ಭಾರತವು ಇಂದು ವಿಶ್ವದ ಅತ್ಯಂತ ಯುವರಾಷ್ಟçಗಳಲ್ಲಿ ಒಂದಾಗಿದೆ. ಸುಮಾರು ೬೫ ಶೇಕಡ ಜನಸಂಖ್ಯೆ ೩೫ ವರ್ಷಕ್ಕಿಂತ ಕಡಿಮೆ ವಯಸ್ಸಿನವರಾಗಿದ್ದು, ದೇಶದ ಜನಸಂಖ್ಯೆಯ ಸುಮಾರು ೨೭ ಶೇಕಡ ಯುವಕರು ೧೫-೨೯ ವರ್ಷದೊಳಗಿನವರು. ಈ ಜನಸಂಖ್ಯಾ ಲಾಭಾಂಶ (ಆemogಡಿಚಿಠಿhiಛಿ ಆiviಜeಟಿಜ) ಭಾರತಕ್ಕೆ ಒಂದು ಐತಿಹಾಸಿಕ ಅವಕಾಶವಾಗಿದೆ. ಆದರೆ ಯುವಶಕ್ತಿಯು ರಾಷ್ಟçಶಕ್ತಿಯಾಗಿ ಪರಿವರ್ತನೆಯಾಗಬೇಕಾದರೆ ಕೇವಲ ಪದವಿಗಳು ಸಾಕಾಗುವುದಿಲ್ಲ. ಗುಣಮಟ್ಟದ ಶಿಕ್ಷಣ, ಕೌಶಲ್ಯಾಭಿವೃದ್ಧಿ, ಉದ್ಯೋಗ ಯೋಗ್ಯತೆ, ವ್ಯಕ್ತಿತ್ವ ವಿಕಸನ ಹಾಗೂ ಮೌಲ್ಯಾಧಾರಿತ ನಾಯಕತ್ವ ಸಮಾನವಾಗಿ ಅಗತ್ಯವಾಗಿವೆ.
ಈ ಹಿನ್ನೆಲೆಯಲ್ಲಿ ಕೊಡಗು ಜಿಲ್ಲೆಯ ಯುವಸಮುದಾಯದ ಭವಿಷ್ಯದ ಬಗ್ಗೆ ಗಂಭೀರ ಚಿಂತನೆ ನಡೆಸುವುದು ಕಾಲದ ಅಗತ್ಯವಾಗಿದೆ. ಕೊಡಗು ಎಂದರೆ ಕೇವಲ ಪ್ರಕೃತಿ ಸೌಂದರ್ಯ, ಕಾಫಿ ತೋಟಗಳು ಮತ್ತು ಪ್ರವಾಸೋದ್ಯಮವಲ್ಲ. ಇದು ಶೌರ್ಯ, ಶಿಸ್ತು ಮತ್ತು ದೇಶಭಕ್ತಿಯ ನೆಲ. ದೇಶದ ಸಶಸ್ತç ಪಡೆಗಳಿಗೆ ಅನೇಕ ಧೀರ ಯೋಧರು, ಅಧಿಕಾರಿಗಳು ಮತ್ತು ಕ್ರೀಡಾಪಟುಗಳನ್ನು ನೀಡಿರುವ ಹೆಮ್ಮೆ ಕೊಡಗಿಗಿದೆ. ಆದರೆ ಇಂದಿನ ಸಾಮಾಜಿಕ ಹಾಗೂ ಆರ್ಥಿಕ ಬದಲಾವಣೆಗಳ ನಡುವೆ ಯುವಕರ ಕನಸುಗಳು, ವೃತ್ತಿ ಆಯ್ಕೆಗಳು ಮತ್ತು ಜೀವನದ ಗುರಿಗಳು ವೇಗವಾಗಿ ಬದಲಾಗುತ್ತಿವೆ. ಜಾಗತೀಕರಣ, ಡಿಜಿಟಲ್ ತಂತ್ರಜ್ಞಾನ ಮತ್ತು ಕೃತಕಬುದ್ಧಿಮತ್ತೆಯ ಯುಗದಲ್ಲಿ ಯಶಸ್ಸಿನ ವ್ಯಾಖ್ಯಾನವೂ ಬದಲಾಗಿದೆ. ಆದ್ದರಿಂದ ಶಿಕ್ಷಣ ವ್ಯವಸ್ಥೆಯೂ ಅದಕ್ಕೆ ಅನುಗುಣವಾಗಿ ರೂಪಾಂತರಗೊಳ್ಳಬೇಕಾಗಿದೆ.
