ಸೋಮವಾರಪೇಟೆ, ಸೆ. ೧೦: ಇಲ್ಲಿನ ಇನ್ನರ್ ವೀಲ್ ಕ್ಲಬ್ ಆಫ್ ಸೋಮವಾರಪೇಟೆ ಗೋಲ್ಡ್ ವತಿಯಿಂದ ಜ್ಞಾನ ವಿಕಾಸ ಆಂಗ್ಲ ಮಾಧ್ಯಮ ಪ್ರಾಥಮಿಕ ಮತ್ತು ಪ್ರೌಢ ಶಾಲೆಯಲ್ಲಿ ಅಂತರರಾಷ್ಟಿçÃಯ ಸಾಕ್ಷರತಾ ದಿನಾಚರಣೆ ಕಾರ್ಯಕ್ರಮ ಜರುಗಿತು.

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ವಕೀಲರಾದ ಹೆಚ್.ಆರ್. ಪವಿತ್ರ ಅವರು, ಸಾಕ್ಷರತೆ ಎಂದರೆ ಕೇವಲ ಸಹಿ ಹಾಕುವುದು, ಓದಲು ಮತ್ತು ಬರೆಯಲು ಕಲಿಯುವುದಷ್ಟೇ ಅಲ್ಲ. ಅದು ನಮ್ಮ ಚಿಂತನೆಯನ್ನು ವಿಸ್ತರಿಸುವ, ಬದುಕನ್ನು ರೂಪಿಸಿಕೊಳ್ಳುವ ಮತ್ತು ಸಮಾಜವನ್ನು ಅರ್ಥಮಾಡಿಕೊಳ್ಳುವ ದಾರಿಯಾಗಿದೆ ಎಂದರು.

ಪ್ರತಿಯೊಬ್ಬರಿಗೂ ಉತ್ತಮ ಶಿಕ್ಷಣ ಸಿಕ್ಕಾಗ ಮಾತ್ರ ಭೂಮಿಯ ರಕ್ಷಣೆ ಮತ್ತು ದೇಶದ ಸಮೃದ್ಧಿ ಸಾಧ್ಯ ಎಂಬುದು ಯುನೆಸ್ಕೋದ ಆಶಯ. ಸಾಕ್ಷರತೆಯ ಮಹತ್ವದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಪ್ರತಿ ವರ್ಷ ಸೆಪ್ಟೆಂಬರ್ ೮ ರಂದು ವಿಶ್ವ ಸಾಕ್ಷರತಾ ದಿನವನ್ನು ಆಚರಿಸಲಾಗುತ್ತದೆ ಎಂದು ತಿಳಿಸಿದರು. ಜಗತ್ತಿನಲ್ಲಿರುವ ಪ್ರತಿಯೊಬ್ಬ ವ್ಯಕ್ತಿಯ ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ಮತ್ತು ವೈಯಕ್ತಿಕ ಹಕ್ಕುಗಳ ಬಗ್ಗೆ ಅರಿವು ಮೂಡಿಸುವುದು ಈ ಆಚರಣೆಯ ಪ್ರಮುಖ ಉದ್ದೇಶವಾಗಿದೆ. ನಮ್ಮ ಆಲೋಚನೆಗಳು ಹಾಗೂ ಭಾವನೆಗಳನ್ನು ಓದು ಹಾಗೂ ಬರವಣಿಗೆಯ ಮೂಲಕ ವ್ಯಕ್ತಪಡಿಸಲು ಸಾಕ್ಷರತೆ ಅತ್ಯವಶ್ಯಕ. ಶಿಕ್ಷಣ ಪಡೆಯುವುದು ಮಾತ್ರವಲ್ಲದೆ ಅದನ್ನು ಮೌಲ್ಯಯುತವಾಗಿ ಬಳಸಿಕೊಂಡಲ್ಲಿ ಸ್ವಸ್ಥ ಸಮಾಜ ಬೆಳವಣಿಗೆಗೆ ಕಾರಣವಾಗುತ್ತದೆ. ಹಾಗಾಗಿ ದೇಶದ ಪ್ರತಿ ಮಗುವು ಉತ್ತಮ ಸಂಸ್ಕಾರ ತುಂಬಿದ ಶಿಕ್ಷಣ ಪಡೆಯುವುದೇ ನಿಜವಾದ ಸಾಕ್ಷರತೆ ಎಂದು ಅಭಿಮತ ವ್ಯಕ್ತಪಡಿಸಿದರು.

