ಮಡಿಕೇರಿ, ಸೆ. ೧೧: ಮೇ ೬ ರಂದು ನಡೆದ ಗೌಡ ಸಮಾಜಗಳ ಒಕ್ಕೂಟದ ಸಭೆಯಲ್ಲಿ ಹಾಗೂ ಅಭಿನಂದನಾ ಕಾರ್ಯಕ್ರಮದಲ್ಲಿ ಕೆಲವು ನಿರ್ಣಯಗಳನ್ನು ಪ್ರಕಟಿಸಲಾಗಿದ್ದು, ಕೊಡವ ಜನಾಂಗದವರ ಮನಸ್ಸಿಗೆ ನೋವಾಗಿದೆ. ಇವರ ಹೇಳಿಕೆ ಅಧ್ಯಕ್ಷ, ಉಪಾಧ್ಯಕ್ಷ ಮತ್ತು ಕೆಲವು ವ್ಯಕ್ತಿಗಳ ವೈಯಕ್ತಿಕ ಅಭಿಪ್ರಾಯವಾಗಿದ್ದು, ಗೌಡ ಜನಾಂಗದವರಿಗೆ ಇವರುಗಳ ಹೇಳಿಕೆಗೆ ಗೌಡ ಜನಾಂಗದ ಬೆಂಬಲ ಇರುವುದಿಲ್ಲ ಎಂದು ಕೊಡಗು ಗೌಡ ಯುವ ವೇದಿಕೆ ಸಂಸ್ಥಾಪಕಾಧ್ಯಕ್ಷ ಹಾಗೂ ಕೊಡಗು ಗೌಡ ಸಮಾಜದ ನಿರ್ದೇಶಕ ಪೊನ್ನಚ್ಚನ ಮಧು ಹೇಳಿಕೆ ನೀಡಿದ್ದಾರೆ.
ನಮ್ಮ ದೇಶ ಪ್ರಜಾಪ್ರಭುತ್ವದ ಅಡಿಯಲ್ಲಿ ಮೌಲ್ಯ ಹೊಂದಿದ್ದು, ಯಾವುದೇ ವ್ಯಕ್ತಿ ಅಥವಾ ಸಮಾಜ ಸಂವಿಧಾನದ ಅಡಿಯಲ್ಲಿ ಹಕ್ಕನ್ನು ಕೇಳುವ ಅಧಿಕಾರ ಅಥವಾ ಸ್ವಾತಂತ್ರ‍್ಯವನ್ನು ಹೊಂದಿರುತ್ತಾರೆ. ನಮ್ಮ ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗ ಬೇಡಿಕೆಗಳ ಬಗ್ಗೆ ತೀರ್ಮಾನ ಕೈಗೊಳ್ಳುತ್ತದೆ. ಗೌಡ ಸಮಾಜದವರು ಸಹ ತಮಗೆ ಬೇಕಾದ ಸವಲತ್ತು, ಮುಂತಾದವುಗಳ ಬಗ್ಗೆ ಹೋರಾಟವನ್ನು ನಡೆಸಬಹುದು. ಮತ್ತೊಂದು ಸಮಾಜದವರ ಬೇಡಿಕೆಗಳನ್ನು ಬಹಿರಂಗವಾಗಿ ವಿರೋಧಿಸಿ ನಿರ್ಣಯ ತೆಗೆದುಕೊಳ್ಳುವ ಹಕ್ಕು ಯಾರಿಗೂ ಇಲ್ಲ ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಗೌಡ ಜನಾಂಗದವರು ಎಲ್ಲರೊಂದಿಗೆ ಸೌಹಾರ್ದತೆಯಿಂದ ಇರಬೇಕೆಂಬ ಉದ್ದೇಶದಿಂದ ಶಾಸಕ ಡಾ. ಮಂತÀರ್ ಗೌಡ, ಮಾಜಿ ಶಾಸಕ ಕೆ.ಜಿ. ಬೋಪಯ್ಯ ಅವರು ವಿಶೇಷ ನೆರವು ನೀಡಿದ್ದಾರೆ. ವೀರಾಜಪೇಟೆ ಶಾಸಕ ಹಾಗೂ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಆಗಿರುವ ಎ.ಎಸ್. ಪೊನ್ನಣ್ಣ ಅವರು ಗೌಡ ಸಮುದಾಯದ ಅಭಿವೃದ್ಧಿಗಾಗಿ ಸರಕಾರದಿಂದ ಜಾಗ ಮಂಜೂರು ಮಾಡಿಸಿಕೊಟ್ಟಿದ್ದಾರೆ. ಸಮಾಜಗಳ ಕಟ್ಟಡಗಳ ಅಭಿವೃದ್ಧಿಗಾಗಿ ಶಾಸಕದ್ವಯರು ಸರಕಾರದಿಂದ ನೆರವು ಕೊಡಿಸುತ್ತಿದ್ದಾರೆ. ಇಂತಹ ಸಾಮರಸ್ಯ ದಿನಗಳಲ್ಲಿ ಜಾತಿ-ಜಾತಿಗಳ ಮಧ್ಯೆ ಕೆಲವರು ಶೀತಲ ಸಮರ ಮಾಡುತ್ತಿರುವುದು ಸಮಾಜಕ್ಕೆ ತಪ್ಪು ಸಂದೇಶ ರವಾನೆಯಾಗಿದೆ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.