ಇAದಿನ ಅನೇಕ ವಿದ್ಯಾರ್ಥಿಗಳು ಶಿಕ್ಷಣಪೂರ್ಣಗೊಂಡ ತಕ್ಷಣ ಸರ್ಕಾರಿ ಉದ್ಯೋಗವನ್ನೇ ಯಶಸ್ಸಿನ ಅಂತಿಮ ಗುರಿಯೆಂದು ಪರಿಗಣಿಸುತ್ತಾರೆ. ಸರ್ಕಾರಿ ಸೇವೆ ಗೌರವಾನ್ವಿತವಾದ ವೃತ್ತಿಯಾಗಿದ್ದರೂ ಅದು ಯಶಸ್ಸಿನ ಏಕೈಕ ಮಾರ್ಗವಲ್ಲ. ಭಾರತದ ರಕ್ಷಣಾ ಪಡೆಗಳು, ಕೃಷಿ ತಂತ್ರಜ್ಞಾನ, ಪ್ರವಾಸೋದ್ಯಮ, ಕ್ರೀಡೆ, ಮಾಹಿತಿ ತಂತ್ರಜ್ಞಾನ, ಕೃತಕಬುದ್ಧಿಮತ್ತೆ, ಉದ್ಯಮಶೀಲತೆ, ವಿದೇಶಿ ಭಾಷೆಗಳು, ಆರೋಗ್ಯ ಕ್ಷೇತ್ರ ಹಾಗೂ ಕೌಶಲ್ಯಾಧಾರಿತ ವೃತ್ತಿಗಳಲ್ಲಿ ಸಾವಿರಾರು ಅವಕಾಶಗಳು ಲಭ್ಯವಿವೆ. ದುರದೃಷ್ಟವಶಾತ ಗ್ರಾಮೀಣ ಪ್ರದೇಶದ ಅನೇಕ ವಿದ್ಯಾರ್ಥಿಗಳಿಗೆ ಈ ಅವಕಾಶಗಳ ಕುರಿತು ಸಮರ್ಪಕ ಮಾಹಿತಿ ಹಾಗೂ ಮಾರ್ಗದರ್ಶನ ದೊರೆಯುತ್ತಿಲ್ಲ.
ಇತ್ತೀಚಿನ ಅಧ್ಯಯನಗಳು ಒಂದು ಪ್ರಮುಖ ವಿಚಾರವನ್ನು ಸೂಚಿಸುತ್ತವೆ. ಅನೇಕ ಪದವೀಧರರು ವಿದ್ಯಾರ್ಹತೆ ಹೊಂದಿದ್ದರೂ ಕೈಗಾರಿಕೆಗಳು ಹಾಗೂ ಸಂಸ್ಥೆಗಳು ನಿರೀಕ್ಷಿಸುವ ಸಂವಹನ ಕೌಶಲ್ಯ, ಸಮಸ್ಯೆ ಪರಿಹಾರ ಸಾಮರ್ಥ್ಯ, ಡಿಜಿಟಲ್ ಜ್ಞ್ಟಾನ, ತಂಡದಲ್ಲಿ ಕಾರ್ಯನಿರ್ವಹಿಸುವ ಗುಣ ಹಾಗೂ ನಾಯಕತ್ವ ಕೌಶಲ್ಯಗಳಲ್ಲಿ ಕೊರತೆ ಕಾಣಿಸುತ್ತಿದೆ. ಹೀಗಾಗಿ ಇಂದಿನ ಶಿಕ್ಷಣದ ಗುರಿ ಕೇವಲ ಪರೀಕ್ಷೆಯಲ್ಲಿ ಹೆಚ್ಚು ಅಂಕಗಳಿಸುವುದಾಗಿರದೆ, ಉದ್ಯೋಗ ಯೋಗ್ಯ ಮತ್ತು ಸಮಾಜಮುಖಿ ವ್ಯಕ್ತಿಗಳನ್ನು ರೂಪಿಸುವುದಾಗಿರಬೇಕು.
