ವೀರಾಜಪೇಟೆ: ಬೋಯಿಕೇರಿಯಲ್ಲಿ ಶ್ರೀ ಕೆಂಕೇರಮ್ಮ ವಿಘ್ನೇಶ್ವರ ಸೇವಾ ಸಮಿತಿಯ ಗಣೇಶೋತ್ಸವ ಸಂಭ್ರಮ ಕಳೆಗಟ್ಟಿದೆ.
ಬೋಯಿಕೇರಿಯ ಕೆಂಕೇರಮ್ಮ ದೇವಸ್ಥಾನದ ಪಕ್ಕದಲ್ಲಿರುವ ಸಮುದಾಯ ಭವನದಲ್ಲಿ ಶ್ರೀ ಕೆಂಕೇರಮ್ಮ ವಿಘ್ನೇಶ್ವರ ಸೇವಾ ಸಮಿತಿ ವತಿಯಿಂದ ಗೌರಿ-ಗಣೇಶೋತ್ಸವವು ಗ್ರಾಮೀಣ ಸೌಹಾರ್ದತೆ ಹಾಗೂ ಯುವ ಶಕ್ತಿಯ ಒಕ್ಕೂಟದೊಂದಿಗೆ ವಿಜೃಂಭಣೆಯಿAದ ಜರುಗುತ್ತಿದೆ.
೧೯೮೮ರಲ್ಲಿ ಎಂ.ಡಿ. ಹಾಲಪ್ಪ, ಬಿ.ಎಸ್. ಸುಬ್ರಮಣಿ ಹಾಗೂ ಕುಮಾರ್ ಅವರುಗಳ ವಿಶೇಷ ಮುತುವರ್ಜಿಯಲ್ಲಿ ಈ ಆಚರಣೆಗೆ ಚಾಲನೆ ನೀಡಲಾಯಿತು. ತದನಂತರ, ೧೯೮೯ರಲ್ಲಿ "ವಿಘ್ನೇಶ್ವರ ಸೇವಾ ಸಮಿತಿ" ಎಂದು ಅಧಿಕೃತವಾಗಿ ರಚನೆಯಾಗಿ, ಉತ್ಸಾಹಿ ಯುವಕರ ತಂಡವೊAದು ಇದರ ಉಸ್ತುವಾರಿ ವಹಿಸಿಕೊಂಡಿತು.
ಬಳಿಕ ೨೦೨೪ರಲ್ಲಿ ಮೇಘೇಶ್ ಎಂ.ಎಚ್. ಅವರ ನೇತೃತ್ವದಲ್ಲಿ, ಸಮಿತಿಯ ಸಮಸ್ತ ಸದಸ್ಯರ ಸಮ್ಮುಖದಲ್ಲಿ ಈ ಸಂಘಟನೆಗೆ "ಶ್ರೀ ಕೆಂಕೇರಮ್ಮ ವಿಘ್ನೇಶ್ವರ ಸೇವಾ ಸಮಿತಿ" ಎಂದು ಮರುನಾಮಕರಣ ಮಾಡಲಾಯಿತು. ಇಷ್ಟು ವರ್ಷಗಳ ಕಾಲ ದೇವಸ್ಥಾನದ ಆವರಣದಲ್ಲೇ ಮೂರ್ತಿ ಪ್ರತಿಷ್ಠಾಪನೆ ನಡೆಯುತ್ತಿದ್ದು, ಪ್ರಸ್ತುತ ಕೆಂಕೇರಮ್ಮ ದೇವಾಲಯದಲ್ಲಿ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿರುವುದರಿಂದ ಪಕ್ಕದ ಸಮುದಾಯ ಭವನದಲ್ಲಿ ಪೂಜಾ ಕೈಂಕರ್ಯಗಳನ್ನು ನೆರವೇರಿಸಲಾಗುತ್ತಿದೆ.
೧೧ ದಿನಗಳ ಕಾಲ ನಡೆಯುವ ಈ ಉತ್ಸವದ ಸಂದರ್ಭ ಸ್ಥಳೀಯ ಗ್ರಾಮೀಣ ಮಕ್ಕಳಲ್ಲಿರುವ ಕಲಾಪ್ರತಿಭೆಯನ್ನು ಪ್ರೋತ್ಸಾಹಿಸಲು ವಿಶೇಷ ಸಾಂಸ್ಕöÈತಿಕ ವೇದಿಕೆ ಕಲ್ಪಿಸಲಾಗುತ್ತದೆ. ಮಹಿಳೆಯರಿಗಾಗಿ ಹಗ್ಗಜಗ್ಗಾಟ ಸೇರಿದಂತೆ ವಿವಿಧ ಆಟೋಟ ಹಾಗೂ ಕ್ರೀಡಾ ಸ್ಪರ್ಧೆಗಳನ್ನು ಆಯೋಜಿಸಲಾಗುತ್ತದೆ. ಎರಡು ದಿನಗಳ ಕಾಲ ಬೋಯಿಕೇರಿಯ ಸಮಸ್ತ ಗ್ರಾಮಸ್ಥರು ಒಂದಾಗಿ ಹಬ್ಬದ ಸಂಭ್ರಮದಲ್ಲಿ ಮಿಂದೇಳುತ್ತಾರೆ.
