(ಕೆ.ಎಂ ಇಸ್ಮಾಯಿಲ್ ಕಂಡಕರೆ)

ಮಡಿಕೇರಿ, ಸೆ. ೧೩: ಸೆಪ್ಟೆಂಬರ್ ೩೦ರೊಳಗೆ ಬಿಪಿಎಲ್ ಮತ್ತು ಅಂತ್ಯೋದಯ ಪಡಿತರ ಚೀಟಿ ಫಲಾನುಭವಿಗಳು ಇ.ಕೆವೈಸಿ ಮಾಡಲು ಆಹಾರ ಇಲಾಖೆ ಸೂಚಿಸಿದ್ದು, ಸರ್ವರ್ ಸಮಸ್ಯೆಯಿಂದಾಗಿ ಪಡಿತರ ಚೀಟಿದಾರರು ಪರದಾಡುವಂತಹ ಪರಿಸ್ಥಿತಿ ಜಿಲ್ಲೆಯಲ್ಲಿ ನಿರ್ಮಾಣವಾಗಿದೆ.ಕೇಂದ್ರ ಸರ್ಕಾರದ ನಿಯಮದಂತೆ ಪಡಿತರ ಚೀಟಿ ಫಲಾನುಭವಿಗಳು ಐದು ವರ್ಷಗಳಿಗೊಮ್ಮೆ ಕಡ್ಡಾಯವಾಗಿ ಇ.ಕೆವೈಸಿ ಮಾಡಬೇಕು.

ಕಳೆದ ಐದು ವರ್ಷಗಳಲ್ಲಿ ಇ.ಕೆವೈಸಿ ಮಾಡದ ಬಿಪಿಎಲ್ ಮತ್ತು ಅಂತ್ಯೋದಯ ಪಡಿತರ ಚೀಟಿ ಫಲಾನುಭವಿಗಳು ಸೆಪ್ಟೆಂಬರ್ ೦೧ರಿಂದ ಇ.ಕೆ.ವೈಸಿ ಮಾಡಬೇಕೆಂದು ರಾಜ್ಯ ಸರ್ಕಾರ ಆದೇಶ ನೀಡಿದ್ದು,ಸೆಪ್ಟೆಂಬರ್ ೦೧ರಿಂದ ಜಿಲ್ಲೆಯ ನ್ಯಾಯ ಬೆಲೆ ಅಂಗಡಿಗಳಲ್ಲಿ ಇ.ಕೆವೈಸಿ ಮಾಡಲಾಗುತ್ತಿದೆ.ಏತನ್ಮಧ್ಯೆ ಸರ್ವರ್ ಸಮಸ್ಯೆಯಿಂದ ಇ.ಕೈವೈಸಿ ಆಗದೆ ಪಡಿತರ ಚೀಟಿದಾರರು ಪರದಾಡುವಂತಾಗಿದೆ.ಎಪಿಎಲ್ ಪಡಿತರ ಚೀಟಿದಾರರಿಗೆ ಇ.ಕೆವೈಸಿ ಕಡ್ಡಾಯವಲ್ಲ.

