ಸೋಮವಾರಪೇಟೆ, ಸೆ. ೯: ಕೊಡಗಿನ ರೈತರು ಹಾಗೂ ಜನಸಾಮಾನ್ಯರಿಗೆ ಮಾರಕವಾಗಿರುವ ಕಸ್ತೂರಿ ರಂಗನ್ ವರದಿಯನ್ನು ರಾಜ್ಯ ಹಾಗೂ ಕೇಂದ್ರ ಸರ್ಕಾರ ತಿರಸ್ಕರಿಸಬೇಕು ಎಂದು ಒತ್ತಾಯಿಸಿ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಗಮನ ಸೆಳೆಯುವ ಉದ್ದೇಶದಿಂದ ತಾ. ೧೧ರಂದು (ನಾಳೆ) ಮಡಿಕೇರಿಯಲ್ಲಿ ಬೃಹತ್ ಪ್ರತಿಭಟನೆ ನಡೆಯಲಿದೆ ಎಂದು ರೈತ ಹೋರಾಟ ಸಮಿತಿ ಅಧ್ಯಕ್ಷ ಚಕ್ರವರ್ತಿ ಸುರೇಶ್ ತಿಳಿಸಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಈಗಾಗಲೇ ಕಸ್ತೂರಿ ರಂಗನ್ ವರದಿ ಅನುಷ್ಠಾನ ಸಂಬAಧ ೭ನೇ ಕರಡು ಅಧಿಸೂಚನೆ ಬಂದಿದೆ. ಅಧಿಸೂಚನೆಯ ಪ್ರಕಾರ ಕೊಡಗಿನಲ್ಲಿರುವ ೫೫ ಗ್ರಾಮಗಳನ್ನು ಪಟ್ಟಿ ಮಾಡಲಾಗಿದೆ. ಈ ಗ್ರಾಮಗಳ ಅಂಚಿನಿAದ ೧೦ ರಿಂದ ೧೩ ಕಿ.ಮೀ. ವ್ಯಾಪ್ತಿಗೆ ಈ ವರದಿ ಪ್ರಭಾವ ಬೀರಲಿದೆ. ಹೀಗಾದಲ್ಲಿ ಕೊಡಗಿನ ೨೯೨ ಗ್ರಾಮಗಳಿಗೆ ಸಮಸ್ಯೆ ಎದುರಾಗಲಿದೆ ಎಂದರು.

ಕೆಲವು ನಕಲಿ ಪರಿಸರವಾದಿಗಳು ಜನರ ದಿಕ್ಕು ತಪ್ಪಿಸುವ ಯತ್ನ ನಡೆಸುತ್ತಿದ್ದಾರೆ. ಇವರುಗಳು ತಾ. ೧೧ರ ಪ್ರತಿಭಟನೆಗೆ ಆಗಮಿಸಿ ಕಸ್ತೂರಿ ರಂಗನ್ ವರದಿಯಿಂದ ಆಗುವ ಸಾಧಕ ಬಾಧಕಗಳ ಬಗ್ಗೆ ಚರ್ಚೆ ಮಾಡಲಿ ಎಂದು ಸವಾಲು ಹಾಕಿದರು.

ಅಂದು ಬೆಳಿಗ್ಗೆ ೧೦.೩೦ಕ್ಕೆ ಮಡಿಕೇರಿ ಸುದರ್ಶನ ವೃತ್ತದಿಂದ ಪ್ರತಿಭಟನಾ ಮೆರವಣಿಗೆ ಹೊರಟು ಟೋಲ್‌ಗೇಟ್ ಮುಖಾಂತರ ಗಾಂಧಿ ಮೈದಾನಕ್ಕೆ ತೆರಳಲಾಗುವುದು. ಅಲ್ಲಿ ಬಹಿರಂಗ ಸಭೆ ನಡೆಯಲಿದೆ.

ಸಂಸದರು, ಶಾಸಕರುಗಳು ಹಾಗೂ ಕಸ್ತೂರಿ ರಂಗನ್ ವರದಿ ಅನುಷ್ಠಾನ ವಿರೋಧಿ ಹೋರಾಟ ಸಮಿತಿಯ ಪ್ರಮುಖರು ಭಾಗಿಯಾಗಲಿದ್ದಾರೆ. ನಂತರ ಜಿಲ್ಲಾಧಿಕಾರಿಗಳ ಕಚೇರಿಗೆ ತೆರಳಲಾಗುವುದು ಎಂದು ಚಕ್ರವರ್ತಿ ಸುರೇಶ್ ತಿಳಿಸಿದರು.

ಸಮಿತಿಯ ಕಾನೂನು ಸಲಹೆಗಾರ ಬಿ.ಜೆ. ದೀಪಕ್ ಮಾತನಾಡಿ, ಹಾಲಿ ಸಂಸದರು ಹಾಗೂ ಶಾಸಕರು ರೈತರ ಅಹವಾಲು ಸ್ವೀಕರಿಸಿ ಸರ್ಕಾರದ ಮಟ್ಟದಲ್ಲಿ ಸೂಕ್ತ ನ್ಯಾಯ ಒದಗಿಸಬೇಕೆಂದು ಮನವಿ ಮಾಡಿದರು.

ಗೋಷ್ಠಿಯಲ್ಲಿ ಹೋರಾಟ ಸಮಿತಿ ಕಾರ್ಯದರ್ಶಿ ಕೂತಿ ದಿವಾಕರ್, ನಿರ್ದೇಶಕ ಪ್ರಸಿ ಗೌಡಳ್ಳಿ, ಸದಸ್ಯರಾದ ಜಿತೇಂದ್ರ, ಸುಧೀರ್ ಅವರುಗಳು ಇದ್ದರು.