ಮಡಿಕೇರಿ, ಸೆ. ೭: ಮುಂದಿನ ದಿನಗಳಲ್ಲಿ ವಿವಿಧ ಧಾರ್ಮಿಕ ಹಬ್ಬಗಳು ಮತ್ತು ಆಚರಣೆಗಳು ಬರಲಿದ್ದು, ಈ ಸಂದರ್ಭ ಶಾಂತಿ, ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ವಹಿಸಬೇಕಾದ ಕ್ರಮಗಳ ಕುರಿತು ಜಿಲ್ಲಾಧಿಕಾರಿ ಎಸ್.ಜೆ.ಸೋಮಶೇಖರ ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆರ್.ಎನ್.ಬಿಂದುಮಣಿ ನೇತೃತ್ವದಲ್ಲಿ ಸಭೆ ನಡೆಯಿತು.
ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಜಿಲ್ಲಾಧಿಕಾರಿ, ಗೌರಿ ಗಣೇಶ ಹಬ್ಬ ಸಂಬAಧ ಜಿಲ್ಲೆಯ ಹಲವು ಕಡೆಗಳಲ್ಲಿ ಗೌರಿ-ಗಣೇಶ ಮೂರ್ತಿಗಳನ್ನು ಪ್ರತಿಷ್ಠಾಪಿಸಲಾಗುತಿದ್ದು, ವಿಸರ್ಜನೆ ಸಂದರ್ಭದಲ್ಲಿ ಸರ್ಕಾರದ ನಿಯಮ ಪಾಲಿಸುವಲ್ಲಿ ಸ್ಥಳೀಯ ಮಟ್ಟದಲ್ಲಿ ಅಧಿಕಾರಿಗಳು ಮತ್ತು ಪೊಲೀಸ್ ಇಲಾಖೆಯವರು ಮಾಹಿತಿ ನೀಡುವಂತಾಗಬೇಕು.
ಈಗಾಗಲೇ ಏಕಗವಾಕ್ಷಿ ಸಮಿತಿ ರಚಿಸಲಾಗಿದ್ದು, ಗೌರಿ-ಗಣೇಶ ಮೂರ್ತಿಗಳ ಪ್ರತಿಷ್ಠಾಪನೆ ಮತ್ತು ವಿಸರ್ಜನೆ ಸಂಬAಧ ತಾ. ೧೩ ರೊಳಗೆ ಅರ್ಜಿ ಸಲ್ಲಿಸಿ ಅನುಮತಿ ಪಡೆಯಬೇಕು ಎಂದು ತಿಳಿಸಿದರು.
ಏಕಗವಾಕ್ಷಿ ಸಮಿತಿಯಲ್ಲಿ ಆಯಾಯ ತಾಲೂಕಿನ ತಹಶೀಲ್ದಾರರು ಅಧ್ಯಕ್ಷರಾಗಿ, ಪರಿಸರ ಅಧಿಕಾರಿ ಸದಸ್ಯ ಕಾರ್ಯದರ್ಶಿಯಾಗಿ ಕಾರ್ಯ ನಿರ್ವಹಿಸಲಿದ್ದಾರೆ. ತಾಲೂಕಿನ ಪೊಲೀಸ್ ಅಧಿಕಾರಿಗಳು, ಲೋಕೋಪಯೋಗಿ ಇಲಾಖೆ, ಸೆಸ್ಕ್ ಇಲಾಖೆಯ ಎಇಇಗಳು, ತಾ.ಪಂ.ಇಒ ಗಳು ಮತ್ತು ಸ್ಥಳೀಯ ಸಂಸ್ಥೆಗಳ ಪೌರಾಯುಕ್ತರು/ ಮುಖ್ಯಾಧಿಕಾರಿಗಳು ಸದಸ್ಯರಾಗಿ ಕಾರ್ಯನಿರ್ವಹಿಸಲಿದ್ದಾರೆ ಎಂದು ಜಿಲ್ಲಾಧಿಕಾರಿ ವಿವರಿಸಿದರು.
