ಚಿಕ್ಕಪೇಟೆಯ ಶ್ರೀ ವೀರಾಂಜನೇಯ ಸ್ವಾಮಿ ದೇವಸ್ಥಾನದ ಜಲದರ್ಶಿನಿ ಗಣೇಶೋತ್ಸವ ಸಮಿತಿ ವತಿಯಿಂದ ನಡೆಯುವ ಗಣೇಶೋತ್ಸವಕ್ಕೆ ಸುಮಾರು ಮೂರು ದಶಕಗಳ ರೋಚಕ ಇತಿಹಾಸವಿದೆ. ೧೯೯೮ರಲ್ಲಿ ಛತ್ರಕೆರೆ ಸಮೀಪದ ಜಲದರ್ಶಿನಿ ಬಯಲು ರಂಗಮAಟಪದಲ್ಲಿ ಸ್ಥಾಪಕ ಅಧ್ಯಕ್ಷ ಕೆ.ಜಿ. ವಿಶ್ವನಾಥ್ ಅವರ ಮುಂದಾಳತ್ವದಲ್ಲಿ ಈ ಗಣೇಶೋತ್ಸವಕ್ಕೆ ಚಾಲನೆ ಸಿಕ್ಕಿತ್ತು. ಅಂದು ದಾಮೋದರ್ ಕಾರ್ಯದರ್ಶಿಯಾಗಿ ಹಾಗೂ ಶಶಿ ಖಜಾಂಚಿಯಾಗಿ ಸೇವೆ ಸಲ್ಲಿಸಿ ಉತ್ಸವದ ಬುನಾದಿ ಹಾಕಿದ್ದರು.
೨೦೦೧ರಲ್ಲಿ ಚಿಕ್ಕಪೇಟೆಯಲ್ಲಿ ಶ್ರೀ ವೀರಾಂಜನೇಯ ಸ್ವಾಮಿ ದೇವಸ್ಥಾನ ನಿರ್ಮಾಣಗೊಂಡ ಬಳಿಕ, ಗಣಪತಿ ಮೂರ್ತಿಯನ್ನು ದೇವಸ್ಥಾನದ ಪವಿತ್ರ ಆವರಣದಲ್ಲೇ ಪ್ರತಿಷ್ಠಾಪಿಸಿ ಪೂಜಿಸುವ ಪದ್ಧತಿ ಆರಂಭವಾಯಿತು. ೨೦೦೧ರಿಂದ ವೀರಾಜಪೇಟೆಯ ಐತಿಹಾಸಿಕ ಶೋಭಾಯಾತ್ರೆಯಲ್ಲಿ ಜಲದರ್ಶಿನಿ ಗಣೇಶೋತ್ಸವ ಸಮಿತಿ ನಿರಂತರವಾಗಿ ಭಾಗವಹಿಸುತ್ತಾ ಬಂದಿದೆ.
ಈ ಶೋಭಾಯಾತ್ರೆಯ ಪ್ರಮುಖ ಆಕರ್ಷಣೆಯೆಂದರೆ ಗಣಪತಿಯ ಉತ್ಸವ ಮೂರ್ತಿಯನ್ನು ಆಕರ್ಷಕ ಬೆಳ್ಳಿ ರಥದಲ್ಲಿ ವೀರಾಜಮಾನಗೊಳಿಸಿ ಮೆರವಣಿಗೆಯಲ್ಲಿ ಕರೆದೊಯ್ಯವುದು. ದಾನಿಗಳು ಹಾಗೂ ದೇವಸ್ಥಾನದ ಸಹಕಾರದೊಂದಿಗೆ ಈ ಭವ್ಯ ಪರಂಪರೆ ನಿರಂತರವಾಗಿ ನಡೆದುಕೊಂಡು ಬರುತ್ತಿದೆ.
ಕಳೆದ ೨೭ ವರ್ಷಗಳಿಂದ ಬೆಳೆದುಬಂದಿರುವ ಶ್ರೀ ವೀರಾಂಜನೇಯ ಸ್ವಾಮಿ ದೇವಸ್ಥಾನವು ಭಕ್ತರ ಇಷ್ಟಾರ್ಥಗಳನ್ನು ಈಡೇರಿಸುವ ಮಹಾನ್ ಕ್ಷೇತ್ರವಾಗಿ ಪ್ರಸಿದ್ಧಿ ಪಡೆದಿದೆ.
