ಮಡಿಕೇರಿ, ಸೆ. ೮: ಅಂಬೇಡ್ಕರ್ ಹಾಗೂ ಪರಿಶಿಷ್ಟ ಜಾತಿ, ಪಂಗಡ ಸಮುದಾಯದ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಅವಹೇಳನ ಹೇಳಿಕೆ ನೀಡಿದ್ದ ವ್ಯಕ್ತಿಯನ್ನು ಗಡಿಪಾರು ಮಾಡುವುದರೊಂದಿಗೆ ಕಠಿಣ ಕ್ರಮಕೈಗೊಳ್ಳಬೇಕೆಂದು ಒತ್ತಾಯಿಸಿ ದಲಿತ ಸಂಘಟನೆಗಳ ಒಕ್ಕೂಟ ನಗರದ ಜಿಲ್ಲಾಡಳಿತ ಭವನ ಎದುರು ಪ್ರತಿಭಟನೆ ನಡೆಸಿತು.

ಜಿಲ್ಲಾಡಳಿತ ಭವನ ಎದುರು ಜಮಾಯಿಸಿದ ಪ್ರತಿಭಟನಾನಿರತರು ಮಂಡ್ಯದ ವೇದಮೂರ್ತಿ ಎಂಬಾತ ಅಂಬೇಡ್ಕರ್ ಹಾಗೂ ಪರಿಶಿಷ್ಟ ಸಮುದಾಯದ ವಿರುದ್ಧ ನೀಡಿರುವ ಹೇಳಿಕೆಯನ್ನು ಖಂಡಿಸಿ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಅಪರ ಜಿಲ್ಲಾಧಿಕಾರಿ ಸಹನಾ ಹಾದಿಮನಿ ಅವರ ಮೂಲಕ ಸರಕಾರಕ್ಕೆ ಮನವಿ ಸಲ್ಲಿಸಿ ಕ್ರಮಕ್ಕೆ ಒತ್ತಾಯಿಸಿದರು,

ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಚಾಲಕ ಹೆಚ್.ಎಲ್.ದಿವಾಕರ್ ಮಾತನಾಡಿ, ಈ ಘಟನೆಯಿಂದ ದಲಿತ ಸಮುದಾಯಕ್ಕೆ ತೀವ್ರ ರೀತಿಯ ನೋವಾಗಿದ್ದು, ಎಲ್ಲಾ ಪಕ್ಷದ ನಾಯಕರು ಇದನ್ನು ಸಾಮೂಹಿಕವಾಗಿ ಖಂಡಿಸಬೇಕಾಗಿತ್ತು. ಅಂಬೇಡ್ಕರ್ ಹೆಸರನ್ನು ಕೇವಲ ಮತಬ್ಯಾಂಕ್‌ಗೆ ಬಳಸಿಕೊಳ್ಳಲಾಗುತ್ತಿದ್ದು, ಸಮಾಜಕ್ಕೆ ಅಂಬೇಡ್ಕರ್ ಆಶಯ, ಅವರು ನೀಡಿದ ಸಂವಿಧಾನ ಬೆಳಕಾಗಿದ್ದು, ಇದನ್ನು ಎಂದಿಗೂ ಮರೆಯಬಾರದು ಎಂದರು.

ಅಂಬೇಡ್ಕರ್ ಪ್ರತಿಮೆ ನಿರ್ಮಾಣ ಸಮಿತಿ ಪ್ರಧಾನ ಕಾರ್ಯದರ್ಶಿ ಮೋಹನ್ ಮೌರ್ಯ ಮಾತನಾಡಿ, ದೇಶಕ್ಕೆ ಸಂವಿಧಾನ ನೀಡಿದ ಅಂಬೇಡ್ಕರ್ ಬಗ್ಗೆ ಅವಹೇಳನ ಮಾಡಿರುವುದು ಖಂಡನೀಯ. ಅಂಬೇಡ್ಕರ್ ಅವರು ಒಂದು ಸಮುದಾಯದ ನಾಯಕರÀಲ್ಲ. ದೇಶದ ಆದರ್ಶ ವ್ಯಕ್ತಿಯಾಗಿದ್ದಾರೆ. ನಿಂದನೆ ವಿರುದ್ಧ ಮಡಿಕೇರಿ ಠಾಣೆಗೆ ದೂರು ನೀಡಿದ್ದು, ಎಫ್‌ಐಆರ್ ಮಾಡಬೇಕು. ದೇಶದ್ರೋಹ ಪ್ರಕರಣ ದಾಖಲಿಸಬೇಕೆಂದು ಆಗ್ರಹಿಸಿದರು.

ನಗರಸಭಾ ಸದಸ್ಯ ಎಸ್.ಸಿ. ಸತೀಶ್ ಮಾತನಾಡಿ, ಅಂಬೇಡ್ಕರ್ ದೇಶದ ನಾಯಕರಾಗಿದ್ದು, ಒಂದು ಸಮುದಾಯ ಮಾತ್ರ ಘಟನೆಯನ್ನು ವಿರೋಧಿಸುತ್ತಿರುವುದು ದುರಂತ. ಸಮಾಜದ ಎಲ್ಲರೂ ಇದನ್ನು ಖಂಡಿಸಬೇಕು. ಆರೋಪಿಯನ್ನು ಗಡಿಪಾರು ಮಾಡಬೇಕು. ರಾಜ್ಯವ್ಯಾಪಿ ಆರೋಪಿ ವಿರುದ್ಧ ದೂರು ನೀಡಲಾಗುತ್ತಿದ್ದು, ಪೊಲೀಸರು ಎಫ್‌ಐಆರ್ ಮಾಡಲು ಹಿಂದೇಟು ಹಾಕುತ್ತಿರುವುದು ಸರಿಯಲ್ಲ ಎಂದರು.

ಕುಶಾಲನಗರದ ಡಾ. ಬಿ.ಆರ್. ಅಂಬೇಡ್ಕರ್ ಟ್ರಸ್ಟ್ ಅಧ್ಯಕ್ಷ ಲೋಕೇಶ್ ಮಾತನಾಡಿ, ಅಂಬೇಡ್ಕರ್ ಅವರನ್ನು ಅವಹೇಳನ ಮಾಡಿರುವುದು ದೇಶದ್ರೋಹಕ್ಕೆ ಸಮಾನವಾಗಿದ್ದು, ಆರೋಪಿಯನ್ನು ದೇಶದಿಂದಲೇ ಗಡಿಪಾರು ಮಾಡಬೇಕು ಎಂದು ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ಕೆ.ಬಿ. ರಾಜು, ಚಂದ್ರ, ಜನಾರ್ಧನ, ಅರ್ಜುನ್ ಮೌರ್ಯ, ಪ್ರೇಮ ಕೃಷ್ಣಪ್ಪ ಸೇರಿದಂತೆ ಇನ್ನಿತರರು ಹಾಜರಿದ್ದರು.