ಯುವಕರ ಯಶಸ್ಸನ್ನು ಅವರ ಅಂಕಪಟ್ಟಿ ನಿರ್ಧರಿಸುವುದಿಲ್ಲ; ಅವರ ಶಿಸ್ತು, ಪರಿಶ್ರಮ, ನಿರಂತರ ಕಲಿಕೆಯ ಮನೋಭಾವ ಹಾಗೂ ಜೀವನದ ಮೇಲಿನ ದೃಷ್ಟಿಕೋನ ನಿರ್ಧರಿಸುತ್ತದೆ. ಭಾರತದ ಅನೇಕ ಉನ್ನತ ಅಧಿಕಾರಿಗಳು, ವಿಜ್ಞಾನಿಗಳು, ಸೇನಾ ನಾಯಕರು ಹಾಗೂ ಉದ್ಯಮಿಗಳು ಗ್ರಾಮೀಣ ಶಾಲೆಗಳಿಂದಲೇ ತಮ್ಮ ಪಯಣ ಆರಂಭಿಸಿದ್ದಾರೆ. ಹೀಗಾಗಿ ಗ್ರಾಮೀಣ ಹಿನ್ನೆಲೆ ಎಂದಿಗೂ ದೌರ್ಬಲ್ಯವಲ್ಲ; ಅದು ಸರಿಯಾದ ಅವಕಾಶ ದೊರೆತರೆ ಶಕ್ತಿಯಾಗಿ ರೂಪುಗೊಳ್ಳಬಲ್ಲ ಅಡಿಪಾಯವಾಗಿದೆ.
ಜಿಲ್ಲೆಯಲ್ಲಿ ಕೃಷಿ ಮತ್ತು ಪ್ರವಾಸೋದ್ಯಮವನ್ನು ಆಧುನಿಕ ತಂತ್ರಜ್ಞಾನದೊAದಿಗೆ ಸಂಯೋಜಿಸುವ ಮೂಲಕ ಸಾವಿರಾರು ಹೊಸ ಉದ್ಯೋಗಗಳನ್ನು ಸೃಷ್ಟಿಸುವ ಸಾಮರ್ಥ್ಯವಿದೆ. ಕಾಫಿ, ಕರಿಮೆಣಸು, ಏಲಕ್ಕಿ, ಜೇನು, ಮಸಾಲೆ ಉತ್ಪನ್ನಗಳು, ಸಾವಯವ ಕೃಷಿ, ಹೋಂಸ್ಟೇಗಳು, ಪರಿಸರ ಪ್ರವಾಸೋದ್ಯಮ, ಸಾಹಸ ಕ್ರೀಡೆಗಳು ಹಾಗೂ ಸ್ಥಳೀಯ ಸಂಸ್ಕೃತಿಯನ್ನು ಆಧರಿಸಿದ ಉದ್ಯಮಗಳು ಯುವಕರಿಗೆ ಸ್ವಯಂ ಉದ್ಯೋಗದ ಹೊಸದಾರಿಗಳನ್ನು ತೆರೆಯಬಲ್ಲವು. ಉದ್ಯೋಗವನ್ನು ಹುಡುಕುವ ಮನೋಭಾವದಿಂದ ಉದ್ಯೋಗವನ್ನು ಸೃಷ್ಟಿಸುವ ಮನೋಭಾವದತ್ತ ಯುವಕರು ಸಾಗಬೇಕಾಗಿದೆ.
