ಮಡಿಕೇರಿ, ಸೆ. ೧೧: ಕಳೆದ ಮೂರು ವರ್ಷಗಳಿಂದ ಜಮೀನಿನ ದುರಸ್ತಿಗಾಗಿ ಕಚೇರಿಗೆ ಅಲೆದಾಡುತ್ತಿದ್ದರೂ ಸಮಸ್ಯೆ ಬಗೆಹರಿಸದಿರುವ ಬಗ್ಗೆ ಲೋಕಾಯುಕ್ತ ಡಿವೈಎಸ್‌ಪಿ ದಿನಕರ ಶೆಟ್ಟಿ ಅವರು ಅಧಿಕಾರಿಗಳನ್ನು ಪ್ರಶ್ನಿಸಿ, ಸಾರ್ವಜನಿಕರನ್ನು ಕಚೇರಿಗೆ ಅಲೆದಾಡಿಸುವುದು ಸರಿಯಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಕರ್ನಾಟಕ ಲೋಕಾಯುಕ್ತದ ಮಡಿಕೇರಿ ಡಿವೈಎಸ್‌ಪಿ ಅವರ ನೇತೃತ್ವದಲ್ಲಿ ನಗರದ ತಾಲ್ಲೂಕು ತಹಶೀಲ್ದಾರರ ಕಚೇರಿಯಲ್ಲಿ ನಡೆದ ದೂರು ಅರ್ಜಿ ಸ್ವೀಕಾರ ಸಂದರ್ಭದಲ್ಲಿ ಒಟ್ಟು ನಾಲ್ಕು ಅರ್ಜಿಗಳು ಸಲ್ಲಿಕೆಯಾದವು.
ಈ ಸಂದರ್ಭ ಮನವಿದಾರರಾದ ಬಾಲಕೃಷ್ಣ ಅವರು, ಕಳೆದ ಮೂರು ವರ್ಷಗಳಿಂದ ಭೂಮಿ ದುರಸ್ತಿಗಾಗಿ ಕಚೇರಿಗೆ ಅಲೆದಾಡುತ್ತಿದ್ದರೂ ಇದುವರೆಗೆ ಸಮಸ್ಯೆ ಬಗೆಹರಿದಿಲ್ಲ ಎಂದು ದೂರಿದರು. ಮತ್ತೊಬ್ಬರು ತಮ್ಮ ಜಮೀನು ಒತ್ತುವರಿಯಾಗಿದ್ದು, ಸರ್ವೆ ನಡೆಸಿ ಸರಿಪಡಿಸುವಂತೆ ಹಲವು ಬಾರಿ ಮನವಿ ಮಾಡಿದರೂ ಕ್ರಮ ಕೈಗೊಂಡಿಲ್ಲ ಎಂದು ತಿಳಿಸಿದರು. ಇನ್ನೋರ್ವರು ಜಮೀನಿನ ಖಾತೆ ಮಾಡಿಕೊಡುವಂತೆ ಹಲವು ಬಾರಿ ಮನವಿ ಸಲ್ಲಿಸಿದ್ದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಅಳಲು ತೋಡಿಕೊಂಡರು.
ಭೂಮಿ ದುರಸ್ತಿಯಾದಲ್ಲಿ ಕುಟುಂಬದ ಸದಸ್ಯರಿಗೆ ಜಮೀನು ಹಂಚಿಕೆ ಮಾಡಲು ಅನುಕೂಲವಾಗಲಿದೆ. ಸಣ್ಣಪುಟ್ಟ ಜಮೀನು ಹೊಂದಿರುವ ಕುಟುಂಬಗಳಲ್ಲಿ ಭೂಮಿ ವಿಭಜನೆಗೂ ಇದು ಸಹಕಾರಿಯಾಗುತ್ತದೆ. ದುರಸ್ತಿ ಮಾಡದೆ ಕುಟುಂಬದ ಸದಸ್ಯರಿಗೆ ಜಮೀನು ಹಂಚಿಕೆ ಮಾಡುವುದು ಕಷ್ಟವಾಗುತ್ತಿದೆ ಎಂದು ಮನವಿದಾರರು ಡಿವೈಎಸ್‌ಪಿ ಅವರ ಗಮನಕ್ಕೆ ತಂದರು.
