ಚೆಯ್ಯಂಡಾಣೆ, ಸೆ. ೮: ಮದರ್ ಥೆರೇಸಾ ಸೇವಾ ಕೇಂದ್ರದ ಸಾಮಾಜಿಕ ಕಳಕಳಿ ಶ್ಲಾಘನೀಯವಾಗಿದೆ ಎಂದು ವೀರಾಜಪೇಟೆಯ ಸಂತ ಅನ್ನಮ್ಮ ಚರ್ಚ್ನ ಪ್ರಧಾನ ಗುರುಗಳು ಹಾಗೂ ಸಂತ ಅನ್ನಮ್ಮ ವಿದ್ಯಾಸಂಸ್ಥೆಗಳ ವ್ಯವಸ್ಥಾಪಕ ಜೇಮ್ಸ್ ಡೊಮಿನಿಕ್ ಅವರು ಅಭಿಪ್ರಾಯಪಟ್ಟರು.
ಅವರು ಸಂತ ಅನ್ನಮ್ಮ ದ್ವಿ ಶತಮಾನೋತ್ಸವ ಸಭಾಂಗಣದಲ್ಲಿ ಮದರ್ ಥೆರೇಸಾ ಸೇವಾ ಕೇಂದ್ರದ ವತಿಯಿಂದ ಆಯೋಜಿಸಲಾಗಿದ್ದ ಹಿರಿಯರ ದಿನಾಚರಣೆ ಹಾಗೂ ಮದರ್ ಥೆರೇಸಾ ಜನ್ಮ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು. ಈ ಕಾರ್ಯಕ್ರಮದಲ್ಲಿ ಹಿರಿಯರನ್ನು ಗೌರವಿಸುವುದು ವಿಶೇಷವಾಗಿದ್ದು, ಮದರ್ ಥೆರೇಸಾ ಸೇವಾ ಕೇಂದ್ರವು ವ್ಯಕ್ತಿತ್ವವನ್ನು ಗುರುತಿಸಿ ಪ್ರಶಂಸಿಸುವ ಕಾರ್ಯವನ್ನು ಮಾಡುತ್ತಿದೆ ಎಂದರು.
ಅಧ್ಯಕ್ಷತೆಯನ್ನು ವಹಿಸಿದ್ದ ಮದರ್ ಥೆರೇಸಾ ಸೇವಾ ಕೇಂದ್ರದ ಅಧ್ಯಕ್ಷರು ಹಾಗೂ ನಿವೃತ್ತ ಡಿಡಿಪಿಐ ಪೆರಿಗ್ರಿನ್ ಮಚ್ಚಾಡೋ ಮಾತನಾಡಿ, ಮದರ್ ಥೆರೇಸಾ ಸೇವಾ ಕೇಂದ್ರವು ಆರಂಭವಾಗಿ ಐದು ವರ್ಷಗಳಾಗಿದ್ದು ಮದರ್ ಥೆರೇಸಾ ಅವರ ಸೇವೆಯು ನಮಗೆ ಪ್ರೇರಣೆಯಾಗಿದೆ. ಸಾಧನೆಯನ್ನು ಪ್ರೀತಿಯಿಂದ ಮಾಡಿದರೆ ಅದು ಮಹತ್ತರವಾಗಿರುತ್ತದೆ.
ಕೇಂದ್ರದ ವತಿಯಿಂದ ಇಲ್ಲಿಯವರೆಗೆ ಹದಿನಾಲ್ಕು ಲಕ್ಷ ವೆಚ್ಚದಲ್ಲಿ ಔಷಧೋಪಚಾರ ವಿತರಣೆ, ಮೂರು ಲಕ್ಷಕಿಂತಲೂ ಅಧಿಕ ಮೊತ್ತದಲ್ಲಿ ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸಕ್ಕೆ ನೆರವು ಹಾಗೂ ಸಾಮಗ್ರಿಗಳನ್ನು ವಿತರಿಸಲಾಗಿದೆ.
ಸರ್ವ ಸದಸ್ಯರುಗಳ ಸಹಕಾರ ಹಾಗೂ ಪ್ರೋತ್ಸಾಹದಿಂದ ಕೇಂದ್ರವು ಮುನ್ನಡೆಯುತ್ತಿದ್ದು ಹಿರಿಯರ ಮಾರ್ಗದರ್ಶನ ನಿರಂತರವಾಗಿ ಸಿಗುತ್ತಿದೆ ಎಂದು ಹೇಳಿದರು. ಬೆನೆಡಿಕ್ಟ್ ಸಲ್ಡಾನಾ ಅವರು ಸ್ವರಚಿತ ಹಾಡನ್ನು ಹಾಡಿದರು. ನೋಹ ವಿವೇಕ್ ಹಾಗೂ ವಾಯಿಲೆಟ್ ಡಿಸೋಜ ನಿರೂಪಿಸಿ, ಜಾನ್ ಪ್ರಕಾಶ್ ತಂಡ ಪ್ರಾರ್ಥಿಸಿ, ಮದರ್ ಥೆರೇಸಾ ಸೇವಾ ಕೇಂದ್ರದ ಉಪಾಧ್ಯಕ್ಷ ಮಾರ್ಟಿನ್ ಬರ್ನಾಡ್ ಸ್ವಾಗತಿಸಿ, ಸೇವಾ ಕೇಂದ್ರದ ಖಜಾಂಚಿ ಜೇಮ್ಸ್ ಮೆನೆಜಸ್ ವಂದಿಸಿದರು. ವೇದಿಕೆಯಲ್ಲಿ ಸಿಸ್ಟರ್ ರೋಸಿ ಡೈಸಾ, ಸಹಾಯಕ ಗುರುಗಳಾದ ವಿಲ್ಫೆçಡ್ ಅಂತೋಣಿ, ಹಿರಿಯರಾದ ಟೋನಿ ಮೆನೆಜಸ್, ಲಿಲ್ಲಿ ಜೋಸೆಫ್ ಹಾಗೂ ಎವೆಲಿನ್ ಪ್ಯಾರೆಟ್, ಕಾರ್ಯದರ್ಶಿ ಅನಿತಾ ನರೋನ ಉಪಸ್ಥಿತರಿದ್ದರು.
ಈ ಸಂದರ್ಭ ಹಿರಿಯ ನಾಗರಿಕರು, ಮದರ್ ಥೆರೇಸಾ ಸೇವಾ ಕೇಂದ್ರದ ಸದಸ್ಯರುಗಳು, ಧರ್ಮ ಕೇಂದ್ರದ ಭಕ್ತಾದಿಗಳು ಉಪಸ್ಥಿತರಿದ್ದರು. ಸಭಾ ಕಾರ್ಯಕ್ರಮದ ಬಳಿಕ ಹಿರಿಯ ನಾಗರಿಕರಿಗೆ ಮನೋರಂಜನಾ ಕ್ರೀಡೆಗಳನ್ನು ಆಯೋಜಿಸಲಾಗಿತ್ತು. ಆಕರ್ಷಕ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.
ಸಾಧಕರಿಗೆ ಹಾಗೂ ಹಿರಿಯ ನಾಗರಿಕರಿಗೆ ಸನ್ಮಾನ
ಸಮಾರಂಭದಲ್ಲಿ ಸಮಾಜ ಸೇವೆ ಹಾಗೂ ಮುದ್ರಣ ಕ್ಷೇತ್ರದಲ್ಲಿ ಸಾಧನೆಯನ್ನು ಮಾಡಿದ ಪೌಲ್ ಕ್ಷೇವಿಯರ್, ವೀರಾಜಪೇಟೆಯ ಆರ್ಮಿ ಆಸ್ಪತ್ರೆಯ ವೈದ್ಯೆ ಡಾ. ಜಾಯಿಲಿನ್ ಮೆನೆಜಸ್, ಕ್ರೀಡಾ ಕ್ಷೇತ್ರದಲ್ಲಿ ಸಾಧನೆಯನ್ನು ಮಾಡಿದ ಆಲ್ವಿನ್ ಅಂತೋಣಿ, ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕಿ ಪ್ರಶಸ್ತಿಯನ್ನು ಪಡೆದ ಅನ್ರಿಟ ಫ್ರೂಟಾಡೊ, ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಸಾಧನೆಗೈದ ಡೀನ್ ಸಾಲ್ವೋ ಡಿಸೋಜ, ಪಿಯುಸಿ ಪರೀಕ್ಷೆಯಲ್ಲಿ ಸಾಧನೆಯನ್ನು ಮಾಡಿದ ಜೆನ್ಸಿ ಎ. ಡೇವಿಡ್ ಅವರನ್ನು ಸನ್ಮಾನಿಸಿ, ಗೌರವಿಸಲಾಯಿತು. ೭೫ ವರ್ಷ ಮೇಲ್ಪಟ್ಟ ಒಟ್ಟು ೫೫ ಹಿರಿಯ ನಾಗರಿಕರನ್ನು ಸನ್ಮಾನಿಸಿ ಗೌರವಿಸಲಾಯಿತು.