ಕಣಿವೆ, ಸೆ. ೧೨: ಈ ಹಿಂದಿನ ಅನೇಕ ವರ್ಷಗಳಿಂದ ಗೌರಿ - ಗಣೇಶ ಹಬ್ಬದ ಸಂದರ್ಭದಲ್ಲಿ ಮೈದುಂಬಿ ಹರಿಯುತ್ತಿದ್ದ ನದಿಗಳು ಈ ಬಾರಿ ಮೌನಕ್ಕೆ ಶರಣಾಗಿವೆ.
ಮುಂಗಾರು ಮಳೆಯ ಕೊರತೆಯಿಂದಾಗಿ ಕಾವೇರಿ ಹಾಗೂ ಹಾರಂಗಿ ನದಿಗಳು ಮೈದುಂಬಿ ಹರಿಯಲಿಲ್ಲ. ಭೂಮಿಯ ಅಂತರ್ಜಲವೂ ವೃದ್ಧಿಯಾಗಲಿಲ್ಲ. ಈ ಹಿಂದಿನ ಅನೇಕ ವರ್ಷಗಳಿಂದ ಗಣೇಶ ಮೂರ್ತಿಯ ವಿಸರ್ಜನೆ ಸಂದರ್ಭ ನದಿ ದಂಡೆಗಳಲ್ಲಿ ನೀರು ಯಥೇಚ್ಛವಾಗಿ ಹರಿಯುತ್ತಿತ್ತು.
ಆದರೆ ಈ ಬಾರಿ ನದಿಗಳಲ್ಲಿ ನೀರಿನ ಹರಿವು ಗಣನೀಯವಾಗಿ ಕ್ಷೀಣಿಸಿರುವ ಕಾರಣ ಕಾವೇರಿ ಹಾಗೂ ಹಾರಂಗಿ ಎರಡೂ ನದಿಗಳು ಮಳೆಗಾಲದ ಗೌರಿಯ ದಿನಗಳಲ್ಲಿ ನೀರಿಲ್ಲದೇ ಬರಡಾಗುತ್ತಿವೆ. ಸಾಮಾನ್ಯವಾಗಿ ತವರು ಮನೆಗಳಿಗೆ ಗೌರಿ ಹಬ್ಬದ ಆಚರಣೆಗೆ ಬರುತ್ತಿದ್ದ ನದಿ ತೀರದ ಹೆಣ್ಣುಮಕ್ಕಳು ನದಿಗೆ ಬಂದು ಮನೆಗಳಲ್ಲಿನ ಬಟ್ಟೆ - ಬರೆ, ಪಾತ್ರೆಗಳನ್ನು ಸ್ವಚ್ಛಗೊಳಿಸಿ ವಿಹರಿಸುತ್ತಿದ್ದರು. ಆದರೆ ಈ ಬಾರಿ ಗೌರಿ - ಗಣೇಶನ್ನು ಸ್ವಾಗತಿಸಿಕೊಳ್ಳಲು ಕೂಡ ನದಿಯಲ್ಲಿ ನೀರಿಲ್ಲದ ಸ್ಥಿತಿ ಒದಗಿದೆ.
ಕುಶಾಲನಗರ ತಾಲೂಕು ವ್ಯಾಪ್ತಿಯಲ್ಲಿನ ಪ್ರಮುಖ ಎರಡು ಜೀವ ಸೆಲೆಗಳಾದ ಕಾವೇರಿ ಹಾಗೂ ಹಾರಂಗಿ ನದಿಗಳಲ್ಲಿ ನೀರಿನ ಹರಿವು ಗಣನೀಯ ಪ್ರಮಾಣದಲ್ಲಿ ಕುಸಿತಕಂಡಿದೆ.