ಮಡಿಕೇರಿ, ಸೆ. ೮: ಕಾನೂನಿನ ಅಡಿಯಲ್ಲೇ ಅಗತ್ಯವಿರುವ ಹಲವು ಬೇಡಿಕೆಗಳನ್ನು ಸರ್ಕಾರದ ಮುಂದಿಟ್ಟು ಈ ದಿಸೆಯಲ್ಲಿ ಹಕ್ಕೊತ್ತಾಯವನ್ನು ಕೊಡವ ಜನಾಂಗದ ಹಲವು ಸಂಘಟನೆಗಳು ಮಾಡುತ್ತಿರುವುದು, ತಮಗೆ ಇರುವ ಹಕ್ಕು ಸವಲತ್ತುಗಳನ್ನು ಉಳಿಸಿಕೊಳ್ಳಲು ಮತ್ತು ತಮ್ಮ ಜನಾಂಗ ಬೆಳೆಯಲು, ಪ್ರಗತಿಹೊಂದಲು ಹೊರತು ಇತರೆ ಯಾವುದೇ ಜನಾಂಗದ ಅಥವಾ ಸಮುದಾಯದ ಯಾವುದೇ ಕೋರಿಕೆಗಳ ವಿರುದ್ಧ ಅಪಸ್ವರ ಎತ್ತಿರುವುದಿಲ್ಲ ಎಂದು ಅಖಿಲ ಕೊಡವ ಸಮಾಜ ಹೇಳಿದೆ.

ಕೊಡವ ಜನಾಂಗಕ್ಕೆ ಲಭ್ಯವಿರುವ ಹಕ್ಕು ಮತ್ತು ಸವಲತ್ತುಗಳು ಮತ್ತೊಂದು ಸಮೂದಾಯಕ್ಕೆ ಬೇಕೆನಿಸಿದಲ್ಲಿ ಸರ್ಕಾರಕ್ಕೆ ತಮ್ಮ ಬೇಡಿಕೆಯನ್ನು ಸಲ್ಲಿಸುವ ಎಲ್ಲಾ ಅವಕಾಶಗಳು ಲಭ್ಯವಿದೆ. ಈ ರೀತಿಯ ಪ್ರಯತ್ನಕ್ಕೆ ಕೊಡವ ಸಂಘಟನೆಗಳ ಅಭ್ಯಂತರ ಎಂದೂ ಇರುವುದಿಲ್ಲ ಎಂದು ತಿಳಿಸಿರುವ ಅಧ್ಯಕ್ಷ ಪರದಂಡ ಸುಬ್ರಮಣಿ ಕಾವೇರಪ್ಪ, ಇತರೆ ಜನಾಂಗಗಳಿಗೆ ಸಂವಿಧಾನದ ಅಡಿಯಲ್ಲಿ ಇರುವ ಅವಕಾಶದಂತೆಯೇ, ಕೊಡವರಿಗೂ ತಮ್ಮ ಬೇಡಿಕೆಗಳನ್ನು ಸರ್ಕಾರದ ಮುಂದಿಡುವ, ಹಕ್ಕೊತ್ತಾಯ ಮಾಡುವ ಅವಕಾಶ ಇರುತ್ತದೆ ಎನ್ನುವುದನ್ನು ಎಲ್ಲರೂ ಅರ್ಥಮಾಡಿಕೊಳ್ಳುವುದು ಅತ್ಯಂತ ಅಗತ್ಯ ಎಂದಿದ್ದಾರೆ. ಕೊಡವ ಜನಾಂಗದ ಪರವಾಗಿ ಸಲ್ಲಿಸಿರುವ ಕೋರಿಕೆಗಳನ್ನು ಹಕ್ಕೊತ್ತಾಯಗಳನ್ನು ವಿರೋಧಿಸುವ ಅಥವ ಹತ್ತಿಕ್ಕುವ ಪ್ರಯತ್ನ ಯಾರೇ ಮಾಡಿದರೂ ಅದು ಖಂಡಿತವಾಗಿಯೂ ಉತ್ತಮ ಸಾಮಾಜಿಕ ಬೆಳವಣಿಗೆ ಆಗಲಾರದು ಎಂದಿದ್ದಾರೆ.

