ಸೋಮವಾರಪೇಟೆ, ಸೆ. ೯: ಪಟ್ಟಣದ ಎಂ.ಜಿ. ರಸ್ತೆಯಲ್ಲಿರುವ ಎಸ್.ಬಿ.ಐ. ಬ್ಯಾಂಕ್‌ನ ಎ.ಟಿ.ಎಂ. ದರೋಡೆ ಯತ್ನ ಹಾಗೂ ಬಾಣಾವರ ರಸ್ತೆಯಲ್ಲಿರುವ ವಾಸದ ಮನೆಯ ದರೋಡೆ ಪ್ರಕರಣಗಳನ್ನು ಭೇದಿಸಲು ಪೊಲೀಸರ ವಿಶೇಷ ತಂಡ ರಚಿಸಲಾಗಿದೆ.

ಕಳೆದ ತಾ. ೪ರ ರಾತ್ರಿ ೨.೦೫ ರ ಸುಮಾರಿಗೆ ಕಾರಿನಲ್ಲಿ ಬಂದ ಇಬ್ಬರು ಮುಸುಕುಧಾರಿಗಳು ಎಸ್‌ಬಿಐ ಬ್ಯಾಂಕ್ ಕಟ್ಟಡಕ್ಕೆ ಹೊಂದಿಕೊAಡಿರುವ ಎಟಿಎಂನ ಒಳಗೆ ನುಗ್ಗಿ ಕಬ್ಬಿಣದ ಸಲಾಕೆಯಿಂದ ಎಟಿಎಂ ಬಾಕ್ಸ್ನ ಮೇಲಿನ ಕವಚವನ್ನು ಮೀಟಿ ಹಣ ದರೋಡೆ ಮಾಡಲು ಯತ್ನಿಸಿದ್ದರು. ಈ ಸಂದರ್ಭ ಹೊರ ಭಾಗದಲ್ಲಿ ಶಬ್ದವಾದ ಹಿನ್ನೆಲೆ ಸ್ಥಳದಿಂದ ಕಾಲ್ಕಿತ್ತಿದ್ದರು. ಕಳ್ಳರ ಚಲನವಲನ ಸಿ.ಸಿ. ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಇಬ್ಬರೂ ಮುಸುಕುಧಾರಿಗಳಾಗಿದ್ದ ಹಿನ್ನೆಲೆ ಮೇಲ್ನೋಟಕ್ಕೆ ಚಹರೆ ಪತ್ತೆಯಾಗಿಲ್ಲ.

೪ಐದನೇ ಪುಟಕ್ಕೆ

(ಮೊದಲ ಪುಟದಿಂದ) ಇದು ಪೊಲೀಸರಿಗೆ ತಲೆನೋವಾಗಿ ಪರಿಣಮಿಸಿದ್ದು, ತನಿಖೆಯನ್ನು ಚುರುಕುಗೊಳಿಸಿದ್ದಾರೆ. ಇದರೊಂದಿಗೆ ೧೫ ದಿನಗಳ ಹಿಂದಷ್ಟೇ ಪಟ್ಟಣದ ಬಾಣಾವರ ರಸ್ತೆಯಲ್ಲಿರುವ ಮನೆಯೊಂದರಲ್ಲಿ ಯಾರೂ ಇಲ್ಲದ ಸಮಯ ನೋಡಿ ಕಳ್ಳರ ಗ್ಯಾಂಗ್ ಕನ್ನ ಹಾಕಿದ್ದು ಬೆಳ್ಳಿ ವಸ್ತುಗಳನ್ನು ಅಪಹರಿಸಿತ್ತು. ಬಾಣಾವರ ರಸ್ತೆಯಲ್ಲಿರುವ ಯತೀಶ್ ಅವರ ಮನೆಗೆ ನುಗ್ಗಿದ ಕಳ್ಳರು ತಲಾ ೫೦ ಗ್ರಾಂ. ಬೆಳ್ಳಿಯ ಗಣಪತಿ ವಿಗ್ರಹ, ಸರಸ್ಪತಿ ವಿಗ್ರಹ, ಲಕ್ಷ್ಮಿ ವಿಗ್ರಹ, ಕುಂಕುಮದ ಬಟ್ಟಲು, ೬೦ ಗ್ರಾಂ ತೂಕದ ೨ ಜೊತೆ ಬೆಳ್ಳಿ ದೀಪ, ಲಾಕರ್‌ನಲ್ಲಿದ್ದ ೨೦ ಗ್ರಾಂ ತೂಕದ ಬೆಳ್ಳಿ ಕಾಲು ಚೈನ್ ಮತ್ತು ೨೦,೦೦೦ ನಗದು ಹಣವನ್ನು ದೋಚಿ ಪರಾರಿಯಾಗಿತ್ತು.