ಸುತ್ತಮುತ್ತಲಿನ ಗ್ರಾಮಸ್ಥರು ಸ್ವಯಂಪ್ರೇರಿತ ರಾಗಿ ನೀಡುವ ಚಂದಾ ಹಣದಿಂದಲೇ ಈ ಧಾರ್ಮಿಕ ಕಾರ್ಯಕ್ರಮ ನೆರವೇರುತ್ತಿದ್ದು, ಪ್ರಸ್ತುತ ಸಮಿತಿಯು ೫೦ಕ್ಕೂ ಹೆಚ್ಚು ಕ್ರಿಯಾಶೀಲ ಸದಸ್ಯರನ್ನು ಒಳಗೊಂಡಿದೆ. ಹಬ್ಬದ ಸಂದರ್ಭದಲ್ಲಿ ಸಂಗ್ರಹವಾಗುವ ಹಣವನ್ನು ಕೇವಲ ಆಚರಣೆಗೆ ಸೀಮಿತಗೊಳಿಸದೆ, ದೇವಾಲಯದ ಜೀರ್ಣೋದ್ಧಾರಕ್ಕೆ ವಿನಿಯೋಗಿಸುತ್ತಿರುವುದು ಇಲ್ಲಿನ ಯುವಕರ ವಿಶೇಷತೆ. ಅಧ್ಯಕ್ಷರಾಗಿ ವಸಂತ್, ಕಾರ್ಯದರ್ಶಿ ಲವ ಪಿ.ಆರ್., ಖಜಾಂಚಿ ಮನೋಹರ್ ಟಿ.ಎಸ್., ನಿರ್ದೇಶಕ ಮಂಗೇಶ್ ಎಂ.ಎಚ್. ಸೇರಿದಂತೆ ಹಲವರ ಸಾರಥ್ಯದಲ್ಲಿ ಸಮಿತಿ ಮುಂದುವರೆದಿದೆ.
ಧಾರ್ಮಿಕ ಕಾರ್ಯದ ಜೊತೆಗೆ ಗ್ರಾಮದ ಅಭಿವೃದ್ಧಿಗೆ ಕೈಜೋಡಿಸಿರುವ ಬೋಯಿಕೇರಿಯ ಶ್ರೀ ಕೆಂಕೇರಮ್ಮ ವಿಘ್ನೇಶ್ವರ ಸೇವಾ ಸಮಿತಿಯ ಕಾರ್ಯಕ್ಕೆ ಇಡೀ ಗ್ರಾಮವೇ ಬೆನ್ನೆಲುಬಾಗಿ ನಿಂತಿದೆ.
- ರಜಿತ ಕಾರ್ಯಪ್ಪ, ವೀರಾಜಪೇಟೆ.
ಮೊ: ೯೪೮೧೭೭೧೮೫೧
ವಿವಿಧೆಡೆ ಕೃಷ್ಣ ಜನ್ಮಾಷ್ಟಮಿ
ಸೋಮವಾರಪೇಟೆ : ಸಮೀಪದ ಸಾಂದೀಪನಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿ ಹಬ್ಬವನ್ನು ಭಕ್ತಿ ಹಾಗೂ ಸಂಭ್ರಮದಿAದ ಆಚರಿಸಲಾಯಿತು.
ಕಾರ್ಯಕ್ರಮವನ್ನು ಶಾಲಾ ಮುಖ್ಯೋಪಾಧ್ಯಾಯಿನಿ ರೇವತಿ ಉದ್ಘಾಟಿಸಿದರು. ಶ್ರೀ ಕೃಷ್ಣನಿಗೆ ಅಲಂಕಾರ, ಅಭಿಷೇಕ, ವಿಶೇಷ ಪೂಜೆ ಮಾಡಲಾಯಿತು. ಮಕ್ಕಳಿಗೆ ಶ್ರೀ ಕೃಷ್ಣ ಮತ್ತು ರಾಧೆಯ ವೇಷಭೂಷಣ ಸ್ಪರ್ಧೆ, ಮುದ್ದುಕೃಷ್ಣ, ಬಾಲಕೃಷ್ಣ ಛದ್ಮವೇಷ ಸ್ಪರ್ಧೆ ಹಾಗೂ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು. ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ಇದೇ ಸಂದರ್ಭ ಶಾಲೆಗೆ ಶ್ರೀ ಕೃಷ್ಣನ ವಿಗ್ರಹವನ್ನು ಕೊಡುಗೆಯಾಗಿ ನೀಡಿದ ಪೋಷಕರಾದ ಉಷಾ ಚೇತನ್ ಹಾಗೂ ಭವ್ಯ ಹರೀಶ್ ಅವರನ್ನು ಸನ್ಮಾನಿಸಲಾಯಿತು.
