ಸೋಮವಾರಪೇಟೆ, ಸೆ. ೭: ಸರ್ಕಾರಿ ಅನುದಾನದಲ್ಲಿ ಕೈಗೊಳ್ಳಲಾಗಿರುವ ಕಾಮಗಾರಿಗಳು ಕಳಪೆಯಾಗುತ್ತಿದ್ದರೂ ಶಾಸಕರು ಹಾಗೂ ಅಧಿಕಾರಿಗಳು ಮೌನಕ್ಕೆ ಶರಣಾಗಿದ್ದಾರೆ. ಇಂತಹ ಕಳಪೆ ಕಾಮಗಾರಿಗಳಿಗೆ ಅವಕಾಶ ನೀಡಬಾರದು ಎಂದು ಆಗ್ರಹಿಸಿರುವ ಮಾಜೀ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್, ಅವೈಜ್ಞಾನಿಕವಾಗಿ ನಿರ್ಮಿಸುತ್ತಿರುವ ತಡೆಗೋಡೆ ಹಾಗೂ ಈಗಾಗಲೇ ಬಿರುಕು ಬಿಟ್ಟಿರುವ ಕಾಂಕ್ರೀಟ್ ರಸ್ತೆ ಕಾಮಗಾರಿಗಳ ವಿರುದ್ಧ ಲೋಕಾಯುಕ್ತಕ್ಕೆ ದೂರು ನೀಡಲಾಗುವುದು ಎಂದು ತಿಳಿಸಿದ್ದಾರೆ.

ಪಟ್ಟಣದ ಸರ್ಕಾರಿ ಪದವಿಪೂರ್ವ ಕಾಲೇಜು ಆವರಣದಲ್ಲಿರುವ ಬಾಸ್ಕೆಟ್ ಬಾಲ್ ಮೈದಾನದ ಬದಿಯಲ್ಲಿ ನಿರ್ಮಿಸುತ್ತಿರುವ ತಡೆಗೋಡೆ ಅವೈಜ್ಞಾನಿಕ ಹಾಗೂ ಕಳಪೆಯಾಗಿದೆ ಎಂದು ಸ್ಥಳೀಯರು ಆರೋಪಿಸಿದ ಹಿನ್ನೆಲೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಅಪ್ಪಚ್ಚು ರಂಜನ್, ಸಂಬAಧಿಸಿದ ಯುವ ಜನ ಸೇವಾ ಮತ್ತು ಕ್ರೀಡಾ ಇಲಾಖೆಯ ಅಧಿಕಾರಿಗೆ ಕರೆ ಮಾಡಿ ಮಾಹಿತಿ ಬಯಸಿದರು.

ಈಗಾಗಲೇ ಕ್ರಿಯಾಯೋಜನೆಯನ್ನು ಬದಲಾಯಿಸಲು ಇಲಾಖೆಯ ಮೇಲಧಿಕಾರಿಗಳಿಗೆ ಪತ್ರ ಬರೆಯಲಾಗಿದೆ. ಸದ್ಯಕ್ಕೆ ಕಾಮಗಾರಿ ಸ್ಥಗಿತಗೊಳಿಸಲಾಗಿದೆ ಎಂದು ಅಧಿಕಾರಿ ತಿಳಿಸಿದರು. ಈ ಸಂದರ್ಭ ಸ್ಥಳದಲ್ಲಿದ್ದ ಸ್ಥಳೀಯರು ಕಳಪೆ ಕಾಮಗಾರಿ ಮಾಡುತ್ತಿದ್ದುದನ್ನು ನಾವುಗಳು ಪ್ರಶ್ನಿಸಿ ಕಾಮಗಾರಿಗೆ ತಡೆಯೊಡ್ಡಿದ್ದೇವೆ. ಅಧಿಕಾರಿಗಳು ಸರಿಯಾಗಿ ಪರಿಶೀಲನೆ ನಡೆಸುತ್ತಿಲ್ಲ. ಕಳಪೆ ಕಾಮಗಾರಿಯಿಂದಾಗಿ ರಸ್ತೆಯಲ್ಲಿ ಸಂಚರಿಸಲೂ ಭಯಪಡುವಂತಾಗಿದೆ ಎಂದು ಸಮಸ್ಯೆ ಬಿಚ್ಚಿಟ್ಟರು.

ಅರ್ಧಕ್ಕೆ ಸ್ಥಗಿತಗೊಂಡಿರುವ ತಡೆಗೋಡೆ ಕಾಮಗಾರಿಯನ್ನು ವೀಕ್ಷಿಸಿದ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಅಪ್ಪಚ್ಚು ರಂಜನ್ ಅವರು, ಬಾಸ್ಕೆಟ್‌ಬಾಲ್ ಮೈದಾನಕ್ಕೆ ತಡೆಗೋಡೆ ನಿರ್ಮಾಣ ಕಾಮಗಾರಿ ಮೇಲ್ನೋಟಕ್ಕೆ ಅವೈಜ್ಞಾನಿಕವಾಗಿರುವುದು ಕಂಡುಬAದಿದೆ. ಮೊದಲಿಗೆ ಫೌಂಡೇಷನ್ ತೆಗೆದು ವೆಟ್‌ಮಿಕ್ಸ್ ಹಾಕಿ, ನಂತರ ಮ್ಯಾಟ್ ಕಟ್ಟಿ, ಅದರ ಮೇಲೆ ಕಾಂಕ್ರೀಟ್ ಹಾಕಬೇಕು. ೧೩ ಅಡಿ ಎತ್ತರದ ತಡೆಗೋಡೆಗೆ ಕೆಳಭಾಗದಲ್ಲಿ ಕನಿಷ್ಟ ಎರಡೂವರೆ ಅಡಿ ಅಗಲ ಫೌಂಡೇಷನ್ ಹಾಕಬೇಕು. ಆದರೆ ಇಲ್ಲಿ ಕೆಳಗಿನಿಂದ ಮೇಲಿನವರೆಗೂ ೯ ಇಂಚು ಕಾಂಕ್ರೀಟ್ ತಡೆಗೋಡೆ ನಿರ್ಮಿಸುತ್ತಿದ್ದು, ಇದು ಹಣ ದುರುಪಯೋಗ ಪಡಿಸಿಕೊಳ್ಳುವ ಯತ್ನವಾಗಿದೆ ಎಂದು ದೂರಿದರು.

