ಮಡಿಕೇರಿ, ಸೆ. ೧೧: ಗೌರಿ-ಗಣೇಶ ಹಬ್ಬದ ಸಂದರ್ಭದಲ್ಲಿ ಜಿಲ್ಲೆಯಾದ್ಯಂತ ಶಾಂತಿ ಹಾಗೂ ಕಾನೂನು ಸುವ್ಯವಸ್ಥೆ ಕಾಪಾಡಲು ಸಾರ್ವಜನಿಕರು ಸಹಕರಿಸುವಂತೆ ಜಿಲ್ಲಾಧಿಕಾರಿ ಎಸ್.ಜೆ. ಸೋಮಶೇಖರ್ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆರ್.ಎನ್. ಬಿಂದುಮಣಿ ಮನವಿ ಮಾಡಿದ್ದಾರೆ.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಗೌರಿ-ಗಣೇಶ ಮೂರ್ತಿಗಳ ಪ್ರತಿಷ್ಠಾಪನೆ ಹಾಗೂ ವಿಸರ್ಜನೆ ಸಂದರ್ಭ ಪಾಲಿಸಬೇಕಾದ ನಿಯಮಗಳ ಕುರಿತು ನಡೆದ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು.

ಜಿಲ್ಲಾಧಿಕಾರಿ ಎಸ್.ಜೆ. ಸೋಮಶೇಖರ್ ಮಾತನಾಡಿ, ಮುಂದಿನ ಸೋಮವಾರದಿಂದ ಗೌರಿ-ಗಣೇಶ ಹಬ್ಬ ಆರಂಭವಾಗಲಿದ್ದು, ಜಿಲ್ಲೆಯ ವಿವಿಧೆಡೆ ಮೂರ್ತಿಗಳ ಪ್ರತಿಷ್ಠಾಪನೆ ಹಾಗೂ ವಿಸರ್ಜನೆ ನಡೆಯಲಿದೆ. ಈ ಸಂದರ್ಭ ಪ್ರತಿಯೊಬ್ಬರೂ ನ್ಯಾಯಾಲಯದ ಆದೇಶ ಹಾಗೂ ಸರ್ಕಾರದ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದು ಹೇಳಿದರು.

ಈಗಾಗಲೇ ತಾಲೂಕು ದಂಡಾಧಿಕಾರಿಗಳ ನೇತೃತ್ವದಲ್ಲಿ ಏಕಗವಾಕ್ಷಿ ಸಮಿತಿ ರಚಿಸಲಾಗಿದ್ದು, ಮೂರ್ತಿ ಪ್ರತಿಷ್ಠಾಪನೆ ಹಾಗೂ ವಿಸರ್ಜನೆ ಮಾಡುವವರು ಸಮಿತಿಯ ನಿಯಮಗಳನ್ನು ಪಾಲಿಸಬೇಕು. ಅಗತ್ಯವಿರುವ ಕಡೆ ಬ್ಯಾರಿಕೇಡ್, ಸಿಸಿಟಿವಿ ಅಳವಡಿಕೆ, ಪ್ರಸಾದ ವಿತರಣೆಗೆ ಸೂಕ್ತ ವ್ಯವಸ್ಥೆ, ಪರಿಸರ ಸ್ನೇಹಿ ಮೂರ್ತಿಗಳ ಪ್ರತಿಷ್ಠಾಪನೆ ಹಾಗೂ ಅಗ್ನಿಶಾಮಕ ಸಿಬ್ಬಂದಿ ಮತ್ತು ಆ್ಯಂಬ್ಯುಲೆನ್ಸ್ಗಳು ಪಾಳಿಯಲ್ಲಿ ಕರ್ತವ್ಯ ನಿರ್ವಹಿಸುವಂತೆ ಕ್ರಮವಹಿಸಬೇಕು ಎಂದರು. ಕಾನೂನು ಸುವ್ಯವಸ್ಥೆಗೆ ಧಕ್ಕೆ ಬಾರದಂತೆ ಶಾಂತಿಯುತವಾಗಿ ಶ್ರದ್ಧಾ-ಭಕ್ತಿಯಿಂದ ಹಬ್ಬ ಆಚರಿಸಬೇಕು. ಭಕ್ತಿ ಇರಲಿ, ಆದರೆ ಡಿಜೆ ಬೇಡ ಎಂದು ಜಿಲ್ಲಾಧಿಕಾರಿ ಮನವಿ ಮಾಡಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆರ್.ಎನ್. ಬಿಂದುಮಣಿ ಮಾತನಾಡಿ, ಗೌರಿ-ಗಣೇಶ ಮೂರ್ತಿ ಪ್ರತಿಷ್ಠಾಪಿಸುವ ಸ್ಥಳಗಳಲ್ಲಿ ಸಮಿತಿಯವರು ಅಗತ್ಯ ಮುನ್ನೆಚ್ಚರಿಕೆ ವಹಿಸಬೇಕು. ಬೆಲೆಬಾಳುವ ವಸ್ತುಗಳನ್ನು ಇಡಬಾರದು ಹಾಗೂ ರಾತ್ರಿ ವೇಳೆ ಹೆಚ್ಚಿನ ಎಚ್ಚರಿಕೆ ವಹಿಸಬೇಕು ಎಂದು ಸಲಹೆ ನೀಡಿದರು.

