ಪರಂಬಿಲ್, ಎಂ. ಆಧ್ಯಾ ದೇಚಮ್ಮ ಮುಕ್ಕಾಟಿರ, ಎಂ.ಎ. ಜಾಹ್ನವಿ ಮೇವಡ ಹಾಗೂ ತನಿಷ್ಕಾ ದೇಚಮ್ಮ ಪುದಿಯೊಕ್ಕಡ ಅವರು ಕರ್ನಾಟಕ ತಂಡವನ್ನು ಪ್ರತಿನಿಧಿಸಿ ಕೊಡಗಿನ ಕೀರ್ತಿಯನ್ನು ಹೆಚ್ಚಿಸಿದ್ದಾರೆ.

ಈ ಪೈಕಿ ಏಳು ಆಟಗಾರ್ತಿಯರು ಗೋಣಿಕೊಪ್ಪದ ಕಾಲ್ಸ್ ಶಾಲೆ ಹಾಗೂ ಇಬ್ಬರು ಮಡಿಕೇರಿಯ ಜನರಲ್ ತಿಮ್ಮಯ್ಯ ಪಬ್ಲಿಕ್ ಸ್ಕೂಲ್ ಹಾಗೂ ಬೆಂಗಳೂರಿನ ಚಿನ್ಮಯಿ ಶಾಲೆಯ ವಿದ್ಯಾರ್ಥಿನಿಯರಾಗಿದ್ದಾರೆ.