ಮಡಿಕೇರಿ, ಸೆ. ೮: ವೆಸ್ಟ್ನೆಮ್ಮಲೆ ಗ್ರಾಮದ ಕೆಕೆಆರ್-ತೆರಾಲು ಸಂಪರ್ಕ ರಸ್ತೆಯ ಬೊಮ್ಮಂಜಿ ನದಿ ತಟದಲ್ಲಿ ಅಕ್ರಮವಾಗಿ ಶೆಡ್ ನಿರ್ಮಿಸಿಕೊಂಡು ಸ್ಥಳೀಯರಿಗೆ ತೊಂದರೆ ನೀಡುತ್ತಿರುವವರ ವಿರುದ್ಧ ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ನೆಮ್ಮಲೆ ಗ್ರಾಮ ಸಮಿತಿ ಒತ್ತಾಯಿಸಿದೆ.
ನಗರದ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಮಿತಿ ಸದಸ್ಯ ಚೆಟ್ಟಂಗಡ ರಂಜು ಕರುಂಬಯ್ಯ, ಸರ್ವೆ ನಂಬರ್ ೧/೧ರಲ್ಲಿ ಯಾವುದೇ ಅನುಮತಿ ಪಡೆಯದೆ ಶೆಡ್ ನಿರ್ಮಿಸಿಕೊಂಡು ಕೆಲ ಯುವಕರು ಕ್ಯಾಂಟೀನ್ ನಡೆಸುತ್ತಿದ್ದಾರೆ. ಇಲ್ಲಿ ಅನೈತಿಕ ಚಟುವಟಿಕೆಗಳು ನಡೆಯುತ್ತಿದ್ದು, ಕೆಲವರು ನಶೆಯಲ್ಲಿ ಸಾರ್ವಜನಿಕರೊಂದಿಗೆ ಗಲಾಟೆ ನಡೆಸಿ ಹಲ್ಲೆ ಮಾಡುವ ಮೂಲಕ ಅಶಾಂತಿಯ ವಾತಾವರಣ ನಿರ್ಮಿಸುತ್ತಿದ್ದಾರೆ ಎಂದು ಆರೋಪಿಸಿದರು.
ಇತ್ತೀಚೆಗೆ ಅನಾರೋಗ್ಯಪೀಡಿತ ಗ್ರಾಮಸ್ಥರೊಬ್ಬರ ಮೇಲೆ ಹಲ್ಲೆ ನಡೆಸಲಾಗಿದ್ದು, ಈ ಸಂಬAಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಬಳಿಕ ರಾಜಿ ಸಂಧಾನದ ನೆಪದಲ್ಲಿ ಅವರ ಪುತ್ರನನ್ನು ಕರೆಸಿಕೊಂಡು ಹಲ್ಲೆ ನಡೆಸಲಾಗಿದೆ. ಈ ಘಟನೆಯ ವೀಡಿಯೋ ಸಾಕ್ಷö್ಯವೂ ಇದ್ದು, ಅದನ್ನು ಪೊಲೀಸ್ ಠಾಣೆಗೆ ಸಲ್ಲಿಸಲಾಗಿದೆ ಎಂದು ತಿಳಿಸಿದರು.
ಈ ಹಿನ್ನೆಲೆಯಲ್ಲಿ ಪೊಲೀಸ್ ಠಾಣಾಧಿಕಾರಿ ಹಾಗೂ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ ನೇತೃತ್ವದಲ್ಲಿ ಸಭೆ ನಡೆಸಿ ಸಮಸ್ಯೆಯ ಕುರಿತು ಅಧಿಕಾರಿಗಳಿಗೆ ಮಾಹಿತಿ ನೀಡಲಾಗಿದೆ. ಶೆಡ್ ನಿರ್ಮಾಣಕ್ಕೆ ಯಾವುದೇ ಅನುಮತಿ ಪಡೆಯದಿರುವುದು ಸಭೆಯಲ್ಲಿ ಗಮನಕ್ಕೆ ಬಂದಿದ್ದು, ಅನಧಿಕೃತ ಕಟ್ಟಡವನ್ನು ತೆರವುಗೊಳಿಸುವಂತೆ ಗ್ರಾಮ ಪಂಚಾಯಿತಿ ಸೂಚನೆ ನೀಡಿ, ನೋಟಿಸ್ ಅನ್ನು ಶೆಡ್ಗೆ ಅಂಟಿಸಿದೆ. ಆದರೆ, ನೋಟಿಸ್ ನೀಡಿದ ಬಳಿಕವೂ ಶೆಡ್ನಲ್ಲಿ ಚಟುವಟಿಕೆಗಳು ಮುಂದುವರಿದಿವೆ ಎಂದು ಅವರು ಆರೋಪಿಸಿದರು. ಈ ಕುರಿತು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಮನವಿ ಸಲ್ಲಿಸಲಾಗಿದ್ದು, ಅಕ್ರಮ ಶೆಡ್ ತೆರವುಗೊಳಿಸಿ ಗ್ರಾಮಸ್ಥರಿಗೆ ಸೂಕ್ತ ನ್ಯಾಯ ಒದಗಿಸಬೇಕು ಎಂದು ಒತ್ತಾಯಿಸಲಾಗಿದೆ ಎಂದರು.
ಅಕ್ರಮ ಶೆಡ್ನಲ್ಲಿ ಈ ವ್ಯವಹಾರದಿಂದಾಗಿ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಈ ರಸ್ತೆಯಲ್ಲಿ ಮುಕ್ತವಾಗಿ ಸಂಚರಿಸಲು ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣವಾಗಿದೆ. ಕೂಡಲೇ ಅಧಿಕಾರಿಗಳು ಮಧ್ಯಪ್ರವೇಶಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ರಂಜು ಕರುಂಬಯ್ಯ ಆಗ್ರಹಿಸಿದರು.
ಗೋಷ್ಠಿಯಲ್ಲಿ ಗ್ರಾಮ ಸಮಿತಿ ಅಧ್ಯಕ್ಷ ಕುಂಞAಗಡ ಕೃಷ್ಣ, ಕಾರ್ಯದರ್ಶಿ ಮಾಣಿರ ಉಮೇಶ್, ಮಾಜಿ ಅಧ್ಯಕ್ಷರುಗಳಾದ ಮಾಣಿರ ವಿಜಯ್ ನಂಜಪ್ಪ, ಚೆಟ್ಟಂಗಡ ಡಾಲಿ ಹಾಗೂ ಸದಸ್ಯ ಸಿ.ಸಿ. ಕಾರ್ಯಪ್ಪ ಇದ್ದರು.