ಗೌರಿ-ಗಣೇಶ ಮೂರ್ತಿಗಳ ವಿಸರ್ಜನೆ ಸಂದರ್ಭದಲ್ಲಿ ಡಿಜೆಯನ್ನು ಹೆಚ್ಚು ಬಳಸುತ್ತಿದ್ದು, ಆ ಸಂದರ್ಭದಲ್ಲಿ ಮಕ್ಕಳು, ಹಿರಿಯ ನಾಗರಿಕರು ಸೇರಿದಂತೆ ಸಾರ್ವಜನಿಕರಿಗೆ ತೊಂದರೆ ಆಗದಂತೆ ಎಚ್ಚರ ವಹಿಸುವುದು ಅತ್ಯಗತ್ಯ. ಆ ನಿಟ್ಟಿನಲ್ಲಿ ಸರ್ಕಾರದ ನಿಯಮಗಳ ಬಗ್ಗೆ ಮನವರಿಕೆ ಮಾಡಬೇಕು. ಗೌರಿ-ಗಣೇಶ ಮೂರ್ತಿಗಳನ್ನು ಪರಿಸರ ಸ್ನೇಹಿಯಾಗಿ ಪ್ರತಿಷ್ಠಾಪಿಸಿ ಪೂಜಿಸುವಂತಾಗಬೇಕು ಎಂದು ಜಿಲ್ಲಾಧಿಕಾರಿ ನುಡಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆರ್.ಎನ್.ಬಿಂದುಮಣಿ ಮಾತನಾಡಿ, ಗೌರಿ ಗಣೇಶ ಮೂರ್ತಿ ಪ್ರತಿಷ್ಠಾಪನೆ ಮತ್ತು ವಿಸರ್ಜನೆ ಸಂಬAಧ ಏಕಗವಾಕ್ಷಿ ಸಮಿತಿಯ ಅನುಮತಿ ಪಡೆಯುವುದು ಕಡ್ಡಾಯವಾಗಿದೆ. ಗೌರಿ ಗಣೇಶ ವಿಸರ್ಜನೆಯ ಮೆರವಣಿಗೆ ಸಂದರ್ಭ ಅಗತ್ಯವಿರುವ ಕಡೆಗಳಲ್ಲಿ ಸಿಸಿಟಿವಿ ಕಡ್ಡಾಯವಾಗಿ ಅಳವಡಿಸಬೇಕು. ಮೆರವಣಿಗೆ ಸಾಗುವ ೪ಐದನೇ ಪುಟಕ್ಕೆ
(ಮೊದಲ ಪುಟದಿಂದ) ಪ್ರದೇಶದಲ್ಲಿ ಹೆಚ್ಚಿನ ಬೆಳಕು ವ್ಯವಸ್ಥೆ ಇರಬೇಕು. ವಿಸರ್ಜನೆ ಸಂದರ್ಭ ಜೀವರಕ್ಷಕ ಜಾಕೆಟ್ ಬಳಸಬೇಕು. ಹೀಗೆ ಏಕಗವಾಕ್ಷಿ ಸಮಿತಿಯು ಈ ಬಗ್ಗೆ ಗಮನಿಸಿ ಮೇಲುಸ್ತುವಾರಿ ವಹಿಸಬೇಕು ಎಂದು ನಿರ್ದೇಶನ ನೀಡಿದರು.
ಗಣೇಶ ಮೂರ್ತಿ ವಿಸರ್ಜನೆ ಸಂದರ್ಭ ಬೃಹತ್ ವಾಹನದಲ್ಲಿ ಮೆರವಣಿಗೆ ಸಂಬAಧ ವಾಹನಗಳ ಅನುಮತಿ ಬಗ್ಗೆ ಸಂಬAಧಿಸಿದವರ ಜೊತೆ ಪ್ರಾದೇಶಿಕ ಸಾರಿಗೆ ಅಧಿಕಾರಿ ಅವರು ಸಭೆ ನಡೆಸುವಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಲಹೆ ನೀಡಿದರು.
