ವೀರಾಜಪೇಟೆ, ಸೆ. ೧೨: ಕಸ್ತೂರಿರಂಗನ್ ವರದಿ ಜಾರಿಯಾದರೆ ಕೊಡಗಿನ ರೈತರು ಹಾಗೂ ಸ್ಥಳೀಯರ ಜೀವನೋಪಾಯಕ್ಕೆ ತೊಂದರೆಯಾಗುವ ಸಾಧ್ಯತೆ ಇದೆ ಎಂದು ಆಕ್ಷೇಪ ವ್ಯಕ್ತಪಡಿಸಿರುವ ಕೆದಮುಳ್ಳೂರು ಗ್ರಾಮಸ್ಥರು, ವರದಿ ಅನುಷ್ಠಾನಕ್ಕೆ ವಿರೋಧಿಸಿ ಗ್ರಾಮಸ್ಥರ ಸಹಿ ಸಂಗ್ರಹಿಸಿ ಕೊಡಗು ಜಿಲ್ಲಾಧಿಕಾರಿ ಹಾಗೂ ಅರಣ್ಯ ಸಚಿವರಿಗೆ ಆಕ್ಷೇಪಣಾ ಪತ್ರ ಸಲ್ಲಿಸಲು ಒಮ್ಮತದ ನಿರ್ಧಾರ ಕೈಗೊಂಡಿದ್ದಾರೆ.
ಕೆದಮುಳ್ಳೂರು ಗ್ರಾಮ ಪಂಚಾಯಿತಿಯ ೨೦೨೬-೨೭ನೇ ಸಾಲಿನ ಗ್ರಾಮಸಭೆ ಹಾಗೂ ಕಸ್ತೂರಿರಂಗನ್ ವರದಿ ಕುರಿತು ಆಕ್ಷೇಪಣೆ ಸಲ್ಲಿಸುವ ಸಭೆ ಪಂಚಾಯಿತಿ ಸಭಾಂಗಣದಲ್ಲಿ ನಡೆಯಿತು
ಕಸ್ತೂರಿರಂಗನ್ ವರದಿ ಕುರಿತು ಚರ್ಚೆ ವೇಳೆ ಸ್ಥಳೀಯರಾದ ಚೋಟು ಬಿದ್ದಪ್ಪ ಮಾತನಾಡಿ, ತಾವು ಈ ಭಾಗದ ಮೂಲನಿವಾಸಿಗಳಾಗಿದ್ದು, ಪರಿಸರ ಸಂರಕ್ಷಣೆ ತಮ್ಮ ಬದುಕಿನೊಂದಿಗೆ ಬೆಸೆದುಕೊಂಡಿದೆ. ಇದುವರೆಗೆ ಸ್ಥಳೀಯರಿಂದ ಪರಿಸರಕ್ಕೆ ಯಾವುದೇ ಹಾನಿಯಾಗಿಲ್ಲ. ಆದರೆ ಕಸ್ತೂರಿರಂಗನ್ ವರದಿ ಜಾರಿಯಾದಲ್ಲಿ ಮುಂದಿನ ದಿನಗಳಲ್ಲಿ ಸ್ಥಳೀಯರು ಹಾಗೂ ರೈತರಿಗೆ ಹಲವು ರೀತಿಯ ತೊಂದರೆ ಎದುರಾಗುವ ಸಾಧ್ಯತೆ ಇದೆ ಎಂದು ಆತಂಕ ವ್ಯಕ್ತಪಡಿಸಿದರು.
ನಿಕಟಪೂರ್ವ ಸದಸ್ಯ ಪರಮೇಶ್ವರ ಮಾತನಾಡಿ, ಕಸ್ತೂರಿರಂಗನ್ ವರದಿ ರೈತ ವಿರೋಧಿಯಾಗಿದೆ. ಇದಕ್ಕೆ ತಮ್ಮ ಹಾಗೂ ಸ್ಥಳೀಯರ ಸಂಪೂರ್ಣ ವಿರೋಧವಿದ್ದು, ಕೊಡಗಿನ ಭೌಗೋಳಿಕ ಹಾಗೂ ಸಾಮಾಜಿಕ ಪರಿಸ್ಥಿತಿಗೆ ಅನುಗುಣವಾಗಿ ಕೇರಳ ಮಾದರಿಯನ್ನು ಪರಿಗಣಿಸುವ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟರು.
