ವೀರಾಜಪೇಟೆ, ಸೆ. ೧೧: ಪೊನ್ನಂಪೇಟೆ ಅರಣ್ಯ ಮಹಾವಿದ್ಯಾಲಯ ಕಾರ್ಯಾನುಭವ ಶಿಬಿರದ, ಕೃಷಿ ಇಲಾಖೆ ಕೊಡಗು ಜಿಲ್ಲೆ ಇವರ ಸಂಯುಕ್ತ ಆಶ್ರಯದಲ್ಲಿ ಬೇಟೋಳಿ ಗ್ರಾಮದ ಪುದುಪಾಡಿ ಅಯ್ಯಪ್ಪ ಸಭಾ ಭವನದಲ್ಲಿ ರೈತರಿಗೆ ಬೆಳೆ ವಿಚಾರ ಸಂಕಿರಣ ಏರ್ಪಡಿಸಲಾಗಿತ್ತು.
ಕಾರ್ಯಕ್ರಮ ಉದ್ಘಾಟಿಸಿದ ಸ್ಕಾಲರ್ಸ್ ಅಕಾಡೆಮಿ ಮುಖ್ಯಸ್ಥೆ ಪೂಜಾ ಸುಜೇಶ್ ಮಾತನಾಡಿ, ಕೃಷಿಯಲ್ಲಿ ಆಧುನಿಕ ತಂತ್ರಜ್ಞಾನಗಳು ಬಳಕೆಗೆ ಬಂದಾಗ ಕೃಷಿಯು ಹೆಚ್ಚು ಲಾಭದಾಯಕವಾಗುತ್ತ ಹೋಗುತ್ತದೆ ಅಷ್ಟೇ ಅಲ್ಲದೆ ದೇಶದ ಅಭಿವೃದ್ಧಿಗೆ ಕೃಷಿಯ ಮೂಲಕ ದೊಡ್ಡ ಪ್ರಮಾಣದ ಸಹಾಯ ದೊರೆಯುತ್ತದೆ. ಈ ರೀತಿಯಾದಂತಹ ಕಾರ್ಯಕ್ರಮಗಳನ್ನು ಆಯೋಜನೆ ಮಾಡಿ ತಜ್ಞರ ಮೂಲಕ ರೈತರಿಗೆ ಹೆಚ್ಚಿನ ಮಾಹಿತಿಯನ್ನು ನೀಡುವುದರಿಂದ ರೈತರಿಗೂ ಸಹಕಾರಿಯಾಗುವುದರೊಂದಿಗೆ ಯುವ ಸಮುದಾಯಕ್ಕೆ ಕೃಷಿಯ ಮಹತ್ವ ತಿಳಿಸಲು ಸಾಧ್ಯವಾಗುತ್ತದೆ. ಕೃಷಿ ಬಗ್ಗೆ ಮನಸ್ಥಿತಿ ಬದಲಾಗಬೇಕು ಹಾಗೂ ಸಮರ್ಪಕ ಮಾಹಿತಿಯೊಂದಿಗೆ ಕೃಷಿಗೆ ತೊಡಗಿದರೆ ಉತ್ತಮ ಬದುಕು ಕಟ್ಟಿಕೊಳ್ಳಬಹುದು ಎಂದರು.
