ಗೋಣಿಕೊಪ್ಪ ವರದಿ, ಸೆ. ೧೨: ಕೊಡವ ಬುಡಕಟ್ಟು ಸ್ಥಾನಮಾನ, ಕೊಡವ ಭಾಷೆಯನ್ನು ಸಂವಿಧಾನದ ಎಂಟನೇ ಪರಿಚ್ಚೇಧಕ್ಕೆ ಸೇರಿಸುವುದು, ಕೋವಿ ಹಕ್ಕು ಹಾಗೂ ಕೊಡವ ಲ್ಯಾಂಡ್ ಹಕ್ಕೋತ್ತಾಯಕ್ಕೆ ಹೋರಾಟ ನಡೆಸುತ್ತಿರುವ ಸಂಘಟನೆಗಳ ಬೆಂಬಲಕ್ಕೆ ನಿಲ್ಲುವ ನಿರ್ಧಾರವನ್ನು ಅಮ್ಮತ್ತಿ ಕೊಡವ ಸಮಾಜ ಸಭಾಂಗಣದಲ್ಲಿ ಅಖಿಲ ಕೊಡವ ಸಮಾಜ ಆಯೋಜಿಸಿದ್ದ ವಿಶೇಷ ಸಭೆಯಲ್ಲಿ ತೆಗೆದುಕೊಳ್ಳಲಾಯಿತು.

ಅಖಿಲ ಕೊಡವ ಸಮಾಜ ಅಧ್ಯಕ್ಷ ಪರದಂಡ ಸುಬ್ರಮಣಿ ಕಾವೇರಪ್ಪ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ, ಅರೆಭಾಷೆ ಸಮುದಾಯದ ಕೊಡಗು ಗೌಡ ಸಮಾಜದ ಒಕ್ಕೂಟದ ಸಭೆಯಲ್ಲಿ ಕೊಡವರ ಹಕ್ಕುಗಳ ವಿರುದ್ದ ತೆಗೆದುಕೊಂಡ ನಿರ್ಣಯದ ಬಗ್ಗೆ ಚರ್ಚಿಸಿ ಖಂಡಿಸಲಾಯಿತು. ಈ ಬಗ್ಗೆ ಪೊಲೀಸ್ ವರಿಷ್ಠಾಧಿಕಾರಿಗೆ ಸೂಕ್ತ ಮನವಿ ಸಲ್ಲಿಸುವಂತೆ ನಿರ್ಧಾರ ತೆಗೆದುಕೊಳ್ಳಲಾಯಿತು. ಕೊಡವಾಮೆ ಪೋಷಣೆಗೆ ಮುಂದಾಗಿರುವ ಸಂಘಟನೆಗಳಿಗೆ ಅಖಿಲ ಕೊಡವ ಸಮಾಜದ ಬೆಂಬಲ ನೀಡಲು ನಿರ್ಣಯ ತೆಗೆದುಕೊಳ್ಳಲಾಯಿತು.

ಕೊಡವರ ಹಕ್ಕುಗಳ ಕುರಿತು ಸರ್ಕಾರ ಮತ್ತು ನ್ಯಾಯಾಲಯದಲ್ಲಿ ಬೇಡಿಕೆ ಇಟ್ಟಿರುವ ಬಗ್ಗೆ ಪಿಪಿಟಿ ಮೂಲಕ ವಿವರಣೆ ನೀಡಿರುವುದು ಹಾಗೂ ಕೊಡವರ ಹಕ್ಕೊತ್ತಾಯಗಳಿಂದಾಗಿ ೪ಏಳನೇ ಪುಟಕ್ಕೆ

ಅರೆಭಾಷೆ ಗೌಡ ಸಮುದಾಯ ಸೇರಿದಂತೆ ಇತರೆ ಸಮುದಾಯದ ಮತ್ತು ಮೂಲ ನಿವಾಸಿಗಳ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವ ಬಗ್ಗೆ ಸಮುದಾಯಗಳಿಗೆ ಮಾರಕ ಎಂದು ನ್ಯಾಯಾಂಗ ಹೋರಾಟದ ನಿರ್ಧಾರ ತೆಗೆದುಕೊಂಡಿರುವ ಬಗ್ಗೆ ಆಕ್ರೋಶ ವ್ಯಕ್ತವಾಯಿತು. ವಿವಿದ ಕೊಡವ ಸಮಾಜಗಳ ಅಧ್ಯಕ್ಷರು, ಪದಾಧಿಕಾರಿಗಳು ಈ ಬಗ್ಗೆ ಅಸಮಧಾನ ವ್ಯಕ್ತಪಡಿಸಿ ಸೂಕ್ತ ಹೋರಾಟಕ್ಕೆ ಒತ್ತಾಯಿಸಿದರು.