ಕೆಡಿಪಿ ಸದಸ್ಯ ಮಾಳೇಟಿರ ಪ್ರಶಾಂತ್ ಉತ್ತಪ್ಪ ಮಾತನಾಡಿ, ಕಸ್ತೂರಿರಂಗನ್ ವರದಿ ಕೊಡಗಿನ ರೈತರಿಗೆ ಮಾರಕವಾಗುವ ಸಾಧ್ಯತೆ ಇದೆ. ರೈತರು ತಮ್ಮ ತೋಟಗಳಿಗೆ ತೆರಳುವುದು, ಕೋವಿ ಹಕ್ಕು ಸೇರಿದಂತೆ ಹಲವು ವಿಚಾರಗಳಲ್ಲಿ ಸ್ಥಳೀಯರಿಗೆ ಸಮಸ್ಯೆಯಾಗಬಹುದು ಎಂದು ಆತಂಕ ವ್ಯಕ್ತಪಡಿಸಿದರು.
ಕೆದಮುಳ್ಳೂರು ಹಾಗೂ ಪಾಲಂಗಾಲ ಗ್ರಾಮಗಳನ್ನು ಪರಿಸರ ಸೂಕ್ಷ್ಮ ವಲಯ ವ್ಯಾಪ್ತಿಗೆ ಗುರುತಿಸಿರುವ ಕುರಿತು ಪ್ರಸ್ತಾಪಿಸಿದ ಅವರು, ಈ ಹಿಂದೆ ಪ್ರಕಟವಾದ ಕರಡು ಅಧಿಸೂಚನೆಗಳಲ್ಲಿ ಗ್ರಾಮಗಳ ಸ್ಥಿತಿಯಲ್ಲಿ ಬದಲಾವಣೆ ಕಂಡುಬAದಿರುವುದು ಗ್ರಾಮಸ್ಥರಲ್ಲಿ ಆತಂಕ ಮೂಡಿಸಿದೆ ಎಂದರು.
ನೋಡಲ್ ಅಧಿಕಾರಿ ಡಾ. ರಾಕೇಶ್ ಮಾತನಾಡಿ, ಕಸ್ತೂರಿರಂಗನ್ ವರದಿಯಡಿ ಪ್ರದೇಶವೊಂದು ಸೂಕ್ಷö್ಮ ವಲಯವಾಗಿ ಗುರುತಾದರೆ ವರದಿಯಲ್ಲಿ ಸೂಚಿಸಿರುವ ನಿಯಮಗಳ ಆಧಾರದಲ್ಲಿ ಕಾರ್ಯನಿರ್ವ ಹಿಸಲಾಗುತ್ತದೆ. ಆದರೆ ಅನುಷ್ಠಾನದ ಸಂದರ್ಭದಲ್ಲಿ ಸ್ಥಳೀಯವಾಗಿ ಯಾವ ರೀತಿಯ ಕ್ರಮ ಕೈಗೊಳ್ಳಲಾಗುತ್ತದೆ ಎಂಬುದು ಮುಂದಿನ ಪ್ರಕ್ರಿಯೆಯಲ್ಲಿ ಸ್ಪಷ್ಟವಾಗಲಿದೆ. ಆದ್ದರಿಂದ ವರದಿಯ ಕುರಿತು ಸಂಪೂರ್ಣ ಮಾಹಿತಿ ಪಡೆದುಕೊಂಡು ಅಭಿಪ್ರಾಯ ವ್ಯಕ್ತಪಡಿಸುವುದು ಅಗತ್ಯ ಎಂದರು.
