ಸಿದ್ದಾಪುರ, ಸೆ. ೮: ಶಿಕ್ಷಕರ ದಿನಾಚರಣೆಯ ಅಂಗವಾಗಿ ಸಿದ್ದಾಪುರದ ಜಿಎಂಪಿ ಶಾಲೆಯಲ್ಲಿ ಶಿಕ್ಷಕರಿಗಾಗಿ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಆಯೋಜಿಸಲಾಯಿತು.

ಡಾ. ಹೀನಾ ಸಿದ್ದಾಪುರ ಕ್ಲಿನಿಕ್, ನಿಮಾ ಕೊಡಗು ಹಾಗೂ ನಿಮಾ ವುಮೆನ್ಸ್ ಫೋರಂ ಕೊಡಗು ಸಹಯೋಗದಲ್ಲಿ, ಮ್ಯಾನ್‌ಕೈಂಡ್ ಫಾರ್ಮಾ ಸಂಸ್ಥೆಯ ಸಹಕಾರದೊಂದಿಗೆ ಶಿಬಿರ ನಡೆಯಿತು.

ನಿಮಾ ಕೊಡಗು ಅಧ್ಯಕ್ಷ ಡಾ. ರಾಜಾರಾಂ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ, ನಿಮಾ ಸಂಘಟನೆಯ ಆರೋಗ್ಯ ಸೇವಾ ಚಟುವಟಿಕೆಗಳ ಕುರಿತು ಮಾತನಾಡಿದರು.

ಡಾ. ಉದಯಕುಮಾರ್ ಅವರು ಅಧಿಕ ರಕ್ತದೊತ್ತಡ (ಹೈಪರ್‌ಟೆನ್ಷನ್) ಕುರಿತು ಹಾಗೂ ಡಾ. ರೋಷನ್ ಅವರು ಮಧುಮೇಹದ ಕುರಿತು ಮಾಹಿತಿ ನೀಡಿದರು. ಶಬೀನಾ ಕೌಸರ್, ಎಂ.ಡಿ., ಮಣಿಪಾಲ್ ಇನ್‌ಸ್ಟಿಟ್ಯೂಟ್ ಆಫ್ ಕಂಪ್ಯೂಟರ್ ಎಜುಕೇಶನ್, ಮಡಿಕೇರಿ, ಶಿಕ್ಷಕರ ದಿನಾಚರಣೆಯ ವಿಶೇಷ ಸಂದೇಶ ನೀಡಿದರು. ಸಿದ್ದಾಪುರ ಗ್ರಾಮ ಪಂಚಾಯಿತಿ ಪಿಡಿಓ ಸತೀಶ್ ಹಾಗೂ ಶಿಕ್ಷಕಿ ಮೊಲ್ಲಿ ಉಪಸ್ಥಿತರಿದ್ದು ಮಾತನಾಡಿದರು.

ಶಿಬಿರದಲ್ಲಿ ಚೆಟ್ಟಳ್ಳಿ ಕ್ಲಸ್ಟರ್‌ನ ವಿವಿಧ ಸರ್ಕಾರಿ ಶಾಲೆಗಳ ಶಿಕ್ಷಕರು ಭಾಗವಹಿಸಿದ್ದರು. ಡಾ. ಧ್ಯಾನಾ ಅವರು ಆರೋಗ್ಯ ತಪಾಸಣೆ ಹಾಗೂ ವೈದ್ಯಕೀಯ ಸಲಹೆ ನೀಡಿದರು. ಮ್ಯಾನ್‌ಕೈಂಡ್ ಫಾರ್ಮಾದ ಇಂದ್ರೇಶ್ ಅವರು ಮಧುಮೇಹ ತಪಾಸಣೆ ಹಾಗೂ ನ್ಯೂರೋಪತಿ ಪರೀಕ್ಷೆ ನಡೆಸಿದರು.

ಕಾರ್ಯಕ್ರಮದಲ್ಲಿ ಕೇಕ್ ಕತ್ತರಿಸಿ ಶಿಕ್ಷಕರ ದಿನಾಚರಣೆಯನ್ನು ಆಚರಿಸುವುದರ ಜೊತೆಗೆ ಲಕ್ಕಿ ಟೀಚರ್ ಹಾಗೂ ಲಕ್ಕಿ ಸ್ಕೂಲ್ ಆಯ್ಕೆ ಮಾಡಲಾಯಿತು. ಕಾರ್ಯಕ್ರಮವನ್ನು ಡಾ. ಹೀನಾ ನಿರೂಪಿಸಿದರು. ಡಾ. ಧ್ಯಾನಾ ರೋಷನ್ ವಂದಿಸಿದರು. ಬಳಿಕ ಶಿಕ್ಷಕರಿಗಾಗಿ ಉಪಹಾರ ಹಾಗೂ ಮಧ್ಯಾಹ್ನ ಭೋಜನದ ವ್ಯವಸ್ಥೆ ಮಾಡಲಾಗಿತ್ತು.