ಕೊಡವ ಜನಾಂಗದ ಭದ್ರತೆಗಾಗಿ ಸಂವಿಧಾನದ ಕಾನೂನು ಚೌಕಟ್ಟಿನಲ್ಲಿರುವ ಕೊಡವ ಸಂಘಟನೆಗಳು ಕಾನೂನು ಬದ್ಧ ಸವಲತ್ತಿಗೆ ಜನಾಂಗದ ಅಸ್ತಿತ್ವ, ಉಳಿವು, ಭದ್ರತೆಗೆ ಮುಂದಾಗಿರುವ ಬಗ್ಗೆ ತಿಳಿಸಲು ನಿರ್ಣಯ ತೆಗೆದುಕೊಳ್ಳಲಾಯಿತು. ಆರ್ಥಿಕವಾಗಿ ಹಿಂದುಳಿದಿರುವ ಕೊಡವರಿಗೆ ಕೇಂದ್ರ ಸರ್ಕಾರದ ಹಿಂದುಳಿದ ವರ್ಗ ೩ ಎ ಸೌಲಭ್ಯ, ಬುಡಕಟ್ಟು ಸ್ಥಾನಮಾನಕ್ಕಾಗಿ ಪರಿಶಿಷ್ಠ ಪಂಗಡ ಮೀಸಲಾತಿ, ಕೋವಿ ಹಕ್ಕು ವಿನಾಯಿತಿ ವಿಸ್ತರಣೆಗಾಗಿ ಜನಾಂಗದ ರಕ್ಷಣೆಯ ಭಾಗವಾಗಿದೆ. ಕೋವಿ ಕೊಡವರಿಗೆ ಪವಿತ್ರ ಭಾವನೆ ಹೊಂದಿರುವ ವಿಶೇಷತೆ ಹೊಂದಿರುವ ಬಗ್ಗೆ ಸರ್ಕಾರಕ್ಕೆ ಮನದಟ್ಟು ಮಾಡಲು ನಿರ್ಧಾರ ತೆಗೆದುಕೊಳ್ಳಲಾಯಿತು.

ಕೊಡವ ಜನಾಂಗದ ಬೇಡಿಕೆ ವಿರುದ್ದವಾಗಿ ಸುಳ್ಳು ಮತ್ತು ಬೇರೆ ಸಮುದಾಯಗಳಿಗೆ ಕೊಡವರ ಮೇಲೆ ಹೊಟ್ಟೆಕಿಚ್ಚು ಮೂಡಿಸುವ ಹುನ್ನಾರವಾಗಿದೆ. ಕೊಡವರನ್ನು ಕೆಟ್ಟ ದೃಷ್ಠಿಯಲ್ಲಿ ಕಾಣುವಂತೆ ಮಾಡುವ ಪ್ರಯತ್ನವಾಗಿದೆ. ಜಾತಿ ವೈಷಮ್ಯದ ಘೋರ ಭಾವನೆಯನ್ನು ಬಿತ್ತುವ ಕಾರ್ಯದ ಇದಾಗಿದ್ದು, ಇದರ ವಿರುದ್ಧ ಕ್ರಮಕೈಗೊಳ್ಳುವ ಬಗ್ಗೆ ನಿರ್ಧರಿಸಲಾಯಿತು.

ಕೊಡವ ಮತಗಳಿಂದ ಗೆದ್ದ ಮಾಜಿ ಶಾಸಕ ಹಾಗೂ ಹಾಲಿ ಶಾಸಕ ಸಭೆಯಲ್ಲಿ ಪಾಲ್ಗೊಂಡಿದ್ದರೂ ಕೂಡ ಇಂತಹ ನಿರ್ಧಾರಗಳಿಗೆ ಪ್ರತಿರೋಧ ತೋರದಿರುವುದು ಸಹಮತ ಸೂಚಿಸಿರುವುದಲ್ಲದೆ, ಈಗಿನ ಶಾಸಕರು ಕೊಡವ ಜನಾಂಗದ ಕೋರಿಕೆ ವಿರುದ್ದವಾಗಿ ಸಹಕಾರ ನೀಡುವುದಾಗಿ ಘೋಷಿಸಿರುವುದು ಶೋಚನೀಯ ಎಂಬ ಬಗ್ಗೆ ಕೊಡವರು ದೃಢ ನಿರ್ಧಾರ ತೆಗೆದುಕೊಳ್ಳಲು ನಿರ್ಧಾರ ತೆಗೆದುಕೊಳ್ಳಲಾಯಿತು.