ಮನವಿಯನ್ನು ಆಲಿಸಿದ ಲೋಕಾಯುಕ್ತ ಡಿವೈಎಸ್‌ಪಿ ದಿನಕರ ಶೆಟ್ಟಿ ಅವರು, ಕಳೆದ ಮೂರು ವರ್ಷಗಳಿಂದ ಭೂಮಿ ದುರಸ್ತಿ ಮಾಡದೆ ಸಾರ್ವಜನಿಕರನ್ನು ಕಚೇರಿಗೆ ಅಲೆಸುವುದು ಏಕೆ?” ಎಂದು ಅಧಿಕಾರಿಗಳನ್ನು ಪ್ರಶ್ನಿಸಿದರು. ಸಾರ್ವಜನಿಕರನ್ನು ಅಲೆದಾಡಿಸುವುದು ಅಥವಾ ಸತಾಯಿಸುವುದು ಸರಿಯಲ್ಲ. ಮಾನವೀಯ ದೃಷ್ಟಿಕೋನದಿಂದ ಅಧಿಕಾರಿಗಳು ಕೆಲಸ ನಿರ್ವಹಿಸಬೇಕು ಎಂದು ಸೂಚಿಸಿದರು.
೧೫ ದಿನಗಳೊಳಗೆ ಭೂಮಿ ದುರಸ್ತಿ ಕಾರ್ಯ ಪೂರ್ಣಗೊಳ್ಳದಿದ್ದರೆ ಮತ್ತೊಮ್ಮೆ ತಮ್ಮ ಗಮನಕ್ಕೆ ತರುವಂತೆ ಮನವಿದಾರರಿಗೆ ಸಲಹೆ ನೀಡಿದರು.
ಖಾಲಿ ನಿವೇಶನದಲ್ಲಿರುವ ಉದ್ಯಾನವನದ ಜಾಗವನ್ನು ಸಹ ಖಾತೆ ಮಾಡಿರುವ ಬಗ್ಗೆ ದೂರುಗಳು ಬರುತ್ತಿವೆ. ಅಧಿಕಾರಿಗಳು ಇಂತಹ ಕೆಲಸಗಳಿಗೆ ಮುಂದಾಗಬಾರದು. ಸಾರ್ವಜನಿಕರಿಂದ ದೂರುಗಳು ಬಂದಾಗ ಅದಕ್ಕೆ ಸ್ಪಂದಿಸಿ ಸೂಕ್ತ ಕ್ರಮ ಕೈಗೊಳ್ಳುವುದು ಅಧಿಕಾರಿಗಳ ಜವಾಬ್ದಾರಿಯಾಗಿದೆ ಎಂದು ದಿನಕರ ಶೆಟ್ಟಿ ಹೇಳಿದರು. ವಿದ್ಯಾರ್ಥಿ ನಿಲಯಗಳು ಹಾಗೂ ವಸತಿ ಶಾಲೆಗಳಲ್ಲಿ ನೂರಾರು ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದು, ಅವರಿಗೆ ಸಮಯಕ್ಕೆ ಸರಿಯಾಗಿ ಬಿಸಿನೀರು ಒದಗಿಸಬೇಕು ಎಂದು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಕೆಲವು ವಿದ್ಯಾರ್ಥಿ ನಿಲಯಗಳು ಹಾಗೂ ವಸತಿ ಶಾಲೆಗಳಲ್ಲಿ ಬಿಸಿನೀರಿನ ವ್ಯವಸ್ಥೆ ಇಲ್ಲದೆ ವಿದ್ಯಾರ್ಥಿಗಳು ತೊಂದರೆ ಅನುಭವಿಸುತ್ತಿರುವ ಬಗ್ಗೆ ದೂರುಗಳು ಬಂದಿವೆ. ಈ ಬಗ್ಗೆ ಅಧಿಕಾರಿಗಳು ಕೂಡಲೇ ಗಮನಹರಿಸಬೇಕು ಎಂದು ಸೂಚಿಸಿದರು.
