ಕುಶಾಲನಗರ, ಸೆ. ೧೦: ಮುಂಬರುವ ಗೌರಿ-ಗಣೇಶ ಹಬ್ಬವನ್ನು ಭಕ್ತಿ ಹಾಗೂ ಸಂಭ್ರಮದೊAದಿಗೆ, ಯಾವುದೇ ಗೊಂದಲಕ್ಕೆ ಅವಕಾಶ ನೀಡದೆ ಜವಾಬ್ದಾರಿಯುತವಾಗಿ ಆಚರಿಸುವಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆರ್.ಎನ್. ಬಿಂದುಮಣಿ ಕರೆ ನೀಡಿದರು.

ಕುಶಾಲನಗರ ರೈತ ಸಹಕಾರ ಭವನದ ಸಭಾಂಗಣದಲ್ಲಿ ಸೋಮವಾರಪೇಟೆ ಹಾಗೂ ಕುಶಾಲನಗರ ತಾಲೂಕು ವ್ಯಾಪ್ತಿಯ ಗಣೇಶೋತ್ಸವ ಸಮಿತಿಗಳ ಪದಾಧಿಕಾರಿಗಳ ಸಭೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಗೌರಿ-ಗಣೇಶ ಮೂರ್ತಿಗಳ ಪ್ರತಿಷ್ಠಾಪನೆ ಹಾಗೂ ವಿಸರ್ಜನೆಗೆ ಸಂಬAಧಿಸಿದAತೆ ಈಗಾಗಲೇ ತಾಲೂಕು ಕಚೇರಿಗಳಲ್ಲಿ ಏಕಗವಾಕ್ಷಿ ಸಮಿತಿಗಳು ಕಾರ್ಯಾರಂಭಿಸಿವೆ. ಗಣೇಶ ಮೂರ್ತಿ ಪ್ರತಿಷ್ಠಾಪನೆ ಹಾಗೂ ವಿಸರ್ಜನೆಗೆ ಸಮಿತಿಗಳು ಕಡ್ಡಾಯವಾಗಿ ಅರ್ಜಿ ಸಲ್ಲಿಸಿ ಅನುಮತಿ ಪಡೆಯಬೇಕು ಎಂದು ತಿಳಿಸಿದರು.

ಪ್ರತಿಷ್ಠಾಪನೆಯಿಂದ ವಿಸರ್ಜನೆಯವರೆಗೆ ನಡೆಯುವ ಎಲ್ಲಾ ಕಾರ್ಯಕ್ರಮಗಳಲ್ಲಿ ಯಾವುದೇ ರೀತಿಯ ಗೊಂದಲ ಉಂಟಾಗದAತೆ ಸಮಿತಿಗಳ ಪದಾಧಿಕಾರಿಗಳು ಹಾಗೂ ಸದಸ್ಯರು ಎಚ್ಚರಿಕೆ ವಹಿಸಬೇಕು. ಶಾಂತಿಯುತವಾಗಿ ಹಬ್ಬ ಆಚರಣೆಗೆ ಪೊಲೀಸ್ ಇಲಾಖೆ ಎಲ್ಲಾ ರೀತಿಯ ಸಹಕಾರ ನೀಡಲಿದೆ. ಪ್ರತಿಯೊಬ್ಬರೂ ಸಹಕರಿಸುವ ಮೂಲಕ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡಬೇಕು ಎಂದರು.

ನಿಯಮ ಉಲ್ಲಂಘನೆಯಾದಲ್ಲಿ ಕಾನೂನು ಪ್ರಕಾರ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದ ಅವರು, ಕಳೆದ ಬಾರಿ ಶೇ.೯೦ರಷ್ಟು ಗಣೇಶೋತ್ಸವ ಕಾರ್ಯಕ್ರಮಗಳು ಯಶಸ್ವಿಯಾಗಿ ನಡೆದಿವೆ. ಹಿಂದಿನ ಬಾರಿ ಕಂಡುಬAದ ನ್ಯೂನತೆ ಹಾಗೂ ಲೋಪದೋಷಗಳನ್ನು ಈ ಬಾರಿ ಸರಿಪಡಿಸಿಕೊಂಡು ಮುನ್ನಡೆಯಬೇಕು ಎಂದು ಸಲಹೆ ನೀಡಿದರು.