ವಿದ್ಯಾರ್ಥಿಗಳಿಗೆ ಕೃಷ್ಣನ ಸಂದೇಶಗಳನ್ನು ತಿಳಿಸಲಾಯಿತು. ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು, ಶಿಕ್ಷಕರು, ಬೋಧಕೇತರ ವರ್ಗ, ಶಾಲಾಡಳಿತ ಮಂಡಳಿ ಪದಾಧಿಕಾರಿಗಳು ಇದ್ದರು.
ವಿವಿಧೆಡೆ ಕೈಲ್‌ಪೊಳ್ದ್ ಆಚರಣೆ
ಪೊನ್ನಂಪೇಟೆ : ಪೊನ್ನಂಪೇಟೆ ತಾಲೂಕಿನ ನಡಿಕೇರಿ ಗ್ರಾಮದ ಅಂಬಲದಲ್ಲಿ ಸಾಂಪ್ರದಾಯಿಕ ಕೈಲ್‌ಪೊಳ್ದ್ ಹಬ್ಬವನ್ನು ಆಚರಿಸಲಾಯಿತು.
ಗ್ರಾಮಸ್ಥರು ಮೆರವಣಿಗೆಯ ಮೂಲಕ ಊರಿನ ಅಂಬಲಕ್ಕೆ ಆಗಮಿಸಿದರು. ಬಳಿಕ ಊರಿನ ಹಿರಿಯರಾದ ಚಟ್ಟಮಾಡ ವಿಠಲ ಅವರು ತೆಂಗಿನಕಾಯಿಗೆ ಗುಂಡು ಹಾರಿಸುವ ಮೂಲಕ ಹಬ್ಬಕ್ಕೆ ಚಾಲನೆ ನೀಡಿದರು. ನಂತರ ಅಂಬಲದಲ್ಲಿ ಕೋವಿ ಹಾಗೂ ಕೃಷಿ ಪರಿಕರಗಳಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು.
ಹಬ್ಬದ ಅಂಗವಾಗಿ ಗ್ರಾಮಸ್ಥರಿಗೆ ತೆಂಗಿನಕಾಯಿಗೆ ಗುಂಡು ಹೊಡೆಯುವ ಸ್ಪರ್ಧೆ ಆಯೋಜಿಸಲಾಗಿತ್ತು. ಸ್ಪರ್ಧೆಯಲ್ಲಿ ಕಳ್ಳಿಚಂಡ ಮಂಜು ಪ್ರಥಮ, ಡಾ. ಕೋಳೆರ ಕಾರ್ತಿಕ್ ದ್ವಿತೀಯ ಹಾಗೂ ಕಳ್ಳಿಚಂಡ ಕವನ್ ತೃತೀಯ ಬಹುಮಾನ ಪಡೆದುಕೊಂಡರು. ಮಹಿಳೆಯರಿಗಾಗಿ ತೆಂಗಿನಕಾಯಿಗೆ ಕಲ್ಲು ಎಸೆಯುವ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು.
ಈ ಸಂದರ್ಭ ಊರಿನ ಪ್ರಮುಖರಾದ ಕೋಳೆರ ವೆಂಕಟೇಶ್ ಮಾತನಾಡಿ ಕೈಲ್‌ಪೊಳ್ದ್ ಹಬ್ಬದ ಮಹತ್ವ ಹಾಗೂ ಸಾಂಪ್ರದಾಯಿಕ ಆಚರಣೆಗಳ ಕುರಿತು ನೆರೆದಿದ್ದವರಿಗೆ ತಿಳಿಸಿದರು.
ಮುಂದಿನ ಪೀಳಿಗೆಯು ಕೊಡವ ಸಂಸ್ಕೃತಿ ಮತ್ತು ಸಂಪ್ರದಾಯಗಳನ್ನು ಅರಿತು, ಇಂತಹ ಆಚರಣೆಗಳನ್ನು ಮುಂದುವರಿಸಿ ಕೊಂಡು ಹೋಗಬೇಕು ಎಂದು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಗ್ರಾಮದ ಹಿರಿಯರು, ಕಿರಿಯರು, ಮಹಿಳೆಯರು ಹಾಗೂ ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.