ಬೆAಗಳೂರಿನ ಸರ್ಕಾರೇತರ ಸಂಸ್ಥೆಯ ಅಧಿಕಾರಿ ಬಾಲಾಜಿ ಅವರು ಪಂಚಾಯಿತಿ ವ್ಯಾಪ್ತಿಯಲ್ಲಿ ಹೊಗೆರಹಿತ ಒಲೆ ನಿರ್ಮಾಣ ಯೋಜನೆಯ ಕುರಿತು ಗ್ರಾಮಸ್ಥರಿಗೆ ಮಾಹಿತಿ ನೀಡಿದರು.
ಚೆಸ್ಕಾಂ ಅಭಿಯಂತರ ಸೋಮೇಶ್ ಮಾತನಾಡಿ, ತಾಲೂಕಿನಲ್ಲಿ ನಡೆಯುತ್ತಿರುವ ವಿದ್ಯುತ್ ಉನ್ನತೀಕರಣ ಕಾಮಗಾರಿಗಳಿಂದ ತಾತ್ಕಾಲಿಕವಾಗಿ ಸಮಸ್ಯೆ ಉಂಟಾಗಿದ್ದು, ಮುಂದಿನ ದಿನಗಳಲ್ಲಿ ಸಮಸ್ಯೆ ಬಗೆಹರಿಯಲಿದೆ ಎಂದರು.
ಕೆದಮುಳ್ಳೂರು ಭಾಗದ ವಿದ್ಯುತ್ ಸಮಸ್ಯೆ ನಿವಾರಿಸುವ ಉದ್ದೇಶದಿಂದ ಸುಮಾರು ಎರಡು ಎಕರೆ ಜಾಗದಲ್ಲಿ ಉಪವಿದ್ಯುತ್ ಕೇಂದ್ರ ನಿರ್ಮಿಸುವ ಯೋಜನೆ ಇದ್ದು, ಇದಕ್ಕಾಗಿ ಸೂಕ್ತ ಜಾಗ ಗುರುತಿಸಿ ನೀಡುವಂತೆ ಗ್ರಾಮಸ್ಥರಲ್ಲಿ ಮನವಿ ಮಾಡಿದರು.
ಅರಣ್ಯ, ಕಂದಾಯ, ಅಬಕಾರಿ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದು, ಗ್ರಾಮಸ್ಥರ ಅಹವಾಲುಗಳನ್ನು ಸ್ವೀಕರಿಸಿದರು. ಪಿಡಿಒ ಮಣಿ ಅವರು ರಾಜ್ಯ ಸರ್ಕಾರದ ವಿವಿಧ ಮಹತ್ವಾಕಾಂಕ್ಷಿ ಯೋಜನೆಗಳ ಕುರಿತು ಮಾಹಿತಿ ನೀಡಿ, ಅರ್ಹರು ಯೋಜನೆಗಳ ಸದುಪಯೋಗ ಪಡೆದುಕೊಳ್ಳುವಂತೆ ಮನವಿ ಮಾಡಿದರು.
ತಾಲೂಕು ಲೋಕೋಪಯೋಗಿ ಇಲಾಖೆಯ ಸಹಾಯಕ ಕಾರ್ಯಪಾಲಕ ಅಭಿಯಂತರ ಪಿ. ಸತೀಶ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ನೋಡಲ್ ಅಧಿಕಾರಿ ಹಾಗೂ ವೈದ್ಯಾಧಿಕಾರಿ ಡಾ. ರಾಕೇಶ್, ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಪಿ.ವಿ. ಜಾನ್ಸನ್, ಪಂಚಾಯಿತಿಯ ನಿಕಟಪೂರ್ವ ಸದಸ್ಯರು, ಪಿಡಿಒ ಮಣಿ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು. ಗ್ರಾಮ ಪಂಚಾಯಿತಿಯ ನಿಕಟಪೂರ್ವ ಸದಸ್ಯೆ ವಿಮಲಾ ಪ್ರಾರ್ಥಿಸಿದರು. ಪಂಚಾಯಿತಿ ಸಿಬ್ಬಂದಿ, ನಿಕಟಪೂರ್ವ ಸದಸ್ಯರು, ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ಗ್ರಾಮಸ್ಥರು ಸಭೆಯಲ್ಲಿ ಭಾಗವಹಿಸಿದ್ದರು.