ಮೂರ್ತಿ ಪ್ರತಿಷ್ಠಾಪನಾ ಸ್ಥಳಗಳಲ್ಲಿ ಕಡ್ಡಾಯವಾಗಿ ಸಿಸಿಟಿವಿ ಅಳವಡಿಸಬೇಕು. ತಹಶೀಲ್ದಾರ್ ನೇತೃತ್ವದ ಏಕಗವಾಕ್ಷಿ ಸಮಿತಿಯ ನಿಯಮಗಳನ್ನು ಚಾಚೂ ತಪ್ಪದೆ ಪಾಲಿಸಬೇಕು. ಫ್ಲೆಕ್ಸ್, ಬ್ಯಾನರ್ ಹಾಗೂ ಬಂಟಿAಗ್ಸ್ ಅಳವಡಿಸಲು ಸ್ಥಳೀಯ ಸಂಸ್ಥೆಗಳಿAದ ಅನುಮತಿ ಪಡೆಯಬೇಕು. ಧ್ವನಿವರ್ಧಕ ಬಳಕೆಯಲ್ಲಿ ನ್ಯಾಯಾಲಯದ ಆದೇಶ ಪಾಲಿಸಬೇಕು. ಮೆರವಣಿಗೆಯನ್ನು ಆದಷ್ಟು ಬೇಗ ಪೂರ್ಣಗೊಳಿಸಿ, ಸಾರ್ವಜನಿಕರಿಗೆ ತೊಂದರೆಯಾಗದAತೆ ಎಚ್ಚರಿಕೆ ವಹಿಸಬೇಕು ಎಂದರು.

ಪರಿಸರ ಅಧಿಕಾರಿ ಕೀರ್ತಿ ಕುಮಾರ್ ಮಾತನಾಡಿ, ಸಾರ್ವಜನಿಕರು ಪರಿಸರ ಸ್ನೇಹಿಯಾಗಿ ಗೌರಿ-ಗಣೇಶ ಹಬ್ಬ ಆಚರಿಸುವ ಮೂಲಕ ನೈಸರ್ಗಿಕ ಜಲಸಂಪನ್ಮೂಲಗಳ ಸಂರಕ್ಷಣೆಗೆ ಸಹಕರಿಸಬೇಕು ಎಂದು ಕೋರಿದರು.

ಉಚ್ಚ ನ್ಯಾಯಾಲಯದ ಆದೇಶದಂತೆ ಪ್ಲಾಸ್ಟರ್ ಆಫ್ ಪ್ಯಾರಿಸ್ (ಪಿಒಪಿ) ವಿಗ್ರಹಗಳ ತಯಾರಿಕೆ ಹಾಗೂ ಮಾರಾಟ ನಿಷೇಧಿಸಲಾಗಿದೆ. ಅನಧಿಕೃತವಾಗಿ ತಯಾರಿಸುವ ಅಥವಾ ಮಾರಾಟ ಮಾಡುವ ವ್ಯಕ್ತಿ ಹಾಗೂ ಸಂಸ್ಥೆಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು. ಪಿಒಪಿ ಹಾಗೂ ಬಣ್ಣ ಲೇಪಿತ ವಿಗ್ರಹಗಳನ್ನು ನದಿ, ಕಾಲುವೆ, ಬಾವಿ ಸೇರಿದಂತೆ ಯಾವುದೇ ಜಲಮೂಲಗಳಲ್ಲಿ ವಿಸರ್ಜಿಸುವಂತಿಲ್ಲ ಎಂದು ತಿಳಿಸಿದರು.