ಜಿಲ್ಲಾ ಪರಿಸರ ಅಧಿಕಾರಿ ಕೀರ್ತಿ ಕುಮಾರ್ ಮಾತನಾಡಿ, ಗೌರಿ ಹಾಗೂ ವಿನಾಯಕ ಚತುರ್ಥಿ ಹಬ್ಬ ಸಂದರ್ಭ ಸಾರ್ವಜನಿಕರು ಪ್ಲಾಸ್ಟರ್ ಆಫ್ ಪ್ಯಾರಿಸ್ ಮತ್ತು ಬಣ್ಣದ ವಿಗ್ರಹಗಳನ್ನು ಬಳಸದೆ, ಮಣ್ಣಿನ ಮೂರ್ತಿಗಳನ್ನು ಪ್ರತಿಷ್ಠಾಪಿಸಬೇಕು. ಬಣ್ಣದ ಮೂರ್ತಿಗಳನ್ನು ಕೆರೆ, ಬಾವಿ ಹಾಗೂ ಇನ್ನಿತರ ನೈಸರ್ಗಿಕ ಜಲಮೂಲಗಳಿಗೆ ವಿಸರ್ಜಿಸುವುದರಿಂದ ಜಲಮೂಲ ಕಲುಷಿತಗೊಂಡು ಅವುಗಳ ಭೌತಿಕ ಹಾಗೂ ರಾಸಾಯನಿಕ ಸ್ಥಿತಿಗಳ ಬದಲಾವಣೆಯಿಂದ ಪರಿಸರದ ಮೇಲೆ ದುಷ್ಪರಿಣಾಮ ಉಂಟಾಗುವುದಲ್ಲದೇ ಪ್ರಾಣಿ, ಪಕ್ಷಿ ಹಾಗೂ ಇತರೇ ಜಲಚರಗಳ ಜೀವಕ್ಕೆ ಅಪಾಯವಾಗುತ್ತದೆ, ಅಲ್ಲದೇ ಇಂತಹ ಕಲುಷಿತ ನೀರಿನಿಂದ ಸಾರ್ವಜನಿಕರ ಆರೋಗ್ಯಕ್ಕೂ ಹಾನಿ ಉಂಟಾಗುತ್ತದೆ. ಆದ್ದರಿಂದ ಪರಿಸರ ಸ್ನೇಹಿ ಮೂರ್ತಿಗಳನ್ನು ಪ್ರತಿಷ್ಠಾಪಿಸುವಂತಾಗಬೇಕು ಎಂದರು.
ನೈಸರ್ಗಿಕ ಜಲಮೂಲಗಳನ್ನು ಸಂರಕ್ಷಿಸುವ ನಿಟ್ಟಿನಲ್ಲಿ ಪ್ಲಾಸ್ಟರ್ ಆಫ್ ಪ್ಯಾರಿಸ್ ಮತ್ತು ಬಣ್ಣ ಲೇಪಿತವಾದ ಗೌರಿ ಮತ್ತು ಗಣೇಶ ವಿಗ್ರಹಗಳನ್ನು ಕೆರೆ, ಬಾವಿ, ಕಟ್ಟೆ ಮತ್ತು ಇತರೆ ಜಲಮೂಲಗಳಲ್ಲಿ ವಿಸರ್ಜಿಸುವುದನ್ನು ನಿಷೇಧಿಸಲಾಗಿದೆ ಎಂದು ಪರಿಸರ ಅಧಿಕಾರಿ ತಿಳಿಸಿದರು.
ಹಿರಿಯ ಪೊಲೀಸ್ ಅಧಿಕಾರಿಗಳಾದ ಸೂರಜ್ ಮತ್ತು ಮೇದಪ್ಪ ಮಾತನಾಡಿ ಪೊಲೀಸ್ ಇಲಾಖೆಯಿಂದ ನಿಯಮಗಳ ಬಗ್ಗೆ ಮಾಹಿತಿ ನೀಡಲಾಗುತ್ತದೆ ಆದರೆ ಪಾಲಿಸುತ್ತಿಲ್ಲ ಎಂದರು.
ಹೆಚ್ಚುವರಿ ಜಿಲ್ಲಾಧಿಕಾರಿ ಸಹನಾ ಎಸ್.ಹಾದಿಮನಿ, ಪ್ರಾದೇಶಿಕ ಸಾರಿಗೆ ಅಧಿಕಾರಿ ಎಸ್.ಟಿ.ಸತೀಶ್, ಸೆಸ್ಕ್ ಕಾರ್ಯಪಾಲಕ ಇಂಜಿನಿಯರ್ ರಾಮಚಂದ್ರ, ತಹಶೀಲ್ದಾರರಾದ ಪ್ರವೀಣ್ ಕುಮಾರ್, ಶ್ರೀಧರ, ಕೃಷ್ಣಮೂರ್ತಿ, ಸಂಜನಾ, ಪೌರಾಯುಕ್ತರಾದ ಎಚ್.ಆರ್.ರಮೇಶ್, ಕೃಷ್ಣ ಪ್ರಸಾದ್, ನಾಚಪ್ಪ, ಗೋಪಿ, ಗಿರೀಶ್, ತಾ.ಪಂ.ಇಒಗಳಾದ ಶೇಖರ್, ಅಪ್ಪಣ್ಣ, ರಾಜೇಶ್, ಇತರರು ಇದ್ದರು.