ಮುಳ್ಳೂರು, ಸೆ. ೧೧: ಸಹಕಾರಿ ಸದಸ್ಯರ ಸಲಹೆ ಹಾಗೂ ಸಹಕಾರವು ಸಂಘದ ಅಭಿವೃದ್ಧಿಗೆ ಪೂರಕವಾಗಿದೆ ಎಂದು ಶನಿವಾರಸಂತೆ ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘದ ಅಧ್ಯಕ್ಷ ಡಿ.ಬಿ. ಧರ್ಮಪ್ಪ ಹೇಳಿದರು.

ಶನಿವಾರಸಂತೆಯ ಭಾರತಿ ವಿದ್ಯಾಸಂಸ್ಥೆಯ ಸಭಾಂಗಣದಲ್ಲಿ ನಡೆದ ಶನಿವಾರಸಂತೆ ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘದ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಸದಸ್ಯರ ಸಲಹೆ, ಸಹಕಾರ, ಆಡಳಿತ ಮಂಡಳಿ, ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹಾಗೂ ಸಿಬ್ಬಂದಿಯ ಪರಿಶ್ರಮದಿಂದ ಸಂಘವು ೨೨ ಲಕ್ಷಕ್ಕೂ ಅಧಿಕ ನಿವ್ವಳ ಲಾಭ ಗಳಿಸಲು ಸಾಧ್ಯವಾಗಿದೆ. ಸಂಘದ ಮೂಲಕ ಹಲವು ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲಾಗಿದೆ. ಮುಂದಿನ ದಿನಗಳಲ್ಲೂ ಸಂಘವನ್ನು ಮತ್ತಷ್ಟು ಅಭಿವೃದ್ಧಿಪಡಿಸಲು ಆಡಳಿತ ಮಂಡಳಿ ಯೋಜನೆ ರೂಪಿಸಿಕೊಂಡಿದ್ದು, ಈ ನಿಟ್ಟಿನಲ್ಲಿ ಸದಸ್ಯರು ಸಲಹೆ ಹಾಗೂ ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.

ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎನ್.ಪಿ. ಶಿವರಾಜ್ ವಾರ್ಷಿಕ ವರದಿ ಹಾಗೂ ಲೆಕ್ಕಪರಿಶೋಧನಾ ವರದಿಯನ್ನು ಮಂಡಿಸಿ, ಸಂಘದಲ್ಲಿ ಒಟ್ಟು ೬೧೧ ಸದಸ್ಯರಿದ್ದು, ವ್ಯವಹಾರಗಳ ಮೂಲಕ ಒಟ್ಟು ರೂ. ೧೦.೪೭ ಕೋಟಿ ವಹಿವಾಟು ನಡೆಸಲಾಗಿದೆ. ಇದರಿಂದ ಸಂಘವು ೨೨.೫೫ ಲಕ್ಷ ನಿವ್ವಳ ಲಾಭ ಗಳಿಸಿದೆ ಎಂದು ತಿಳಿಸಿದರು.

ಮಹಾಸಭೆಯಲ್ಲಿ ಸಂಘದ ಪ್ರಗತಿ ಹಾಗೂ ಮುಂದಿನ ಅಭಿವೃದ್ಧಿ ಕುರಿತು ಸಹಕಾರಿ ಪ್ರಮುಖರಾದ ಉಮಾಶಂಕರ್, ಸುಬ್ಬಪ್ಪ, ಮೋಹನ್, ಎಸ್.ಪಿ. ರಾಜು ಹಾಗೂ ಜಿ.ಎಂ. ಕಾಂತರಾಜ್ ಅವರು ಮಾತನಾಡಿದರು.

ಸಂಘದ ವತಿಯಿಂದ ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿ ಪರೀಕ್ಷೆಯಲ್ಲಿ ಉತ್ತಮ ಅಂಕ ಗಳಿಸಿದ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸಿ ಗೌರವಿಸಲಾಯಿತು.

ಸಭೆಯಲ್ಲಿ ಸಂಘದ ಉಪಾಧ್ಯಕ್ಷ ಕುಮಾರ್ ನಾಯಕ, ನಿರ್ದೇಶಕರಾದ ಎಸ್.ಸಿ. ಶರತ್‌ಶೇಖರ್, ಪರಮೇಶ್, ಮಹಾಂತಪ್ಪ, ದೀಪಕ್, ಬಿ.ಎಸ್. ಮಂಜುನಾಥ್, ದೇವಾಂಬಿಕ ಮಹೇಶ್, ಎಸ್.ಜಿ. ರವಿಕುಮಾರ್, ಎಸ್.ಎಸ್. ಸಾಗರ್, ರಾಮಯ್ಯ, ಶಶಿಕಲಾ ನಾಗರಾಜ್, ಜಿ.ಬಿ. ಸಂದೀಪ್, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎನ್.ಪಿ. ಶಿವರಾಜ್ ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.