ಅರಣ್ಯ ಮಹಾವಿದ್ಯಾಲಯ ಪೊನ್ನಂಪೇಟೆ ಪ್ರಾಧ್ಯಾಪಕ ಡಾ. ಜಡೇಗೌಡ, ಎಂ. ಭತ್ತದ ಕೃಷಿಯಲ್ಲಿನ ನೂತನ ತಾಂತ್ರಿಕತೆಗಳು ಎಂಬ ವಿಷಯದ ಬಗ್ಗೆ ವಿಷಯ ಮಂಡನೆ ಮಾಡಿದರು. ಕೆ.ವಿ.ಕೆ. ಗೋಣಿಕೊಪ್ಪದ ವಿಷಯ ತಜ್ಞ ಡಾ. ಸಿ. ಪ್ರಭಾಕರ್. ತೋಟಗಾರಿಕಾ ಬೆಳೆಗಳ ಬಗ್ಗೆ ಮಾಹಿತಿ ನೀಡಿದರು. ಕಾಳುಮೆಣಸು ಹಾಗೂ ಕಾಫಿ ಬೆಳೆಯ ಕೀಟ ಮತ್ತು ರೋಗ ನಿರ್ವಹಣೆ ವಿಷಯದ ಬಗ್ಗೆ ಐ.ಸಿ.ಎ.ಆರ್, ಕೆ.ವಿ.ಕೆ, ಗೋಣಿಕೊಪ್ಪ ವಿಷಯ ತಜ್ಞರಾದ ಡಾ. ವೀರೇಂದ್ರಕುಮಾರ್, ಕೆ.ವಿ. ಮಾಹಿತಿ ನೀಡಿದರು.
ಭಾರತೀಯ ಮಸಾಲೆ ಬೆಳೆಗಳ ಸಂಶೋಧನಾ ಸಂಸ್ಥೆ ಅಪ್ಪಂಗಳ ಹಿರಿಯ ವಿಜ್ಞಾನಿ ಹಾಗೂ ಮುಖ್ಯಸ್ಥ ಡಾ. ಜಿ.ಎ. ರಾಜಣ್ಣ ಅವರು ಕಾಳುಮೆಣಸು ಮತ್ತು ಏಲಕ್ಕಿಯಲ್ಲಿ ಅನುಸರಿಸಬೇಕಾದ ವೈಜ್ಞಾನಿಕ ಕೃಷಿಯ ಮಾಹಿತಿ ನೀಡಿದರು.
ಅರಣ್ಯ ಮಹಾವಿದ್ಯಾಲಯ ಪೊನ್ನಂಪೇಟೆಯ ಸಹಾಯಕ ಪ್ರಾಧ್ಯಾಪಕ ಡಾ. ಎಂ. ಮಂಜುನಾಥ ಕಾರ್ಬನ್ ಕ್ರೆಡಿಟ್ ಬಗ್ಗೆ ಮಾಹಿತಿ ನೀಡಿದರು.ಮಡಿಕೇರಿಯ ಉಪ ಕೃಷಿ ನಿರ್ದೇಶಕ ಡಾ. ಡಿ.ಎಸ್. ಸೋಮಶೇಖರ್ ಮಾತನಾಡಿ, ವಿದ್ಯಾರ್ಥಿ ದಿಸೆಯಿಂದಲೇ ಕೃಷಿ ಚಟುವಟಿಕೆಯ ಅನುಭವ ಬಹಳ ಮುಖ್ಯವಾಗಿದ್ದು, ಕೃಷಿ ಪ್ರಾಥಮಿಕ ಆದಾಯದ ಮೂಲವಾಗಿದೆ. ಕೈಗಾರಿಕೆಗಳು ಎಷ್ಟೇ ಅಭಿವೃದ್ಧಿಯನ್ನು ಕಂಡರೂ ಆಹಾರ ಬೆಳೆಗಳ ಉತ್ಪಾದನೆ ನಡೆಯದಿದ್ದರೆ ಬದುಕಲು ಸಾಧ್ಯವಿಲ್ಲ. ಕೃಷಿ ಭೂಮಿಗಳನ್ನು ಲೇಔಟ್ ಹಾಗೂ ಇನ್ನಿತರ ಚಟುವಟಿಕೆಗಳಿಗೆ ಬಳಸುವುದನ್ನು ಕಡಿಮೆ ಮಾಡಿ ಆಹಾರ ಬೆಳೆಗಳನ್ನು ಬೆಳೆಯದಿದ್ದರೆ ಮುಂದಿನ ದಿನಗಳಲ್ಲಿ ದೊಡ್ಡ ಪ್ರಮಾಣದಲ್ಲಿ ಆಹಾರದ ಅಭಾವ ಎದುರಾಗುತ್ತದೆ ಎಂದರು.
