ಶ್ರೀಮಂಗಲ, ಸೆ. ೧೦: ತೋಟದಲ್ಲಿದ್ದ ಕಾಫಿ ಮತ್ತು ಅಡಿಕೆ ಸಸಿಗಳಿಗೆ ರಾಸಾಯನಿಕ ಸಿಂಪಡಿಸಿ ನಾಶ ಮಾಡಿರುವ ಘಟನೆ ಪೊನ್ನಂಪೇಟೆ ತಾಲೂಕಿನ ಪೊನ್ನಪ್ಪಸಂತೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬೆಸಗೂರು ಗ್ರಾಮದ ಕುರುಗಾವು ಎಂಬಲ್ಲಿ ನಡೆದಿದೆ. ಕುರುಗಾವು ಎಂಬಲ್ಲಿನ ನಿವಾಸಿ ಬಾಚಿಮಾಡ ಕೆ.ಯಶೋಧ ಎಂಬವರ ಕಾಫಿ ತೋಟದ ಬೇಲಿಯ ಬದಿಯಲ್ಲಿ ನೆಡಲಾಗಿದ್ದ ಅಂದಾಜು ೧೦ರಿಂದ ೧೫ ಕಾಫಿ ಹಾಗೂ ಅಡಿಕೆ ಸಸಿಗಳಿಗೆ ಕಿಡಿಗೇಡಿಗಳು ರಾಸಾಯನಿಕ ಸಿಂಪಡಿಸಿ ನಾಶ ಮಾಡಿದ್ದಾರೆ.

ಮನೆಯ ಪಕ್ಕದಲ್ಲಿರುವ ತೋಟಕ್ಕೆ ಮಾಲೀಕರು ಹಾಗೂ ಮಗಳು ಹೋದ ಸಂದರ್ಭ ಸಸಿಗಳು ಸುಟ್ಟು ಒಣಗಿರುವುದು ಕಂಡು ಬಂದಿದೆ. ಪರಿಶೀಲಿಸಿದ ಸಂದರ್ಭ ರಾಸಾಯನಿಕ ಸಿಂಪಡಿಸಿರುವುದು ಪತ್ತೆಯಾಗಿದೆ. ತೋಟದ ಮಾಲೀಕರಾದ ಯಶೋಧ ಅವರ ಮಗಳು ರಕ್ಷಿತಾ ಮಾತನಾಡಿ, ನಾವು ಮನೆಯಲ್ಲಿ ಇಲ್ಲದ ಸಂದರ್ಭ ಯಾರೋ ನಮ್ಮ ತೋಟಕ್ಕೆ ನುಗ್ಗಿ ಅಡಿಕೆ ಹಾಗೂ ಕಾಫಿ ಸಸಿಗಳಿಗೆ ಔಷಧಿ ಹಾಕಿ ನಾಶಪಡಿಸಿದ್ದಾರೆ. ಘಟನೆಯ ಬಗ್ಗೆ ಪೊನ್ನಂಪೇಟೆ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ ಎಂದರು. ಘಟನಾ ಸ್ಥಳಕ್ಕೆ ಪೊನ್ನಂಪೇಟೆ ಠಾಣಾಧಿಕಾರಿ ಅನ್ನಪೂರ್ಣ ಹಾಗೂ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದರು.