ಸೂದನ ಈರಪ್ಪ ಹೇಳಿಕೆ

ಮಡಿಕೇರಿ: ತಾ ೬ ರಂದು ಗೌಡ ಸಮಾಜಗಳ ಒಕ್ಕೂಟದ ಸಭೆಯಲ್ಲಿ ಶಾಸಕರ ಉಪಸ್ಥಿತಿಯಲ್ಲಿ ಇನ್ನೊಂದು ಸಮಾಜದ ಕುರಿತು ಪ್ರಸ್ತಾವನೆ ಮಾಡಿರುವುದು ಸರಿಯಾದ ಕ್ರಮವಲ್ಲ, ಇದರಿಂದಾಗಿ ಶಾಸಕರಿಗೆ ಇರುಸು ಮುರುಸು ಆಗಿದೆ ಎಂದು ಕೊಡಗು ಗೌಡ ವಿದ್ಯಾಸಂಘದ ನಿರ್ದೇಶಕ ಸೂದನ ಎಸ್. ಈರಪ್ಪ ಹೇಳಿಕೆ ನೀಡಿದ್ದಾರೆ.

ಕೊಡಗು ಗೌಡ ವಿದ್ಯಾ ಸಂಘದ ಅಧ್ಯಕ್ಷ ಅಂಬೆಕಲ್ಲು ನವೀನ್ ಕುಶಾಲಪ್ಪ ಅವರಿಗೆ ಪತ್ರ ಬರೆದು ತಮ್ಮ ಅಸಮಾಧಾನ ವ್ಯಕ್ತಪಡಿಸಿರುವ ಈರಪ್ಪ ಅವರು, ಕೋವಿಯ ಸಮಸ್ಯೆ, ಜಮ್ಮಾ ಜಾಗದ ಸಮಸ್ಯೆ ಇಂದಿಗೂ ನಮ್ಮನ್ನು ಕಾಡುತ್ತಿದೆ, ಈ ಬಗ್ಗೆ ನಾವು ಕಾನೂನು ರೀತಿಯಲ್ಲಿ ಹೋರಾಟ ನಡೆಸಬಹುದು. ಸಂವಿಧಾನದಲ್ಲಿ ಇದಕ್ಕೆ ಹಕ್ಕು ಇದೆ ಹೊರತು ಇನ್ನೊಂದು ಸಮಾಜದವರನ್ನು ನಿಂದನೆ ಮಾಡುವುದು ಸರಿಯಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಜಿಲ್ಲೆಯಲ್ಲಿ ಎಲ್ಲಾ ವರ್ಗ, ಜಾತಿಯವರು ಕಷ್ಟ ಸುಖಗಳನ್ನು ಹಂಚಿಕೊಳ್ಳುತ್ತಿದ್ದು ಇಂತಹ ಸಂದರ್ಭದಲ್ಲಿ ಗೌಡ ಸಮಾಜಗಳ ಒಕ್ಕೂಟದ ಪ್ರಸ್ತುತ ನಡೆ ಸರಿ ಇಲ್ಲ. ಗೌಡ ಸಮುದಾಯದವರು ಹಾಗೂ ಎಲ್ಲಾ ಸಮಾಜ ಸಂಘಟನೆಗಳು ಗೌಡ ಒಕ್ಕೂಟದ ಅಧೀನದಲ್ಲಿ ಇರಬೇಕೆಂದು ಬಯಸಿದ್ದರೆ ತಪ್ಪು ಎಂದು ಹೇಳಿರುವ ಅವರು, ನಮಗೆ ಯಾವ ನಾಯಕತ್ವವೂ ಬೇಕಿಲ್ಲ ಎಂದಿದ್ದಾರೆ. ಕೆಲವೇ ವ್ಯಕ್ತಿಗಳಿಂದ ಮುಜುಗರ ಆಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದು

ಕೊಡಗು ಗೌಡ ವಿದ್ಯಾ ಸಂಸ್ಥೆ ತನ್ನದೇ ಆದ ಅಸ್ತಿತ್ವವನ್ನು ಹೊಂದಿರುವ ಹಿರಿಯ ಸಂಸ್ಥೆಯಾಗಿದ್ದು ನಾವು ಮುಂದೆ ಒಕ್ಕೂಟದ ಸದಸ್ಯತ್ವದಿಂದ ಹೊರಬೇಕಾಗಿದೆ ಹಾಗೂ ಈ ಬಗ್ಗೆ ಮುಂದಿನ ಸಭೆಯಲ್ಲಿ ಚರ್ಚೆ ಮಾಡಬೇಕು ಎಂದು ಪತ್ರದಲ್ಲಿ ಈರಪ್ಪ ಆಗ್ರಹಿಸಿದ್ದಾರೆ.