ಅರಣ್ಯ ಮಹಾವಿದ್ಯಾಲಯದ ಪ್ರಾಧ್ಯಾಪಕ ಡಾ. ಆರ್.ಎನ್. ಕೆಂಚಾರೆಡ್ಡಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅರಣ್ಯ ಮಹಾವಿದ್ಯಾಲಯದ ಪ್ರಬಾರ ಡೀನ್ ಹಾಗೂ ಪ್ರಾಧ್ಯಾಪಕ ಡಾ. ಪಿ.ಎಸ್. ಶಿವಕುಮಾರ್, ಬಹಳ ಹಿಂದಿನ ಕಾಲದಿಂದಲೂ ಕೃಷಿ ಕಾರ್ಯ ನಡೆದುಕೊಂಡು ಬರುತ್ತಿದ್ದರು ರೋಗ ಇನ್ನಿತರ ಸಮಸ್ಯೆಯಿಂದಾಗಿ ಬದಲಾದ ಕಾಲಘಟ್ಟದಲ್ಲಿ ಕೃಷಿಯ ಪ್ರಮಾಣ ಕಡಿಮೆಯಾಗುತ್ತಿದೆ. ಕೃಷಿ ಇಲ್ಲದೆ ನಾವು ಬದುಕಲು ಸಾಧ್ಯವಿಲ್ಲ. ಕೃಷಿಯನ್ನು ಸಮರ್ಪಕವಾಗಿ ಅರ್ಥೆÊಸಿ ಕೃಷಿ ಚಟುವಟಿಕೆಗೆ ಇಳಿಯಬೇಕು. ರೈತರು ಆದಷ್ಟು ಕೃಷಿ ಇಲಾಖೆ ಹಾಗೂ ಕೃಷಿ ವಿಜ್ಞಾನ ಕೇಂದ್ರ ಕಡೆಯಿಂದ ಕಾಲಕಾಲಕ್ಕೆ ಸರಿಯಾದ ಮಾಹಿತಿಯನ್ನು ಪಡೆದು ಸಮರ್ಪಕವಾಗಿ ಕೃಷಿ ಚಟುವಟಿಕೆಗಳನ್ನು ಮಾಡಿದರೆ ಸ್ವಾವಲಂಬಿ ಜೀವನವನ್ನು ನಡೆಸುವುದರೊಂದಿಗೆ ಉತ್ತಮ ಆದಾಯವನ್ನು ಗಳಿಸಿ ಲಾಭದಾಯಕ ಜೀವನ ನಡೆಸಬಹುದೆಂದರು.
ವೇದಿಕೆಯಲ್ಲಿ ಅರಣ್ಯ ಮಹಾವಿದ್ಯಾಲಯದ ಸಹಾಯಕ ಪ್ರಾಧ್ಯಾಪಕರಾದ ಡಾ. ಲಕ್ಷಿ÷್ಮÃ ಬಳಗಾನೂರಮಠ, ಕೆ.ಎಂ. ನಾಣಯ್ಯ, ಡಾ. ನವೀನ್, ಡಾ. ನಿಂಗರಾಜ್ ದಳವಾಯಿ, ಡಾ. ಸುಮನ ಉಪಸ್ಥಿತರಿದ್ದರು. ವಿಚಾರ ಸಂಕಿರಣದಲ್ಲಿ ಹೆಗ್ಗಳ, ಬೇಟೋಳಿ ಗ್ರಾಮದ ರೈತರು, ಶಾಲಾ ವಿದ್ಯಾರ್ಥಿಗಳು, ಶಿಕ್ಷಕರು ಹೆಚ್ಚಿನ ಸಂಖ್ಯೆಯಲ್ಲಿ ಹಾಜರಿದ್ದರು.