ಕೊಡಗಿನಲ್ಲಿ ಶೇ.೨೬ ರಷ್ಟು ಮಾತ್ರ ಪೂರ್ಣ

ಜಿಲ್ಲೆಯಲ್ಲಿ ಸರ್ವರ್ ಸಮಸ್ಯೆಯಿಂದಾಗಿ ಪಡಿತರ ಚೀಟಿದಾರರ ಇ.ಕೆವೈಸಿ ಪ್ರಕ್ರಿಯೆ ನಿಧಾನಗತಿಯಲ್ಲಿ ಸಾಗಿದ್ದು,ಸೆಪ್ಟೆಂಬರ್ ೧೦ರವರೆಗೆ ಶೇ.೨೬.೩೧ ರಷ್ಟು ಮಾತ್ರ ಪೂರ್ಣಗೊಂಡಿದೆ. ಜಿಲ್ಲೆಯಲ್ಲಿ ಒಟ್ಟು ೧,೯೯,೮೦೧ ಮಂದಿ ಪಡಿತರ ಚೀಟಿ ಸದಸ್ಯರ ಇಕೆವೈಸಿ ಮಾಡಬೇಕಿದೆ.ಇ.ಕೆವೈಸಿ ಮಾಡಬೇಕಾದ ಪಡಿತರ ಚೀಟಿ ಸದಸ್ಯರ ಪಟ್ಟಿಯನ್ನು ಆಯಾ ನ್ಯಾಯ ಬೆಲೆ ಅಂಗಡಿ ವ್ಯಾಪ್ತಿಯಲ್ಲಿ ಪ್ರಕಟಿಸಲಾಗಿದೆ. ಅದರಲ್ಲಿ ಈವರೆಗೆ ೫೨,೫೬೪ ಮಂದಿಯ ಇ.ಕೆವೈಸಿ. ಪೂರ್ಣಗೊಂಡಿದ್ದು, ಇನ್ನೂ ೧,೪೭,೨೩೭ ಮಂದಿಯ ಇ.ಕೆ.ವೈಸಿ ಬಾಕಿ ಇದೆ.

ಮಡಿಕೇರಿ ತಾಲೂಕಿನಲ್ಲಿ ೪೬,೪೦೫ ರಲ್ಲಿ ೧೪,೮೯೯ ಪೂರ್ಣಗೊಂಡಿದೆ. ಸೋಮವಾರಪೇಟೆ ತಾಲೂಕಿನಲ್ಲಿ ೪೪,೪೦೮ ರಲ್ಲಿ ೧೩,೫೬೦ ಮಂದಿಯ ಇ.ಕೆ.ವೈಸಿ ಇದುವರೆಗೆ ಮಾಡಲಾಗಿದೆ. ಕುಶಾಲನಗರ ತಾಲೂಕಿನಲ್ಲಿ ೪೧,೯೯೮ ರಲ್ಲಿ ೧೨,೪೫೫ ಫಲಾನುಭವಿಗಳದ್ದು ಪೂರ್ಣಗೊಂಡಿದೆ. ವೀರಾಜಪೇಟೆ ತಾಲೂಕಿನಲ್ಲಿ ೩೭,೯೩೦ರಲ್ಲಿ ೭,೫೪೨, ಪೊನ್ನಂಪೇಟೆ ತಾಲೂಕಿನಲ್ಲಿ ೨೯,೦೬೦ ರಲ್ಲಿ ೪,೧೦೮ ಫಲಾನುಭವಿಗಳ ಇ.ಕೆವೈ.ಸಿ ಇದುವರೆಗೆ ಮಾಡಲಾಗಿದೆ. ಪೊನ್ನಂಪೇಟೆ ಮತ್ತು ವೀರಾಜಪೇಟೆ ತಾಲೂಕಿನಲ್ಲಿ ಇ.ಕೆವೈಸಿ ಪ್ರಕ್ರಿಯೆ ಕುಂಠಿತವಾಗಿದೆ.

ಸರ್ವರ್ ಸಮಸ್ಯೆ, ಕೂಲಿ ಕಾರ್ಮಿಕರಿಗೆ ಸಂಕಷ್ಟ

ಪಡಿತರ ಚೀಟಿ ಫಲಾನುಭವಿಗಳ ಇ.ಕೆ.ವೈ.ಸಿ ಪ್ರಕ್ರಿಯೆಗೆ ಸರ್ವರ್ ಸಮಸ್ಯೆಯಿಂದಾಗಿ ಕೂಲಿ ಕಾರ್ಮಿಕರು ಪರದಾಡುವಂತಾಗಿದೆ.ಇ.ಕೆವೈ.ಸಿ ಮಾಡಿಸಲು ಪಡಿತರ ಚೀಟಿದಾರರು ಅಧಾರ್ ಕಾರ್ಡ್ ಹಾಗೂ ಆಧಾರ್ ಕಾರ್ಡ್ ನೊಂದಿಗೆ ಲಿಂಕ್ ಆಗಿರುವ ಮೊಬೈಲ್ ಸಂಖ್ಯೆ (ಒಟಿಪಿ) ಪಡೆಯಲು ಕಡ್ಡಾಯವಾಗಿ ತೆಗೆದುಕೊಂಡು ಹೋಗಬೇಕಿದೆ. ಕೂಲಿ ಬಿಟ್ಟು ನ್ಯಾಯಬೆಲೆ ಅಂಗಡಿಯ ಮುಂದೆ ಕ್ಯೂ ನಿಂತರೂ ಕೂಡ ಇ.ಕೆವೈ.ಸಿ ಪೂರ್ಣಗೊಳ್ಳುವ ವಿಶ್ವಾಸ ಇಲ್ಲ.ವಿದ್ಯಾರ್ಥಿಗಳು ಶಾಲಾ-ಕಾಲೇಜುಗಳಿಗೆ ರಜೆ ಹಾಕಿ ಇ.ಕೆ.ವೈಸಿ ಮಾಡಲು ನ್ಯಾಯಬೆಲೆ ಅಂಗಡಿಯ ಮುಂದೆ ಕ್ಯೂ ನಿಲ್ಲುವಂತಾಗಿದೆ.