ಕೊಡವ ಸಾಂಪ್ರದಾಯಿಕ ಧಿರಿಸು, ಆಭರಣ, ಆಚರಣೆಗಳನ್ನು ಅನುಕರಣೆ ಮಾಡಿಕೊಂಡು ತಮ್ಮದೆಂದು ಬಿಂಬಿಸುವುದು, ಪೀಚೆಕತ್ತಿ ಕೂಡ ನಮ್ಮದೇ ಎಂದು ಬಿಂಬಿಸಿಕೊಳ್ಳುತ್ತಿರುವುದು ಕೂಡ ಅಸಹ್ಯ ಭಾವನೆ ಮೂಡಿಸುತ್ತಿದೆ ಎಂದು ಪ್ರಮುಖರು ಆಕ್ಷೇಪ ವ್ಯಕ್ತ ಪಡಿಸಿದರು. ಕಟ್ಟೆಮಾಡು ಮಹಾದೇವರ ದೇವಸ್ಥಾನದಲ್ಲಿ ಕೊಡವ ಉಡುಪಿಗೆ ವಿರೋಧ ವ್ಯಕ್ತಪಡಿಸಿರುವುದು ಕೂಡ ನಡೆದಿದೆ. ಎಲ್ಲ ಹುನ್ನಾರವನ್ನು ಗಂಭೀರವಾಗಿ ಪರಿಗಣಿಸಿ ಕಾನೂನಿನ ಕ್ರಮ ಜರುಗಿಸಲು ಒತ್ತಾಯಿಸಲಾಯಿತು.

ಕೆಟ್ಟ ಭಾವನೆಗಳಿಂದ ಕೊಡವರ ಮೇಲೆ ಇತರೆ ಸಮುದಾಯಗಳ ನಡುವೆ ಸಾಮರಸ್ಯಕ್ಕೆ ತೊಂದರೆಯಾಗುತ್ತಿರುವ ಬಗ್ಗೆ, ದುರುದ್ದೇಶದ ನಡೆ ಬಗ್ಗೆ ಭಾರತೀಯ ನ್ಯಾಯ ಸಂಹಿತೆ ಅನ್ವಯ ಕೃತ್ಯ ಎಂದು ಸಾಬಿತಾಗಿದ್ದಲ್ಲಿ ಕಾನೂನು ಕ್ರಮಕೈಗೊಳ್ಳಲು ನಿರ್ಧಾರ ತೆಗೆದುಕೊಳ್ಳಲಾಯಿತು.

ಕೊಡವರ ವಿರುದ್ದ ಷಡ್ಯಂತ್ರ ರೂಪಿಸುತ್ತಿರುವ ವಿದ್ಯಾಧರ್ ಅವರನ್ನು ಕೊಡಗು ಜಿಲ್ಲೆಯಿಂದ ಗಡಿಪಾರು ಮಾಡಲು ಒತ್ತಾಯಿಸಲು ಸಭೆ ಒತ್ತಾಯಿಸಿತು. ಇವರ ವಿರುದ್ದ ಈ ಹಿಂದೆ ನಡೆಸಿದ್ದ ಬಂದ್ ಕೂಡ ಯಶಸ್ವಿಯಾಗಿದ್ದು, ಗಡಿಪಾರು ಅವಶ್ಯ ಎಂದು ಒತ್ತಾಯಿಸಲಾಯಿತು.

ಸಭೆಯಲ್ಲಿ ಯುಕೋ ಸಂಘಟನೆ ಅಧ್ಯಕ್ಷ ಕೊಕ್ಕಲೆಮಾಡ ಮಂಜು ಚಿಣ್ಣಪ್ಪ, ಜಬ್ಬೂಮಿ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಚೊಟ್ಟೆಕ್‌ಮಾಡ ರಾಜೀವ್ ಬೋಪಯ್ಯ, ವೀರಾಜಪೇಟೆ ಕೊಡವ ಸಮಾಜ ಕಾರ್ಯದರ್ಶಿ ಮಾಳೇಟಿರ ಶ್ರೀನಿವಾಸ್, ಪ್ರಮುಖರಾದ ಕೈಬಿಲಿರ ಹರೀಶ್, ಪೊರಿಮಂಡ ದಿನಮಣಿ, ಜಮ್ಮಡ ಗಣೇಶ್ ಅಯ್ಯಣ್ಣ ಸೇರಿದಂತೆ ಪ್ರಮುಖರು ಅಭಿಪ್ರಾಯ ವ್ಯಕ್ತಪಡಿಸಿದರು.

ಉಪಾಧ್ಯಕ್ಷ ಪೋರೆರ ಬಿದ್ದಪ್ಪ, ಕಾರ್ಯದರ್ಶಿ ಚೊಟ್ಟಂಡ ಪ್ರಭು ಸೋಮಯ್ಯ, ಜಂಟಿ ಕಾರ್ಯದರ್ಶಿ ಮನ್ನೇರ ಸರಸ್ವತಿ, ಖಜಾಂಚಿ ಕಾಯಪಂಡ ಸುನಿಲ್, ಕಾನೂನು ಸಲಹೆಗಾರ ಕುಟ್ಟಂಡ ಜಿ ಉತ್ತಪ್ಪ, ಅಮ್ಮತ್ತಿ ಕೊಡವ ಸಮಾಜ ಅಧ್ಯಕ್ಷ ಐನಂಡ ಪ್ರಕಾಶ್ ಗಣಪತಿ, ಕಾರ್ಯಕಾರಿ ಮಂಡಳಿ ಪ್ರಮುಖರು ಉಪಸ್ಥಿತರಿದ್ದರು.