ಈ ಸಮಿತಿಯ ಹೆಮ್ಮೆ ಎಂದರೆ ಅಧ್ಯಕ್ಷ ಮಾಳೇಟಿರ ಸನ್ನಿ ಕಾರ್ಯಪ್ಪ ಅವರ ಸುದೀರ್ಘ ನಾಯಕತ್ವ. ಕಳೆದ ೨೭ ವರ್ಷಗಳಿಂದ ದೇವಸ್ಥಾನ ಮತ್ತು ಗಣೇಶೋತ್ಸವ ಸಮಿತಿಯಲ್ಲಿ ಅಧ್ಯಕ್ಷರಾಗಿ ಯಶಸ್ವಿಯಾಗಿ ಮುನ್ನಡೆಸಿಕೊಂಡು ಬರುತ್ತಿರುವ ಇವರು, ಎಲ್ಲರನ್ನೂ ಒಟ್ಟುಗೂಡಿಸಿ ಉತ್ಸವವನ್ನು ಕಳೆಗಟ್ಟುವಂತೆ ಮಾಡಿದ್ದಾರೆ.
ಅವರೊಂದಿಗೆ ಉಪಾಧ್ಯಕ್ಷ ಸುನಿಲ್, ಕಾರ್ಯದರ್ಶಿ ಎಂ.ಎಸ್. ವಿಶ್ವನಾಥ್ ಹಾಗೂ ಪ್ರಧಾನ ಅರ್ಚಕರಾದ ಯು. ಸುಬ್ರಮಣ್ಯ ಭಟ್ ಅವರ ಧಾರ್ಮಿಕ ಮಾರ್ಗದರ್ಶನದಲ್ಲಿ ವಿಧಿವಿಧಾನಗಳು ಸಾಂಗವಾಗಿ ನೆರವೇರುತ್ತಿವೆ. ಸಮಿತಿಯ ಪ್ರಮುಖರಾದ ಪಿ.ಆರ್. ರಾಘವೇಂದ್ರ, ಬಿ.ಎಸ್. ಕೃಷ್ಣ, ಜಿ.ಕೆ. ಶಾಂತಕುಮಾರ್, ಕೆ.ಜೆ. ಬಿದ್ದಪ್ಪ, ಬಿ.ಟಿ. ರಂಜನ್ ರೈ, ವಿನಾಯಕ, ದಾಮೋದರ್ ಆಚಾರ್ಯ ಮತ್ತು ಶಶಿ, ಅರ್ಚಕರಾದ ಎನ್ ಜೆ.ಸುಬ್ರಮಣ್ಯ ಭಟ್ ಅವರ ಶ್ರಮ ಈ ಉತ್ಸವದ ಯಶಸ್ಸಿನ ಹಿಂದಿದೆ.
೨೮ನೇ ವರ್ಷದ ಐತಿಹಾಸಿಕ ಶೋಭಾಯಾತ್ರೆಯಲ್ಲಿ ಚಿಕ್ಕಪೇಟೆಯ ಜಲದರ್ಶಿನಿ ಗಣೇಶೋತ್ಸವ ಸಮಿತಿಯ ಬೆಳ್ಳಿ ರಥದ ಮೆರುಗಿನೊಂದಿಗೆ ಭಾಗವಹಿಸುತ್ತಿದೆ. ಈ ಉತ್ಸವವು ಭಕ್ತಾದಿಗಳಿಗೆ ದಿವ್ಯ ಅನುಭೂತಿಯುನ್ನು ನೀಡಲು ಸಂಪೂರ್ಣವಾಗಿ ಸಜ್ಜಾಗಿದೆ.
- ರಜಿತ ಕಾರ್ಯಪ್ಪ, ವೀರಾಜಪೇಟೆ.
ಮೊ: ೯೪೮೧೭೭೧೮೫೧