ಅದಲ್ಲದೇ ಕೆಲವು ಭಾಗಗಳಲ್ಲಿ ಸಂಜೆ ೩ ರಿಂದ ೬ ಗಂಟೆಯವರೆಗೆ ಮಾತ್ರ ನ್ಯಾಯಬೆಲೆ ಅಂಗಡಿ ತೆರೆದಿರುತ್ತದೆ. ಇನ್ನೂ ಕೆಲವು ಕಡೆಗಳಲ್ಲಿ ಶನಿವಾರ ಮತ್ತು ಭಾನುವಾರ ಮಾತ್ರ ನ್ಯಾಯ ಬೆಲೆ ಅಂಗಡಿಗಳಲ್ಲಿ ಇ.ಕೆವೈಸಿ ಮಾಡಲಾಗುತ್ತಿದೆ. ಸೆಪ್ಟೆಂಬರ್ ೧೫ರಿಂದ ಪಡಿತರ ವಿತರಣೆ ಮಾಡಬೇಕಿದ್ದು,ಅದರೊಂದಿಗೆ ಇ.ಕೆವೈಸಿ ಪ್ರಕ್ರಿಯೆ ಕೂಡ ಮಾಡುವುದು ಸವಾಲಿನ ಕೆಲಸವಾಗಿದೆ.ಜಿಲ್ಲೆಯಲ್ಲಿ ಕಳೆದ ಐದು ವರ್ಷಗಳಲ್ಲಿ ಇ.ಕೆ.ವೈಸಿ ಮಾಡದ ಫಲಾನುಭವಿಗಳ ಇ.ಕೆವೈಸಿ ಪ್ರಕ್ರಿಯೆ ಎಲ್ಲಾ ನ್ಯಾಯ ಬೆಲೆ ಅಂಗಡಿಗಳಲ್ಲಿ ನಡೆಯುತ್ತಿದೆ.ಇ.ಕೆವೈಸಿ ಮಾಡದ ಫಲಾನುಭವಿಗಳ ಮಾಹಿತಿಯನ್ನು ಆಯಾ ವ್ಯಾಪ್ತಿಯ ನ್ಯಾಯ ಬೆಲೆ ಅಂಗಡಿ ಮಾಲೀಕರು ಸದಸ್ಯರಿಗೆ ತಿಳಿಸಿದ್ದಾರೆ. ಇ.ಕೆ.ವೈಸಿ ಪ್ರಕ್ರಿಯೆಯಲ್ಲಿ ಕೊಡಗು ರಾಜ್ಯದಲ್ಲಿ ೧೦ನೇ ಸ್ಥಾನದಲ್ಲಿ ಇದೆ.ಸೆಪ್ಟೆಂಬರ್ ೧೫ರ ನಂತರ ಪಡಿತರ ವಿತರಣೆ ನಡೆಯಲಿದೆ.

