ಮಡಿಕೇರಿ, ಸೆ. ೧೨: ಲಯನ್ಸ್ ಸಂಸ್ಥೆ ಮಡಿಕೇರಿ ವತಿಯಿಂದ ಶಿಕ್ಷಕರ ದಿನಾಚರಣೆ ಹಾಗೂ ವಲಯಾಧ್ಯಕ್ಷರ ಭೇಟಿ ಕಾರ್ಯಕ್ರಮವನ್ನು ಆಚರಿಸಲಾಯಿತು.

ಕಾರ್ಯಕ್ರಮದಲ್ಲಿ ಶಿಕ್ಷಣ ಕ್ಷೇತ್ರಕ್ಕೆ ನೀಡಿರುವ ಅನುಪಮ ಸೇವೆಯನ್ನು ಪರಿಗಣಿಸಿ ಜನರಲ್ ತಿಮ್ಮಯ್ಯ ಪಬ್ಲಿಕ್ ಶಾಲೆಯ ಪ್ರಾಂಶುಪಾಲೆ ಸವಿತಾ ಎಂ.ಜಿ. ಅವರನ್ನು ಲಯನ್ಸ್ ಸಂಸ್ಥೆಯ ವತಿಯಿಂದ ಸನ್ಮಾನಿಸಲಾಯಿತು.

ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಸನ ಹಾಗೂ ಉತ್ತಮ ಸಮಾಜ ನಿರ್ಮಾಣದಲ್ಲಿ ಶಿಕ್ಷಕರ ಜವಾಬ್ದಾರಿ ಮಹತ್ವದ್ದಾಗಿದೆ ಎಂದು ಅವರು ಅಭಿಪ್ರಾಯಪಟ್ಟರು. ಇದೇ ಸಂದರ್ಭ ಲಯನ್ಸ್ ಸಂಸ್ಥೆ ಮಡಿಕೇರಿಯ ಸದಸ್ಯೆ ಹಾಗೂ ಮಕ್ಕಂದೂರು ಪ್ರೌಢಶಾಲೆಯ ಶಿಕ್ಷಕಿ ವನಜಾಕ್ಷಿ ದಾಮೋದರ್ ಅವರನ್ನು ಸಹ ಶಿಕ್ಷಕರ ದಿನಾಚರಣೆಯ ಪ್ರಯುಕ್ತ ಗೌರವಿಸಲಾಯಿತು.

ಕಾರ್ಯಕ್ರಮದಲ್ಲಿ ವಲಯಾಧ್ಯಕ್ಷ ಲಯನ್ ಮದನ್ ಮಾದಯ್ಯ ಬಿ.ಬಿ. ಅವರು ವಲಯದ ವಿವಿಧ ಲಯನ್ಸ್ ಸಂಸ್ಥೆಗಳ ಅಧ್ಯಕ್ಷರುಗಳಿಗೆ ಪ್ರಮಾಣ ಪತ್ರಗಳನ್ನು ವಿತರಿಸಿ ಮಾತನಾಡಿದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಲಯನ್ಸ್ ಅಧಿಕಾರಿಗಳಾದ ಸುಮನ್ ಬಾಲಚಂದ್ರ ಹಾಗೂ ಡಾ. ಪ್ರವೀಣ್ ದೇವರಗುಂಡ, ಲಯನ್ಸ್ ಕ್ಲಬ್ ಮಡಿಕೇರಿ ಅಧ್ಯಕ್ಷ ಮೋಹನ್ ಕುಮಾರ್ ಎಲ್., ಕಾರ್ಯದರ್ಶಿ ಮಧುಕರ್ ಕೆ. ಹಾಗೂ ಖಜಾಂಚಿ ನವೀನ್ ಅಂಬೆಕಲ್ಲು, ಸುಷ್ಮಾ ಬೊಳ್ಳಮ್ಮ ಸೇರಿದಂತೆ ಗಣ್ಯರು ಉಪಸ್ಥಿತರಿದ್ದರು.

ವಲಯದ ಸೋಮವಾರಪೇಟೆ, ಸುಂಟಿಕೊಪ್ಪ ಹಾಗೂ ಕುಶಾಲನಗರ ಲಯನ್ಸ್ ಸಂಸ್ಥೆಗಳ ಅಧ್ಯಕ್ಷರು, ಪದಾಧಿಕಾರಿಗಳು ಹಾಗೂ ಸದಸ್ಯರು, ಮಡಿಕೇರಿ ಲಯನ್ಸ್ ಸಂಸ್ಥೆಯ ಪದಾಧಿಕಾರಿಗಳು, ಸದಸ್ಯರು ಹಾಗೂ ಹಿತೈಷಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.