ಮಡಿಕೇರಿ, ಸೆ. ೧೦: ನಿನ್ನೆ ದಿನ ಜಿಲ್ಲೆಯಲ್ಲಿ ವಿದ್ಯುತ್ ಸಂಪೂರ್ಣ ಸ್ಥಗಿತಗೊಂಡಿದ್ದು, ತಡರಾತ್ರಿಯಲ್ಲಿ ವಿದ್ಯುತ್ ಸರಬರಾಜು ಮರುಆರಂಭವಾಯಿತು. ಜಿಲ್ಲೆಯಲ್ಲಿ ತಲೆದೋರಿದ ಈ ದಿಢೀರ್ ಗಂಭೀರ ಸಮಸ್ಯೆಯ ಅರಿವಾಗಿ ‘ಶಕ್ತಿ’ಯು ಈ ಕುರಿತು ಮುಖ್ಯಮಂತ್ರಿಯವರ ರಾಜಕೀಯ ಕಾರ್ಯದರ್ಶಿ ಹಾಗೂ ವೀರಾಜಪೇಟೆ ಕ್ಷೇತ್ರದ ಶಾಸಕ ಎ.ಎಸ್. ಪೊನ್ನಣ್ಣ ಅವರ ಗಮನಕ್ಕೆ ತಂದಿತು. ನೂತನ ಮುಖ್ಯಮಂತ್ರಿ ಆಯ್ಕೆ ಬಳಿಕ ನೂರನೇ ದಿನದ ಆಚರಣೆಯ ಸಿದ್ಧತೆಯಲ್ಲಿ ತೊಡಗಿದ್ದ ಪೊನ್ನಣ್ಣ ಅವರು ತಕ್ಷಣವೇ ಸ್ಪಂದಿಸಿ ರಾಜ್ಯ ಇಂಧನ ಸಚಿವ ಕೆ.ಜೆ. ಜಾರ್ಜ್ ಅವರ ಗಮನಕ್ಕೆ ತಂದರು. ಪೊನ್ನಣ್ಣ ಅವರ ಮಾತಿನಲ್ಲಿಯೇ ಹೇಳುವುದಾದರೆ ‘ನಾನು ಸಚಿವರೊಂದಿಗೆ ಈ ಗಂಭೀರ ಸಮಸ್ಯೆ ಬಗ್ಗೆ ಪ್ರಸ್ತಾಪಿಸಿದೊಡನೆ ಕೊಡಗಿನ ಬಗ್ಗೆ ಒಲವು ಹೊಂದಿರುವ ಸಚಿವರು ಕೂಡಲೇ ಹಿರಿಯ ಅಧಿಕಾರಿಗಳೊಂದಿಗೆ ಸಮಾಲೋಚಿಸಿ ನಿನ್ನೆ ದಿನ ಎಷ್ಟು ತಡವಾದರೂ ವಿದ್ಯುತ್ ಕಲ್ಪಿಸುವಂತೆ ಆದೇಶಿಸಿದರು. ಆ ಬಳಿಕ ಅಧಿಕಾರಿಗಳು ಕೂಡಲೇ ಜಾಗೃತಿಗೊಂಡು ವಿದ್ಯುತ್ ಸರಬರಾಜನ್ನು ಸಮರ್ಪಕಗೊಳಿಸಿದರು.
ಇಂದು ಕೂಡ ಪೊನ್ನಣ್ಣ ಅವರು ಈ ಕುರಿತು ‘ಶಕ್ತಿ’ಯಿಂದ ಮಾಹಿತಿ ಪಡೆದು ಈ ಸಮಸ್ಯೆ ಇನ್ನೂ ಮುಂದುವರಿಯುವ ಕುರಿತು ಜಿಲ್ಲೆಯ ಅಧಿಕಾರಿಗಳು ತಿಳಿಸಿದ ವಿಚಾರವನ್ನು ಅವರ ಗಮನಕ್ಕೆ ತರಲಾಯಿತು. ಈ ಕುರಿತು ಮತ್ತೆ ಸಚಿವರೊಂದಿಗೆ ಚರ್ಚಿಸುವುದಾಗಿ ಪೊನ್ನಣ್ಣ ಭರವಸೆಯಿತ್ತರು.