-ರಮ, ಪ್ರಬಾರ ಜಂಟಿ ನಿರ್ದೇಶಕರು ಆಹಾರ ಇಲಾಖೆ ಕೊಡಗು ಜಿಲ್ಲೆ.ಕೊಡಗು ಜಿಲ್ಲೆಯಲ್ಲಿರುವ ಪಡಿತರ ಚೀಟಿದಾರರ ಸಂಖ್ಯೆ

ಮಡಿಕೇರಿ ತಾಲೂಕು

ಅಂತ್ಯೋದಯ ಕಾರ್ಡ್: ೧,೮೯೩ ಸದಸ್ಯರು: ೭,೫೪೩, ಬಿಪಿಎಲ್ ಕಾರ್ಡ್: ೨೧,೮೫೦ ಸದಸ್ಯರು: ೭೦,೯೪೪, ಎಪಿಎಲ್ ಕಾರ್ಡ್: ೧೪,೪೮೬ ಸದಸ್ಯರು: ೪೨,೫೩೩, ಒಟ್ಟು ಕಾರ್ಡ್: ೩೮,೨೨೯ ಒಟ್ಟು ಸದಸ್ಯರು: ೧,೨೧,೦೨೦

ಸೋಮವಾರಪೇಟೆ ತಾಲೂಕು

ಅಂತ್ಯೋದಯ ಕಾರ್ಡ್: ೧,೧೬೯ ಸದಸ್ಯರು: ೪,೦೩೪, ಬಿಪಿಎಲ್ ಕಾರ್ಡ್: ೨೨,೨೪೯ ಸದಸ್ಯರು: ೬೭,೬೬೪, ಎಪಿಎಲ್ ಕಾರ್ಡ್: ೫,೬೩೭ ಸದಸ್ಯರು: ೧೫,೫೧೪, ಒಟ್ಟು ಕಾರ್ಡ್: ೨೯,೦೫೫, ಒಟ್ಟು ಸದಸ್ಯರು: ೮೭,೨೧೨

ವೀರಾಜಪೇಟೆ ತಾಲೂಕು

ಅಂತ್ಯೋದಯ ಕಾರ್ಡ್: ೨,೦೧೨ ಸದಸ್ಯರು: ೬,೧೫೮, ಬಿಪಿಎಲ್ ಕಾರ್ಡ್: ೧೭,೦೧೨ ಸದಸ್ಯರು: ೫೩,೦೫೫, ಎಪಿಎಲ್ ಕಾರ್ಡ್: ೭,೩೦೦ ಸದಸ್ಯರು: ೨೦,೪೩೫, ಒಟ್ಟು ಕಾರ್ಡ್: ೨೬,೩೨೪ , ಒಟ್ಟು ಸದಸ್ಯರು: ೭೯,೬೪೮

ಕುಶಾಲನಗರ ತಾಲೂಕು

ಅಂತ್ಯೋದಯ ಕಾರ್ಡ್: ೧,೪೮೧ ಸದಸ್ಯರು: ೫,೦೭೬, ಬಿಪಿಎಲ್ ಕಾರ್ಡ್: ೨೦,೪೧೨ ಸದಸ್ಯರು: ೬೫,೪೫೭, ಎಪಿಎಲ್ ಕಾರ್ಡ್: ೫,೯೪೨ ಸದಸ್ಯರು: ೧೭,೮೨೩, ಒಟ್ಟು ಕಾರ್ಡ್: ೨೭,೮೩೫ ,ಒಟ್ಟು ಸದಸ್ಯರು: ೮೮,೩೫೬

ಪೊನ್ನಂಪೇಟೆ ತಾಲೂಕು

ಅಂತ್ಯೋದಯ ಕಾರ್ಡ್: ೨,೦೫೪ ಸದಸ್ಯರು: ೫,೫೪೬, ಬಿಪಿಎಲ್ ಕಾರ್ಡ್: ೧೪,೯೪೩, ಸದಸ್ಯರು: ೪೧,೮೯೫, ಎಪಿಎಲ್ ಕಾರ್ಡ್: ೮,೫೩೭ ಸದಸ್ಯರು: ೨೧,೮೫೩, ಒಟ್ಟು ಕಾರ್ಡ್: ೨೫,೫೩೪ , ಒಟ್ಟು ಸದಸ್ಯರು: ೬೯,೨೯೪, ಜಿಲ್ಲೆಯ ಒಟ್ಟು: ೧,೪೬,೯೭೭ ಕಾರ್ಡ್, ೪,೪೫,೫೩೦ ಸದಸ್ಯರು