ಶಾಲಾ ಮುಖ್ಯೋಪಾಧ್ಯಾಯಿನಿ ಅಣ್ಣಮ್ಮ ಮಾತನಾಡಿ, ಕಲಿಕೆಯಲ್ಲಿ ಹಿಂದುಳಿದ ಮತ್ತು ಮಾನಸಿಕ ಅಸ್ವಸ್ಥ ಮಕ್ಕಳನ್ನು ನಿರ್ಲಕ್ಷ್ಯ ಮಾಡಲಾಗುತ್ತಿದೆ. ಮೊದಲಿಗೆ ನಾವು ಇಂತಹ ಮಕ್ಕಳನ್ನು ಗುರುತಿಸಿ ಅವರಿಗೆ ಕಲಿಕೆಯಲ್ಲಿ ಆಸಕ್ತಿ ಹುಟ್ಟಿಸಬೇಕು. ಆಗ ಮಾತ್ರ ಸಾಕ್ಷರತೆ ದಿನಾಚರಣೆಗೆ ಅರ್ಥ ಬರುತ್ತದೆ ಎಂದರು.

ಇನರ್‌ವೀಲ್ ಕ್ಲಬ್ ಆಫ್ ಸೋಮವಾರಪೇಟೆ ಗೋಲ್ಡ್ನ ಅಧ್ಯಕ್ಷೆ ಲತಾ ಮಂಜು ಮಾತನಾಡಿ, ಶಿಕ್ಷಣ ಪ್ರತಿಯೊಬ್ಬರ ಹಕ್ಕು, ಶಿಕ್ಷಣ ಪಡೆಯುವುದು ಮಾತ್ರವಲ್ಲದೆ ಅದನ್ನು ಬದುಕಿಗೆ ಅಳವಡಿಸಿಕೊಂಡು ಉತ್ತಮ ಪ್ರಜೆಗಳಾಗಬೇಕು ಎಂದು ಕಿವಿಮಾತು ಹೇಳಿದರು. ಇದೇ ಸಂದರ್ಭ ಶಿಕ್ಷಕರ ದಿನಾಚರಣೆ ಅಂಗವಾಗಿ ಶಿಕ್ಷಣ ಕ್ಷೇತ್ರದಲ್ಲಿ ಸಲ್ಲಿಸುತ್ತಿರುವ ಸೇವೆಯನ್ನು ಗುರುತಿಸಿ ಸಹ ಶಿಕ್ಷಕಿ ಬಿ.ಡಿ. ಪ್ರಮೀಳಾ ಮತ್ತು ಉತ್ತಮ ಶಿಕ್ಷಕಿ ಪ್ರಶಸ್ತಿ ಪಡೆದ ಕವಿತಾ ಅವರನ್ನು ಕ್ಲಬ್ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.

ಸಾಕ್ಷರತಾ ದಿನಾಚರಣೆ ಅಂಗವಾಗಿ ಶಾಲೆಯ ವಿದ್ಯಾರ್ಥಿಗಳು ಶಿಕ್ಷಣದ ಮಹತ್ವವನ್ನು ಸಾರುವ ಜಾಗೃತಿ ನಾಟಕವನ್ನು ಪ್ರದರ್ಶಿಸಿದರು. ಶಾಲೆಯ ಎಲ್ಲಾ ಮಕ್ಕಳಿಗೆ ಕ್ಲಬ್ ನ ವತಿಯಿಂದ ಜಾಮಿಟ್ರಿ ಬಾಕ್ಸ್, ರೈಟಿಂಗ್ ಬೋರ್ಡ್ ವಿತರಿಸಲಾಯಿತು. ಕಾರ್ಯಕ್ರಮದಲ್ಲಿ ಕ್ಲಬ್‌ನ ಕಾರ್ಯದರ್ಶಿ ವನಿತಾ ಜಯರಾಂ, ಖಜಾಂಚಿ ಲತಾ ನಾಗೇಶ್, ರಾಜೇಶ್ವರಿ, ನಂದಿತಾ, ದಿವ್ಯ ದಿವಾಕರ್ ಮತ್ತು ಶಾಲೆಯ ಶಿಕ್ಷಕರು, ಸಿಬ್ಬಂದಿಗಳು, ವಿದ್ಯಾರ್ಥಿಗಳು ಭಾಗವಹಿಸಿದ್ದರು.