ಈ ಪರಿವರ್ತನೆಯಲ್ಲಿ ಪೋಷಕರು, ಶಿಕ್ಷಕರು, ಶಿಕ್ಷಣ ಸಂಸ್ಥೆಗಳು ಹಾಗೂ ಸಮಾಜದ ಪಾತ್ರ ಅತ್ಯಂತ ಮಹತ್ವದ್ದಾಗಿದೆ. ಮಕ್ಕಳ ಮೇಲೆ ತಮ್ಮ ಅಪೂರ್ಣ ಕನಸುಗಳನ್ನು ಹೇರದೆ ಅವರ ಆಸಕ್ತಿ, ಸಾಮರ್ಥ್ಯ ಮತ್ತು ವ್ಯಕ್ತಿತ್ವವನ್ನು ಅರ್ಥಮಾಡಿಕೊಳ್ಳಬೇಕು. ಶಾಲೆಗಳು ಹಾಗೂ ಕಾಲೇಜುಗಳು ಪರೀಕ್ಷಾ ಫಲಿತಾಂಶಗಳಿಗೆ ಮಾತ್ರ ಸೀಮಿತವಾಗದೆ ವೃತ್ತಿಮಾರ್ಗದರ್ಶನ, ಭಾಷಾಕೌಶಲ್ಯ, ಸಂವಹನ, ವ್ಯಕ್ತಿತ್ವ ವಿಕಸನ, ನಾಯಕತ್ವ, ಆರ್ಥಿಕ ಸಾಕ್ಷರತೆ ಹಾಗೂ ಡಿಜಿಟಲ್ ಕೌಶಲ್ಯಗಳನ್ನು ಶಿಕ್ಷಣದ ಅವಿಭಾಜ್ಯ ಭಾಗವನ್ನಾಗಿ ಮಾಡಬೇಕು.
ಯುವಕರಿಗೆ ದಯೆ, ಸಹಾನುಭೂತಿ ಅಥವಾ ಕೇವಲ ಪ್ರೋತ್ಸಾಹದ ಮಾತುಗಳು ಸಾಕಾಗುವುದಿಲ್ಲ. ಅವರಿಗೆ ಗುಣಮಟ್ಟದ ಶಿಕ್ಷಣ, ಸಮಾನ ಅವಕಾಶ, ಸಮರ್ಥ ಮಾರ್ಗದರ್ಶನ ಮತ್ತು ತಮ್ಮ ಪ್ರತಿಭೆಯನ್ನು ಪ್ರದರ್ಶಿಸುವ ವೇದಿಕೆಗಳು ಬೇಕಾಗಿವೆ. ಪ್ರತಿಯೊಬ್ಬ ಯುವಕನು ತನ್ನ ಸಾಮರ್ಥ್ಯವನ್ನು ಅರಿತು ಸಮಾಜದ ಅಭಿವೃದ್ಧಿಗೆ ಕೊಡುಗೆ ನೀಡುವಾಗ ಮಾತ್ರ ಕೊಡಗು ತನ್ನ ವೈಭವವನ್ನು ಇನ್ನಷ್ಟು ಎತ್ತರಕ್ಕೆ ಕೊಂಡೊಯ್ಯಲಿದೆ.
ಯಾವುದೇ ಜಿಲ್ಲೆಯ ಅಭಿವೃದ್ಧಿಯನ್ನು ಅದರ ಕಟ್ಟಡಗಳು ಅಥವಾ ರಸ್ತೆಗಳು ನಿರ್ಧರಿಸುವುದಿಲ್ಲ; ಅದರ ಯುವಜನರ ಕನಸುಗಳು, ಮೌಲ್ಯಗಳು ಮತ್ತು ದೃಷ್ಟಿಕೋನ ನಿರ್ಧರಿಸುತ್ತವೆ. ಆದ್ದರಿಂದ ಕೊಡಗಿನ ಪ್ರತಿಯೊಬ್ಬ ಯುವಕ-ಯುವತಿಯ ಕೈಗೆ ಕೇವಲ ಪದವಿಯನ್ನು ನೀಡುವುದಕ್ಕಿಂತ ಜ್ಞಾನ, ಕೌಶಲ್ಯ, ರಾಷ್ಟಿçÃಯ ಚಿಂತನೆ, ನೈತಿಕ ಮೌಲ್ಯಗಳು ಮತ್ತು ಆತ್ಮವಿಶ್ವಾಸವನ್ನು ನೀಡುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ.
"ಯುವಕರ ಕೈಗೆ ಕೇವಲ ಪದವಿ ನೀಡಿದರೆ ಭವಿಷ್ಯ ನಿರ್ಮಾಣವಾಗುವುದಿಲ್ಲ; ದಿಕ್ಕು, ಮೌಲ್ಯ ಮತ್ತು ಧೈರ್ಯ ನೀಡಿದಾಗ ಮಾತ್ರ ಸಮಾಜದ ಭವಿಷ್ಯ ಬೆಳಗುತ್ತದೆ."