‘ಶಕ್ತಿ’ಗೆ ಅಧಿಕೃತವಾಗಿ ತಿಳಿದುಬಂದAತೆ ಮುಂದಿನ ದಿನಗಳಲ್ಲಿ ‘ಪವರ್ ಕಟ್’ ಅವಧಿ ಹೆಚ್ಚಾಗುವ ಸಾಧ್ಯತೆಯಿದೆ. ಈ ಕುರಿತಾಗಿ ಜಿಲ್ಲಾ ಸೆಸ್ಕ್ನ ಕಾರ್ಯಪಾಲಕ ಅಭಿಯಂತರರಾದ ರಾಮಚಂದ್ರ ಅವರ ಅಭಿಪ್ರಾಯ ಬಯಸಿದಾಗ ಅವರು ಈ ಕುರಿತು ವಿವರಿಸಿದರು. ‘ಪ್ರಸಕ್ತ ವರ್ಷ ಕ್ಷೀಣ ಮಳೆಯಿಂದಾಗಿ ಶರಾವತಿ ಮತ್ತು ಶಿವನ ಸಮುದ್ರದಲ್ಲಿ ಜಲವಿದ್ಯುತ್ ಯೋಜನೆಗಳು ಕುಂಠಿತಗೊAಡಿವೆ. ನೀರಿನ ಅಭಾವದಿಂದಾಗಿ ಸಮರ್ಪಕ ವಿದ್ಯುತ್ ಉತ್ಪಾದನೆಗೆ ಧಕ್ಕೆ ಉಂಟಾಗಿದೆ. ಕೊಡಗಿಗೆ ಹಗಲು ವೇಳೆ ರಾಜ್ಯದ ಸೂರ್ಯಶಕ್ತಿಯಿಂದ ಉತ್ಪಾದಿಸಲ್ಪಡುವ ವಿದ್ಯುತ್ ಸರಬರಾಜಾಗುತ್ತಿದೆ. ರಾತ್ರಿ ವೇಳೆ ಪ್ರಮಖವಾಗಿ ರಾಯಚೂರು ಮತ್ತು ಬಳ್ಳಾರಿಯಲ್ಲಿನ ಥರ್ಮಲ್ ವಿದ್ಯುತ್ ಉತ್ಪಾದನ ಕೇಂದ್ರಗಳಿAದ ಉತ್ಪಾದಿಸಲ್ಪಡುವ ವಿದ್ಯುತ್ ಸರಬರಾಜಾಗುತ್ತಿದೆ. ಆದರೆ, ರಾಜ್ಯದ ಬಹುತೇಕ ಕಡೆಗಳಲ್ಲಿ ಇದೇ ಕೇಂದ್ರದಿAದ ವಿದ್ಯುತ್ ಸರಬರಾಜಾಗುತ್ತಿರುವುದರಿಂದ ಅಲ್ಲಿ ಒತ್ತಡ ಜಾಸ್ತಿಯಾಗುತ್ತಿದೆ. ಹೀಗಾಗಿ ಬೆಂಗಳೂರಿನಲ್ಲಿ ಸರಬರಾಜನ್ನು ನಿಯಂತ್ರಣಗೊಳಿಸಿ ಹರಿಯಬಿಡಲಾಗುತ್ತಿದೆ. ಮುಂದಿನ ದಿನಗಳಲ್ಲಿ ಒಣಹವೆ ಜಾಸ್ತಿಯಾಗುತ್ತಿದ್ದಂತೆ ಮತ್ತೆ ವಿದ್ಯುತ್ ಉತ್ಪಾದನೆಗೆ ಧಕ್ಕೆಯಾಗುವ ಸಾಧ್ಯತೆಯಿದೆ. ಈ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿಯೂ ‘ಪವರ್ ಕಟ್’ ಸಮಯ ಅಧಿಕಗೊಳ್ಳುವ ಆತಂಕ ವ್ಯಕ್ತವಾಗುತ್ತಿದೆ. ಆದರೆ, ಸರಕಾರ ಈ ದಿಸೆಯಲ್ಲಿ ಕ್ರಮಕೈಗೊಳ್ಳಲು ಮುಂದಾಗುತ್ತಿದ್ದು, ಬೇರೆ ಕಡೆಯಿಂದ ವಿದ್ಯುತ್ ಖರೀದಿ ಮಾಡುವ ಸಾಧ್ಯತೆಯಿದೆ ಎಂದು ಹೇಳಲಾಗಿದೆ.
ಸದ್ಯದ ಮಟ್ಟಿಗೆ ಕೊಡಗಿನಲ್ಲಿ ದುರಸ್ತಿ ಸಂದರ್ಭಗಳಲ್ಲಿ ಮಾತ್ರ ಲೈನ್ ಆಫ್ ಮಾಡಲಾಗುತ್ತಿದ್ದು, ಬೇರೆ ಸಂದರ್ಭ ಮೈಸೂರು-ಬೆಂಗಳೂರು ವಿಭಾಗದಿಂದಲೇ ಸರಬರಾಜು ಸ್ಥಗಿತಗೊಂಡರೆ ಸಮಸ್ಯೆ ಎದುರಿಸುವುದು ಅನಿವಾರ್ಯವಾಗಲಿದೆ. ರಾಜ್ಯದ ಇನ್ನೂ ಕೆಲವೆಡೆ ತೀವ್ರ ಬರಪ್ರದೇಶಗಳಲ್ಲಿ ಕೊಳವೆ ಬಾವಿ ನೀರನ್ನೂ ಕುಡಿಯಲು ಬಳಸಲಾಗುತ್ತಿದ್ದು, ಅಲ್ಲಿಯೂ ವಿದ್ಯುತ್ ಸ್ಥಗಿತಗೊಂಡರೆ ಇನ್ನೂ ಹೆಚ್ಚಿನ ಸಮಸ್ಯೆ ಉದ್ಭವಿಸಲಿದೆ ಎಂದು ಮಾಹಿತಿ ನೀಡಿದ್ದಾರೆ.
