ಮಡಿಕೇರಿ, ಸೆ. ೧೦: ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾಗಿ ಹಾಲಿ ಅಧ್ಯಕ್ಷ ತೀತಿರ ಧರ್ಮಜ ಉತ್ತಪ್ಪ ಅವರನ್ನೇ ಮುಂದುವರಿಸಿ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ ವೇಣುಗೋಪಾಲ್ ಆದೇಶ ಹೊರಡಿಸಿದ್ದಾರೆ.

ಕೊಡಗು ಸೇರಿದಂತೆ ರಾಜ್ಯದ ಕಾಂಗ್ರೆಸ್ ೩೫ ಸಂಘಟನಾತ್ಮಕ ಜಿಲ್ಲೆಗಳ ಅಧ್ಯಕ್ಷರನ್ನು ನೇಮಕ ಮಾಡಲಾಗಿದೆ. ಎಐಸಿಸಿ ಕರ್ನಾಟಕದ ಎಲ್ಲಾ ಜಿಲ್ಲೆಗಳ ಕಾಂಗ್ರೆಸ್ ಅಧ್ಯಕ್ಷರ ಬದಲಾವಣೆ-ಮುಂದುವರಿಕೆಯ ಬಗ್ಗೆ ಸಂಘಟನಾ ಸೃಜನ್ ಮೂಲಕ ಎಲ್ಲಾ ಜಿಲ್ಲೆಗಳಿಗೆ ವೀಕ್ಷಕರನ್ನು ನೇಮಕ ಮಾಡಲಾಗಿತ್ತು. ಕೊಡಗು ಜಿಲ್ಲೆಯ ವೀಕ್ಷಕರಾಗಿ ಕೇರಳದ ಕೋಝಿಕೋಡ್ ಜಿಲ್ಲೆಯ ನಾದಾಪುರಂ ಕ್ಷೇತ್ರದ ಶಾಸಕ ಅಭಿಜಿತ್ ಅವರನ್ನು ನೇಮಕ ಮಾಡಲಾಗಿತ್ತು.

ಆಗಸ್ಟ್ ತಿಂಗಳಲ್ಲಿ ಜಿಲ್ಲೆಯ ಎಲ್ಲಾ ಬ್ಲಾಕ್ ವ್ಯಾಪ್ತಿಯಲ್ಲಿ ಕಾಂಗ್ರೆಸ್ ಮುಖಂಡರ ಹಾಗೂ ಕಾರ್ಯಕರ್ತರ ಅಭಿಪ್ರಾಯವನ್ನು ಪ್ರತ್ಯೇಕವಾಗಿ ಸಂಗ್ರಹಿಸಿದ್ದರು.ಅದಲ್ಲದೇ ಆಕಾಂಕ್ಷಿಗಳೊAದಿಗೆ ನೇರವಾಗಿ ಮಾಹಿತಿ ಪಡೆದು ನಾದಾಪುರಂ ಶಾಸಕ ಅಭಿಜಿತ್ ಅವರು ಎಐಸಿಸಿಗೆ ವರದಿ ಸಲ್ಲಿಸಿದ್ದರು.

೧೦ಕ್ಕೂ ಹೆಚ್ಚು ಆಕಾಂಕ್ಷಿಗಳಿAದ ಅರ್ಜಿ

ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಮೂವರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು ಸೇರಿ ೧೦ಕ್ಕೂ ಹೆಚ್ಚು ಕಾಂಗ್ರೆಸ್ ಮುಖಂಡರು ಅರ್ಜಿ ಸಲ್ಲಿಸಿದ್ದರು.

ಆದರೆ ಧರ್ಮಜ ಉತ್ತಪ್ಪ ಅವರ ಅವಧಿ ಪೂರ್ಣಗೊಳ್ಳದ ಹಿನ್ನೆಲೆ ಹಾಗೂ ಅವರ ಕಾರ್ಯವೈಖರಿಯ ಬಗ್ಗೆ ಹೆಚ್ಚು ಅಸಮಾಧಾನ ವ್ಯಕ್ತವಾಗದ ಹಿನ್ನೆಲೆ ಅವರ ಪರವಾಗಿ ವೀಕ್ಷಕರು ಎಐಸಿಸಿಗೆ ವರದಿ ಸಲ್ಲಿಸಿದ್ದರು. ಧರ್ಮಜ ಉತ್ತಪ್ಪ ಅವರು ೨೦೨೨ರಲ್ಲಿ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡಿದ್ದರು. ಅಧ್ಯಕ್ಷರಾಗಿ ಕೇವಲ ಮೂರು ವರ್ಷ ಮಾತ್ರ ಪೂರ್ಣಗೊಂಡಿತ್ತು.ಇದಕ್ಕೂ ಮೊದಲು ಅವರು ಜಿಲ್ಲಾ ಕಾಂಗ್ರೆಸ್ ಕಾರ್ಯಾಧ್ಯಕ್ಷರಾಗಿದ್ದರು.