ಕೊಡವ ಜನಾಂಗದ ಅಭಿವೃದ್ಧಿಗಾಗಿ ಸರ್ಕಾರದೊಂದಿಗೆ ಕೊಡವ ಸಂಘಟನೆಗಳು ನಡೆಸುತ್ತಿರುವ ಹಕ್ಕೊತ್ತಾಯಗಳ ವಿರುದ್ಧ ನ್ಯಾಯಾಂಗ ಹೋರಾಟ ಮಾಡಲು ಕೊಡಗು ಗೌಡ ಸಮಾಜದ ಒಕ್ಕೂಟ ನಿರ್ಣಯವನ್ನು ತೆಗೆದುಕೊಂಡಿರುವುದಾಗಿ ತಿಳಿದುಬಂದಿದೆ. ಈ ರೀತಿ ಅವರು ನಿರ್ಣಯಿಸಿದ್ದೇ ಆದಲ್ಲಿ ಅದು ಅತ್ಯಂತ ಕೀಳು ಮಟ್ಟದ ನಿರ್ಣಯವಾಗಿದ್ದು ಅಖಿಲ ಕೊಡವ ಸಮಾಜ ಈ ಕ್ರಮವನ್ನು ತೀವ್ರವಾಗಿ ಖಂಡಿಸುತ್ತದೆ ಎಂದು ಹೇಳಿಕೆ ನೀಡಿದ್ದಾರೆ.

ಸೌಹಾರ್ದತೆಯಿಂದ ಬಾಳಬೇಕಿರುವ ಎರಡೂ ಜನಾಂಗಗಳ ಮಧ್ಯೆ ಇಂತಹ ಬೆಳವಣಿಗೆ ಉತ್ತಮ ಗುರಿಯನ್ನು ಹೊಂದಿರುವುದಿಲ್ಲ. ಯಾವುದೇ ಜನಾಂಗವು ತಮ್ಮ ಪ್ರಗತಿಗಾಗಿ ತೆಗೆದುಕೊಳ್ಳುವ ನ್ಯಾಯಯುತ ಕ್ರಮಗಳಿಗೆ ಒತ್ತಾಸೆ ನೀಡುವುದು ಸಹಬಾಳ್ವೆಯ ಪ್ರತೀಕ. ೪ಏಳನೇ ಪುಟಕ್ಕೆ

(ಮೊದಲ ಪುಟದಿಂದ) ಇದು ಸಾಧ್ಯವಾಗದಿದ್ದಲ್ಲಿ ತಟಸ್ಥವಾಗಿರುವುದು ಸಂಭಾವಿತರ ಲಕ್ಷಣ. ವಿರೋಧ ಮಾಡುವುದು ಅಸೂಯೆಯ ಮತ್ತು ದ್ವೇಷದ ಪ್ರತೀಕ. ಕೊಡಗಿನ ಗೌಡ ಜನಾಂಗದಲ್ಲಿ ಎಲ್ಲರೂ ಈ ರೀತಿಯ ಅಸೂಯೆ ಮತ್ತು ದ್ವೇಷದ ಭಾವನೆಯನ್ನು ಕೊಡವರ ವಿರುದ್ಧ ಹೊಂದಿರಲಿಕ್ಕಿಲ್ಲ ಎನ್ನುವ ವಿಚಾರ ನಮ್ಮದು. ನಮ್ಮ ನ್ಯಾಯಯುತ ಪ್ರಯತ್ನಗಳಿಗೆ ಅಡಚಣೆ ತರದಂತೆ, ದ್ವೇಷ ಸಾಧಿಸುವವರಿಗೆ ಬುದ್ಧಿ ಹೇಳುವ ಮೂಲಕ ಜನಾಂಗಗಳ ಬಾಂಧವ್ಯದಲ್ಲಿ ಸೌಹಾರ್ದತೆಯನ್ನು ಬೆಳೆಸುವ ಪ್ರಯತ್ನ ಗೌಡ ಜನಾಂಗದ ಹಿರಿಯರಲ್ಲಿ ಮೂಡಲಿ ಎನ್ನುವುದು ನಮ್ಮ ಆಶಯ ಎಂದು ಸುಬ್ರಮಣಿ ಸಲಹೆ ನೀಡಿದ್ದಾರೆ.