ತಾಂತ್ರಿಕ ಅಧಿಕಾರಿ ವಿವರಣೆ
ಮಂಗಳವಾರ ಹಾಗೂ ಬುಧವಾರದಂದು ಎರಮಸ್ (ರಾಯಚೂರು) ಮತ್ತು ಬಳ್ಳಾರಿ ಕಲ್ಲಿದ್ದಲು ವಿದ್ಯುತ್ ಸ್ಥಾವರ ಕೇಂದ್ರ ಜನರೇಟಿಂಗ್ ಸ್ಟೇಷನ್‌ನಲ್ಲಿ ದಿಢೀರನೆ ಉತ್ಪಾದನೆಯಲ್ಲಿ ಉಂಟಾದ ತೊಂದರೆಯಿAದಾಗಿ ಕೊಡಗು ಸೇರಿದಂತೆ ಕೆಲವು ಜಿಲ್ಲೆಗಳಲ್ಲಿ ವಿದ್ಯುತ್ ಸಮಸ್ಯೆ ಎದುರಾಗಿತ್ತು. ಇದೀಗ ಇದು ಸರಿಯಾಗುತ್ತಿದ್ದು, ಶುಕ್ರವಾರದ ವೇಳೆಗೆ ಪೂರ್ಣವಾಗಿ ಬಗೆಹರಿಯಲಿದೆ ಎಂದು ಸೆಸ್ಕ್ನ ಮೈಸೂರು ವಿಭಾಗದ ತಾಂತ್ರಿಕ ನಿರ್ದೇಶಕ ಲೋಕೇಶ್ ಅವರು ‘ಶಕ್ತಿ’ಗೆ ಮಾಹಿತಿ ನೀಡಿದ್ದಾರೆ.
ಎಲ್ಲೆಲ್ಲಿ ಸಮಸ್ಯೆ ಎದುರಾಗಿತ್ತು. ಕಾರಣಗಳೇನು ಎಂಬ ಪೂರ್ಣ ಮಾಹಿತಿಯನ್ನು ಪಡೆಯಲಾಗುತ್ತಿದೆ. ‘ಶಾರ್ಟೇಜ್ ಆಫ್ ಪವರ್ ಜನರೇಷನ್’ನಿಂದ ಇದು ಮಧ್ಯಂತರವಾದ ಸಮಸ್ಯೆಯಾಗಿ ಪರಿಣಮಿಸಿತ್ತು. ಇದರಿಂದ ಗ್ರಿಡ್‌ಗಳಿಗೆ ತೊಂದರೆಯಾಗುವುದನ್ನು ತಪ್ಪಿಸಿ ಗ್ರಿಡ್‌ಗಳನ್ನು ಕಾಪಾಡಿಕೊಳ್ಳಲು ವಿದ್ಯುತ್ ಸ್ಥಗಿತವಾಗಿತ್ತು. ಇಲ್ಲದಿದ್ದಲ್ಲಿ ಗ್ರಿಡ್‌ಗಳು ಹಾನಿಗೀಡಾಗುತ್ತಿದ್ದವು ಎಂದು ಅವರು ತಿಳಿಸಿದ್ದಾರೆ. ಇದು ಮಧ್ಯಂತರವಾಗಿ ಎದುರಾದ ಸಮಸ್ಯೆಯಾಗಿದ್ದು ಸರಿಯಾಗಲಿದೆ. ಇದೀಗ ಬಹುತೇಕ ಬಗೆಹರಿದಿದ್ದು ಶುಕ್ರವಾರದ ವೇಳೆಗೆ ಪೂರ್ಣವಾಗಿ ಸರಿಯಾಗಲಿದೆ ಎಂದು ಲೋಕೇಶ್ ಭರವಸೆಯಿತ್ತಿದ್ದಾರೆ.
ಸದ್ಯಕ್ಕೆ ಲೋಡ್ ಶೆಡ್ಡಿಂಗ್ ಇಲ್ಲ
ಸದ್ಯಕ್ಕೆ ಲೋಡ್‌ಶೆಡ್ಡಿಂಗ್ ಮಾಡುವ ವಿಚಾರವಿಲ್ಲ. ಲೋಡ್ ಶೆಡ್ಡಿಂಗ್ ಮಾಡುವುದಾದಲ್ಲಿ ಈ ಬಗ್ಗೆ ಮೊದಲೇ ಮಾಹಿತಿ ನೀಡಲಾಗುವುದು ಎಂದೂ ಅವರು ತಿಳಿಸಿದ್ದಾರೆ.