ಮುಳ್ಳೂರು, ಸೆ. ೧೨: ಗೌರಿ ಗಣೇಶ ಹಬ್ಬ ಹಿನ್ನೆಲೆ ಸಮೀಪದ ಕೊಡ್ಲಿಪೇಟೆ ಪ.ಪೂ. ಕಾಲೇಜು ಹಾಗೂ ಪ್ರೌಢಶಾಲಾ ವಿಭಾಗ ಮತ್ತು ಶಾಲೆಯ ಹೇಮಾವತಿ ಇಕೋ ಕ್ಲಬ್ ವತಿಯಿಂದ ಪರಿಸರ ಸ್ನೇಹಿ ಗಣೇಶೋತ್ಸವ ಜಾಗೃತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.
ಶಾಲೆಯಲ್ಲಿ ವಿದ್ಯಾರ್ಥಿಗಳು ವಿವಿಧ ಮಾದರಿಯ ಮಣ್ಣಿನಿಂದ ತಯಾರಿಸಿದ ಪರಿಸರ ಸ್ನೇಹಿ ಗಣಪ ಮೂರ್ತಿಗಳ ಪ್ರದರ್ಶನ ಗಮನ ಸೆಳೆಯಿತು. ಈ ಸಂದರ್ಭ ಪರಿಸರ ಸ್ನೇಹಿ ಗಣೇಶ ಮೂರ್ತಿಯ ಪ್ರತಿಷ್ಠಾಪನೆಯ ಕುರಿತು ಮಾಹಿತಿ ನೀಡಿದ ಶಾಲಾ ಮುಖ್ಯ ಶಿಕ್ಷಕ ಚಂದ್ರಶೇಖರ್ ಅಡ್ಮಿನಿ, ಪರಿಸರಕ್ಕೆ ಹಾನಿಕಾರವಾದ ರಾಸಾಯನಿಕ ಬಣ್ಣದ ಮೂರ್ತಿಗಳನ್ನು ತ್ಯಜಿಸಿ ಇದರ ಬದಲಿಗೆ ಪರಿಸರಕ್ಕೆ ಪೂರಕವಾದ ಜೇಡಿ ಮಣ್ಣಿನಿಂದ ತಯಾರಿಸಿದ ಗಣಪನ ಮೂರ್ತಿಯನ್ನು ತಯಾರಿಸಿ ಪ್ರತಿಷ್ಠಾಪಿಸುವ ಮೂಲಕ ಹಬ್ಬವನ್ನು ಆಚರಿಸುವಂತೆ ಸಲಹೆ ನೀಡಿದ ಅವರು ಶಾಲಾ ಮಕ್ಕಳು ಪರಿಸರ ಸ್ನೇಹಿ ಗಣಪನ ಮೂರ್ತಿಯನ್ನು ಜೇಡಿ ಮಣ್ಣಿನಿಂದ ತಯಾರಿಸಿ ಮಕ್ಕಳಲ್ಲಿರುವ ಪರಿಸರ ಕಾಳಜಿಯನ್ನು ಶ್ಲಾಘಿಸಿದರು.
ಹೇಮಾವತಿ ಇಕೋ ಕ್ಲಬ್ ಸಂಚಾಲಕಿ ಎಂ.ಪಿ. ಶಿವಕುಮಾರಿ ಮಾತನಾಡಿದರು. ಶಿಕ್ಷಕಿ ಬಿ.ವಿ. ಸುಮಾ ವಿದ್ಯಾರ್ಥಿಗಳಿಗೆ ಪರಿಸರ ಪ್ರತಿಜ್ಞಾ ವಿಧಿ ಬೋಧಿಸಿದರು. ವಿದ್ಯಾರ್ಥಿಗಳು ಪರಿಸರ ಸ್ನೇಹಿ ಗಣೇಶೋತ್ಸವ ಆಚರಣೆ ಕುರಿತು ಘೋಷಣೆಗಳನ್ನು ಕೂಗಿ ಜಾಗೃತಿಗೊಳಿಸಿದರು
ಈ ಸಂದರ್ಭ ವಿದ್ಯಾಸಂಸ್ಥೆ ಆಡಳಿತಾಧಿಕಾರಿ ಎಂ.ಎಸ್. ಅಬ್ದುಲ್ ರಬ್, ಶಿಕ್ಷಕರಾದ ಕಿರಣ್ ಕುಮಾರ್, ಎ.ಪಿ. ಸುನೀಲ್, ಯು.ಡಿ. ಮಂಜುನಾಥ್, ಕಿಶೋರ್ ಕುಮಾರ್ ಉಪನ್ಯಾಸಕ ಸತೀಶ್, ಸಿಬ್ಬಂದಿ ಪವನ್ ಕುಮಾರ್, ಶ್ವೇತಾ ಮುಂತಾದವರು ಇದ್ದರು.
- ಭಾಸ್ಕರ್ ಮುಳ್ಳೂರು