ರಾಜಾಸೀಟ್ ಬಳಿಯ ಕೂರ್ಗ್ ವಿಲೇಜ್ ಬಗ್ಗೆಯೂ ಡಿವೈಎಸ್‌ಪಿ ಅವರು ಅಧಿಕಾರಿಗಳಿಂದ ಮಾಹಿತಿ ಪಡೆದರು. ಕೂರ್ಗ್ ವಿಲೇಜ್‌ನ ಜಾಗವು ಸಾರ್ವಜನಿಕ ಉಪಯೋಗಕ್ಕೆ ಬಾರದಿರುವ ಕುರಿತು ಅಧಿಕಾರಿಗಳಿಂದ ಮಾಹಿತಿ ಪಡೆದು, ಈ ಸಂಬAಧದ ಸ್ಥಿತಿಗತಿಗಳ ಬಗ್ಗೆ ವಿಚಾರಿಸಿದರು.
ವಿವಿಧ ಸರ್ಕಾರಿ ಕಚೇರಿಗಳಲ್ಲಿ ಅಳವಡಿಸಿರುವ ಲೋಕಾಯುಕ್ತ ನಾಮಫಲಕಗಳಲ್ಲಿ ಸಂಚಾರಿ ದೂರವಾಣಿ ಸಂಖ್ಯೆಯನ್ನು ಸಾರ್ವಜನಿಕರಿಗೆ ಸ್ಪಷ್ಟವಾಗಿ ಕಾಣುವಂತೆ ನಮೂದಿಸಬೇಕು. ಕೆಲವು ಕಡೆಗಳಲ್ಲಿ ದೂರವಾಣಿ ಸಂಖ್ಯೆಯನ್ನು ಸಣ್ಣದಾಗಿ ಬರೆದಿರುವುದರಿಂದ ಸರಿಯಾಗಿ ಕಾಣುತ್ತಿಲ್ಲ ಎಂಬ ದೂರುಗಳು ಬರುತ್ತಿವೆ. ಆದ್ದರಿಂದ ನಾಮಫಲಕಗಳಲ್ಲಿ ದೂರವಾಣಿ ಸಂಖ್ಯೆ ಸ್ಪಷ್ಟವಾಗಿ ಕಾಣುವಂತೆ ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದರು.
ಲೋಕಾಯುಕ್ತ ಪೊಲೀಸ್ ಇನ್ಸ್ಪೆಕ್ಟರ್ ವೀಣಾ ನಾಯಕ್ ಮಾತನಾಡಿದರು. ಕಡಗದಾಳುವಿನ ಶಿವಶಂಕರ, ಯವಕಪಾಡಿಯ ಕೆ.ಬಿ. ಪೊನ್ನಪ್ಪ ಹಾಗೂ ಮೇಕೇರಿಯ ಕೆ.ಎಸ್. ಮೊಣ್ಣಪ್ಪ ಅವರು ಭೂಮಿ ವಿಲೇವಾರಿಗೆ ಸಂಬAಧಿಸಿದAತೆ ದೂರು ಅರ್ಜಿಗಳನ್ನು ಸಲ್ಲಿಸಿದರು. ತಾ.ಪಂ. ಇಒ ಶೇಖರ್ ಅವರು ಹಿಂದಿನ ಸಭೆಯ ನಡಾವಳಿಗಳನ್ನು ಓದಿದರು. ಶಿರಸ್ತೇದಾರ್ ದೇವರಾಜು ಅವರು ಕಂದಾಯ ಇಲಾಖೆಗೆ ಸಂಬAಧಿಸಿದ ಮಾಹಿತಿಯನ್ನು ನೀಡಿದರು. ಭೂದಾಖಲೆಗಳ ಸಹಾಯಕ ನಿರ್ದೇಶಕ ಮಹೇಶ್ ಕುಮಾರ್ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ತಮ್ಮ ಇಲಾಖೆಗೆ ಸಂಬAಧಿಸಿದ ಮಾಹಿತಿಯನ್ನು ನೀಡಿದರು.