ರಾಸಾಯನಿಕ ಬಣ್ಣಗಳಿಂದ ತಯಾರಿಸಿದ ಮೂರ್ತಿಗಳ ಬದಲಾಗಿ ನೈಸರ್ಗಿಕ ವಸ್ತುಗಳಿಂದ ತಯಾರಿಸಿದ ಪರಿಸರ ಸ್ನೇಹಿ ಮೂರ್ತಿಗಳನ್ನು ಪ್ರತಿಷ್ಠಾಪಿಸಿ, ವೈಜ್ಞಾನಿಕ ರೀತಿಯಲ್ಲಿ ವಿಸರ್ಜಿಸಬೇಕು. ವಿಸರ್ಜನೆ ಸಂದರ್ಭದಲ್ಲಿ ಹೂವು, ಹಣ್ಣು, ಬಾಳೆಕಂಬ, ಮಾವಿನ ತೋರಣ ಸೇರಿದಂತೆ ಹಸಿಕಸ ಹಾಗೂ ಒಣಕಸವನ್ನು ಪ್ರತ್ಯೇಕಿಸಿ, ಮೂರ್ತಿಗಳೊಂದಿಗೆ ನೀರಿಗೆ ಹಾಕದೆ ವೈಜ್ಞಾನಿಕವಾಗಿ ವಿಲೇವಾರಿ ಮಾಡಬೇಕು ಎಂದರು.

ಗಣೇಶೋತ್ಸವದ ಸಂದರ್ಭ ಏಕಬಳಕೆ ಪ್ಲಾಸ್ಟಿಕ್ ಬಳಕೆ ಮಾಡಬಾರದು. ರಾತ್ರಿ ೧೦ರಿಂದ ಬೆಳಗ್ಗೆ ೬ರವರೆಗೆ ಧ್ವನಿವರ್ಧಕಗಳ ಬಳಕೆ ನಿಷೇಧಿಸಲಾಗಿದೆ. ವಿಗ್ರಹ ವಿಸರ್ಜನೆ ವೇಳೆ ಹಸಿರು ಪಟಾಕಿ ಹೊರತುಪಡಿಸಿ ಇತರೆ ಪಟಾಕಿಗಳ ಬಳಕೆಯನ್ನು ನಿಷೇಧಿಸಲಾಗಿದೆ ಎಂದು ಕೀರ್ತಿ ಕುಮಾರ್ ತಿಳಿಸಿದರು.

ಸೆಸ್ಕ್ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ವಿನಯ್ ಕುಮಾರ್ ಮಾತನಾಡಿ, ಹಬ್ಬದ ಸಂದರ್ಭದಲ್ಲಿ ವಿದ್ಯುತ್ ಅವಘಡಗಳು ಸಂಭವಿಸದAತೆ ವಿದ್ಯುತ್ ಅಲಂಕಾರ ಹಾಗೂ ಇತರ ವ್ಯವಸ್ಥೆಗಳಲ್ಲಿ ಮುನ್ನೆಚ್ಚರಿಕೆ ವಹಿಸಬೇಕು ಎಂದು ಮನವಿ ಮಾಡಿದರು.

ಹೆಚ್ಚುವರಿ ಜಿಲ್ಲಾಧಿಕಾರಿ ಸಹನಾ ಎಸ್. ಹಾದಿಮನಿ, ಉಪ ವಿಭಾಗಾಧಿಕಾರಿ ನಿತಿನ್ ಚಕ್ಕಿ, ಪ್ರಾದೇಶಿಕ ಸಾರಿಗೆ ಅಧಿಕಾರಿ ಎಸ್.ಟಿ. ಸತೀಶ್, ತಹಶೀಲ್ದಾರ್‌ಗಳಾದ ಪ್ರವೀಣ್ ಕುಮಾರ್, ಶ್ರೀಧರ, ಸಂಜನಾ, ಡಿವೈಎಸ್‌ಪಿಗಳಾದ ಸೂರಜ್, ಮೇದಪ್ಪ, ಚಂದ್ರಶೇಖರ್, ಪುರಸಭೆ ಮುಖ್ಯಾಧಿಕಾರಿಗಳಾದ ಗಿರೀಶ್, ನಾಚಪ್ಪ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.