ತಾಲೂಕು ತಹಶೀಲ್ದಾರ್ ಕೃಷ್ಣಮೂರ್ತಿ ಮಾತನಾಡಿ, ತಮ್ಮ ಅಧ್ಯಕ್ಷತೆಯಲ್ಲಿ ತಾಲೂಕು ಮಟ್ಟದ ಏಕಗವಾಕ್ಷಿ ಸಮಿತಿಗಳು ಕಾರ್ಯನಿರ್ವಹಿಸುತ್ತಿವೆ. ಗಣೇಶ ಮೂರ್ತಿ ಪ್ರತಿಷ್ಠಾಪನೆಗೆ ತಾ.೧೩ರೊಳಗೆ ಅನುಮತಿ ಪಡೆಯಬೇಕು. ಅರ್ಜಿ ಸ್ವೀಕಾರ ಹಾಗೂ ಅನುಮತಿ ಪ್ರಕ್ರಿಯೆಗಾಗಿ ಶನಿವಾರ ಮತ್ತು ಭಾನುವಾರವೂ ಏಕಗವಾಕ್ಷಿ ಕಚೇರಿಗಳು ಕಾರ್ಯನಿರ್ವಹಿಸಲಿವೆ ಎಂದು ತಿಳಿಸಿದರು.

ಡಿವೈಎಸ್‌ಪಿ ಚಂದ್ರಶೇಖರ್ ಮಾತನಾಡಿ, ಗಣೇಶ ಮೂರ್ತಿ ಪ್ರತಿಷ್ಠಾಪಿಸುವ ಸ್ಥಳಗಳಲ್ಲಿ ಸಿಸಿ ಕ್ಯಾಮೆರಾ ಅಳವಡಿಸುವುದು ಕಡ್ಡಾಯ. ಅಲ್ಲದೆ ದಿನದ ೨೪ ಗಂಟೆಯೂ ಸ್ಥಳದಲ್ಲಿ ಸ್ವಯಂ ಸೇವಕರು ಅಥವಾ ಕಾವಲುಗಾರರನ್ನು ನಿಯೋಜಿಸಬೇಕು ಎಂದು ಸೂಚಿಸಿದರು.

ಈ ಸಂದರ್ಭ ಪೊಲೀಸ್ ಇನ್ಸ್ಪೆಕ್ಟರ್ ದಿನೇಶ್ ಕುಮಾರ್, ಠಾಣಾಧಿಕಾರಿಗಳು, ಪೊಲೀಸ್ ಸಿಬ್ಬಂದಿ, ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ತಾಲೂಕಿನ ವಿವಿಧ ಗಣೇಶೋತ್ಸವ ಸಮಿತಿಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು.

ಸಭೆಯ ಬಳಿಕ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆರ್.ಎನ್. ಬಿಂದುಮಣಿ ಅವರು ಕುಶಾಲನಗರ ಟೌನ್ ಪೊಲೀಸ್ ಠಾಣೆ ಆವರಣದಲ್ಲಿರುವ ಪೊಲೀಸ್ ಸಮುದಾಯ ಭವನದಲ್ಲಿನ ಏಕಗವಾಕ್ಷಿ ಸಮಿತಿ ಕಚೇರಿಗೆ ಭೇಟಿ ನೀಡಿ, ಗಣೇಶ ಮೂರ್ತಿಗಳ ಪ್ರತಿಷ್ಠಾಪನೆ ಹಾಗೂ ವಿಸರ್ಜನೆಗೆ ಸಂಬAಧಿಸಿದAತೆ ಸಲ್ಲಿಕೆಯಾಗಿರುವ ಅರ್ಜಿಗಳು ಮತ್ತು ಅನುಮತಿ ಪ್ರಕ್ರಿಯೆಯ ಕುರಿತು ಅಧಿಕಾರಿ-ಸಿಬ್ಬಂದಿಯಿAದ ಮಾಹಿತಿ ಪಡೆದರು.