ಶನಿವಾರಸಂತೆ, ಸೆ. ೧೧: ಸಮೀಪದ ಕೊಡ್ಲಿಪೇಟೆ ಹೋಬಳಿ, ಬೆಸೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ನಿಲುವಾಗಿಲು ಗ್ರಾಮದ ಗದ್ದೆಗಳಿಗೆ ಕಾಡಾನೆಗಳು ಪ್ರತಿನಿತ್ಯ ದಾಳಿ ನಡೆಸಿ, ರೈತರು ಕಷ್ಟಪಟ್ಟು ಬೆಳೆದಿರುವ ಭತ್ತದ ಬೆಳೆಯನ್ನು ತುಳಿದು, ತಿಂದು ನಾಶಪಡಿಸುತ್ತಿವೆ.

ಕಟ್ಟೆಪುರ ಮೀಸಲು ಅರಣ್ಯ ಪ್ರದೇಶದಿಂದ ರಾತ್ರಿ ವೇಳೆ ಗ್ರಾಮಕ್ಕೆ ಆಗಮಿಸುವ ಕಾಡಾನೆಗಳು ಗದ್ದೆಗಳಿಗೆ ನುಗ್ಗಿ ಭತ್ತದ ಪೈರನ್ನು ನಾಶಪಡಿಸುತ್ತಿವೆ. ಬರಗಾಲದ ನಡುವೆಯೂ ಸಾಕಷ್ಟು ಶ್ರಮವಹಿಸಿ ಬೆಳೆದ ಬೆಳೆ ಕೈಗೆ ಬರುವ ಮುನ್ನವೇ ಆನೆಗಳ ಪಾಲಾಗುತ್ತಿದೆ. ಈ ಬಗ್ಗೆ ಅರಣ್ಯ ಇಲಾಖೆಯ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ರೈತರು ಆರೋಪಿಸಿದ್ದಾರೆ.

ಸರ್ಕಾರದಿಂದ ನೀಡಲಾಗುವ ಪರಿಹಾರ ಮೊತ್ತವೂ ಬೆಳೆ ನಷ್ಟಕ್ಕೆ ಹೋಲಿಸಿದರೆ ಅತ್ಯಲ್ಪವಾಗಿದ್ದು, ಕಾಟಾ ಚಾರಕ್ಕೆ ಪರಿಹಾರ ನೀಡಿ ಕೈತೊಳೆದುಕೊಳ್ಳಲಾಗುತ್ತಿದೆ. ನಿರಂತರವಾಗಿ ಕಾಡಾನೆಗಳ ಹಾವಳಿಯಿಂದ ಸಂಕಷ್ಟಕ್ಕೆ ಸಿಲುಕಿರುವ ಅನೇಕ ರೈತರು ಭತ್ತ ಬೆಳೆಯುವುದನ್ನೇ ಕೈಬಿಟ್ಟಿದ್ದಾರೆ. ಕೆಲವರು ತಮ್ಮ ಕುಟುಂಬದ ವರ್ಷದ ಆಹಾರಕ್ಕಾದರೂ ಆಗಲಿ ಎಂದು ಗದ್ದೆ ನಾಟಿ ಮಾಡಿದ್ದು, ಹುಲುಸಾಗಿ ಬೆಳೆದಿದ್ದ ಪೈರು ಸಂಪೂರ್ಣವಾಗಿ ಆನೆಗಳ ಪಾಲಾಗಿದೆ ಎಂದು ರೈತರು ಅಳಲು ತೋಡಿಕೊಂಡಿದ್ದಾರೆ.

ಪ್ರತಿವರ್ಷ ಇದೇ ಸಮಸ್ಯೆಯನ್ನು ಎದುರಿಸುತ್ತಿರುವ ನಿಲುವಾಗಿಲು ಗ್ರಾಮದ ರೈತರ ಬೆಳೆ ರಕ್ಷಣೆಗೆ ಸರ್ಕಾರ ಶಾಶ್ವತ ಪರಿಹಾರ ಕಲ್ಪಿಸಬೇಕು. ಕಟ್ಟೆಪುರ ಮೀಸಲು ಅರಣ್ಯದ ಸುತ್ತ ರೈಲ್ವೆ ಬ್ಯಾರಿಕೇಡ್ ನಿರ್ಮಿಸುವುದು ಅಥವಾ ಸೋಲಾರ್ ಬೇಲಿ ಅಳವಡಿಸುವ ಮೂಲಕ ಕಾಡಾನೆಗಳು ಗ್ರಾಮ ಹಾಗೂ ಗದ್ದೆಗಳಿಗೆ ಪ್ರವೇಶಿಸದಂತೆ ಕ್ರಮ ಕೈಗೊಳ್ಳಬೇಕು ಎಂದು ರೈತರು ಒತ್ತಾಯಿಸಿದ್ದಾರೆ. ಹಲವು ಬಾರಿ ಮನವಿ ಸಲ್ಲಿಸಿದರೂ ಯಾವುದೇ ಶಾಶ್ವತ ಕ್ರಮ ಕೈಗೊಳ್ಳಲಿಲ್ಲ. ಇದೀಗ ಕ್ಷೇತ್ರದ ಶಾಸಕರು ರೈತರ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿ, ಶೀಘ್ರವೇ ಬೆಳೆ ರಕ್ಷಣೆಗೆ ಸೂಕ್ತ ವ್ಯವಸ್ಥೆ ಕಲ್ಪಿಸಬೇಕು ಎಂದು ಆಗ್ರಹಿಸಿದ್ದಾರೆ.

ಇದೇ ರೀತಿ ಕಾಡಾನೆಗಳ ದಾಳಿ ಮುಂದುವರಿದರೆ ನಿಲುವಾಗಿಲು ಗ್ರಾಮದ ರೈತರೆಲ್ಲರೂ ಅರಣ್ಯ ಇಲಾಖೆ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ರೈತರಾದ ಎನ್.ಎಂ. ಚಂದ್ರಶೇಖರ್, ಸೋಮಪ್ಪ, ಚಂದ್ರ, ಗೋವಿಂದಯ್ಯ ಮತ್ತಿತರರು ಎಚ್ಚರಿಕೆ ನೀಡಿದ್ದಾರೆ.