ಇಷ್ಟಕ್ಕೆ ಸುಮ್ಮನಾಗದ ಖದೀಮರು ಅಡುಗೆ ಮನೆಯಲ್ಲಿದ್ದ ಗ್ಯಾಸ್ ಸಿಲಿಂಡರನ್ನೂ ಹೊತ್ತೊಯ್ದಿದ್ದು, ಅಂದಾಜು ೬೫,೦೦೦ ಬೆಲೆಬಾಳುವ ವಸ್ತುಗಳನ್ನು ಕಳವು ಮಾಡಿದ್ದರೂ ಈವರೆಗೆ ಪತ್ತೆಯಾಗಿಲ್ಲ. ಎರಡೂ ಪ್ರಕರಣದಲ್ಲಿ ಒಂದೇ ತಂಡ ಭಾಗಿಯಾಗಿದೆಯೇ ಎಂಬ ಬಗ್ಗೆ ಸಂಶಯಗಳು ಮೂಡಿದ್ದು, ಪೊಲೀಸರ ತನಿಖೆಯಿಂದ ಬಯಲಾಗಬೇಕಿದೆ.

ಚಾಲಾಕಿ ಕಳ್ಳರ ಪತ್ತೆಗೆ ಪೊಲೀಸರ ವಿಶೇಷ ತಂಡ ರಚಿಸಲಾಗಿದ್ದು, ಹಲವಷ್ಟು ಅಪರಾಧ ಪ್ರಕರಣಗಳನ್ನು ಭೇದಿಸಿರುವ ಸಿಬ್ಬಂದಿಗಳನ್ನು ತಂಡದಲ್ಲಿ ನಿಯೋಜಿಸಲಾಗಿದೆ. ಈಗಾಗಲೇ ಪಟ್ಟಣ ವ್ಯಾಪ್ತಿಯಲ್ಲಿ ಅಳವಡಿಸಿರುವ ಸಿ.ಸಿ. ಕ್ಯಾಮೆರಾಗಳ ದೃಶ್ಯಾವಳಿಗಳನ್ನು ಪರಿಶೀಲಿಸುತ್ತಿರುವ ತಂಡ, ಕಳ್ಳರ ಬೆನ್ನು ಬಿದ್ದಿದ್ದು, ಶೀಘ್ರದಲ್ಲೇ ಪತ್ತೆ ಹಚ್ಚಲು ಕಾರ್ಯೋನ್ಮುಖವಾಗಿದೆ. ತಾ. ೫ ರಂದು ಕಳ್ಳತನದ ಬಗ್ಗೆ ಮಾಧ್ಯಮಗಳಲ್ಲಿ ಪ್ರಕಟವಾದ ವರದಿಯಲ್ಲಿನ ಮನೆಯ ಚಿತ್ರ ಅಚಾತುರ್ಯದಿಂದ ಬೇರೊಂದು ಮನೆಯದ್ದಾಗಿದೆ. ಕಳ್ಳತನ ನಡೆದ ಮನೆಯ ಸುತ್ತಮುತ್ತಲಿನ ಪ್ರದೇಶ ಹಾಗೂ ಆ ರಸ್ತೆಯಲ್ಲಿರುವ ಸಿ.ಸಿ. ಕ್ಯಾಮೆರಾಗಳ ಪರಿಶೀಲನೆಯಲ್ಲಿ ಪೊಲೀಸರ ತಂಡ ನಿರತವಾಗಿದೆ.