ಈ ಬಗ್ಗೆ ಸ್ಥಳೀಯರು ಗಲಾಟೆ ಮಾಡಿದ ನಂತರ ಕಾಮಗಾರಿ ಸ್ಥಗಿತಗೊಳಿಸಲಾಗಿದೆ. ಕಳೆದ ಬಾರಿ ಸಣ್ಣ ನೀರಾವರಿ ಇಲಾಖೆಯಿಂದ ಟರ್ಫ್ ಮೈದಾನದ ಬದಿಯಲ್ಲಿ ನಿರ್ಮಿಸಿದ್ದ ತಡೆಗೋಡೆ ಕುಸಿದು ಬಿದ್ದಿತ್ತು. ಇಂತಹ ಕಳಪೆ ಕಾಮಗಾರಿಗೆ ಯಾರು ಹೊಣೆ ಎಂಬ ಪ್ರಶ್ನೆ ಉದ್ಭವಿಸಿದೆ. ಇಂಜಿನಿಯರ್, ಗುತ್ತಿಗೆದಾರ ಅಥವಾ ಶಾಸಕರು ಹೊಣೆಗಾರರಾ? ಎಂಬುದನ್ನು ಸ್ಪಷ್ಟಪಡಿಸಬೇಕು ಎಂದರು.

ಇಷ್ಟೇ ಅಲ್ಲದೇ ಕೋಟ್ಯಾಂತರ ರೂ. ವೆಚ್ಚದಲ್ಲಿ ನಿರ್ಮಿಸಿದ ಆಲೇಕಟ್ಟೆ-ತೋಳೂರುಶೆಟ್ಟಳ್ಳಿ ರಸ್ತೆ ವರ್ಷದೊಳಗೆ ಹಾಳಾಗಿದೆ. ಕಾಂಕ್ರೀಟ್ ರಸ್ತೆ ಅಲ್ಲಲ್ಲಿ ಬಿರುಕು ಬಿಟ್ಟಿದೆ. ಈಗಾಗಲೇ ಬಿರುಕುಬಿಟ್ಟಿರುವ ಕಾಂಕ್ರೀಟ್ ರಸ್ತೆಯನ್ನು ಕಿತ್ತು ಸರ್ವ ಋತು ರಸ್ತೆಯನ್ನಾಗಿ ಗುಣಮಟ್ಟದಲ್ಲಿ ನಿರ್ಮಿಸಬೇಕು ಎಂದು ಆಗ್ರಹಿಸಿದ ಅವರು, ಈ ಎಲ್ಲಾ ಕಳಪೆ ಕಾಮಗಾರಿಗಳ ಬಗ್ಗೆಯೂ ಲೋಕಾಯುಕ್ತಕ್ಕೆ ದೂರು ನೀಡಲಾಗುವುದು ಎಂದು ತಿಳಿಸಿದರು.

ಸೋಮವಾರಪೇಟೆ ಪಟ್ಟಣ ಪಂಚಾಯಿತಿಗೆ ಸಂಬAಧಿಸಿದAತೆ ನಗರೋತ್ಥಾನ ಯೋಜನೆಯಡಿ ನಮ್ಮ ಅವಧಿಯಲ್ಲಿ ೫ ಕೋಟಿ ಅನುದಾನ ನೀಡಿದ್ದೆವು. ಇದರಲ್ಲಿ ರಸ್ತೆ ಬದಿಯಲ್ಲಿ ಫುಟ್‌ಪಾತ್ ನಿರ್ಮಾಣ, ಇಂಟರ್‌ಲಾಕ್ ಕಾಮಗಾರಿಗೆ ಅನುದಾನ ಮೀಸಲಿಟ್ಟಿದ್ದರೂ ಈವರೆಗೆ ಕಾಮಗಾರಿ ಪೂರ್ಣಗೊಳಿಸಿಲ್ಲ. ಅಮೃತ್-೨ ಯೋಜನೆಯಡಿ ಕುಡಿಯುವ ನೀರಿಗೆ ೧೫ ಕೋಟಿ ಅನುದಾನ ಬಿಡುಗಡೆ ಮಾಡಿಸಿದ್ದೆವು. ಅದೂ ಕೂಡ ಸಮರ್ಪಕವಾಗಿ ಮಾಡಿಲ್ಲ ಎಂದು ಆರೋಪಿಸಿದರು.

ಅಮೃತ್-೨ ಯೋಜನೆಯಡಿ ಹೊಸ ಟ್ಯಾಪ್, ಪೈಪ್ ಲೈನ್ ಮಾಡಬೇಕಿತ್ತು. ಆದರೆ ಈವರೆಗೂ ಜನರಿಗೆ ಸಮರ್ಪಕ ನೀರು ಬರುತ್ತಿಲ್ಲ ಎಂಬ ದೂರುಗಳು ಕೇಳಿಬರುತ್ತಿವೆ. ಇಲ್ಲಿ ಮಾತ್ರವಲ್ಲ; ಕುಶಾಲನಗರ ಹಾಗೂ ಮಡಿಕೇರಿಯಲ್ಲೂ ಹೀಗೆಯೇ ಆಗಿದೆ. ಗುತ್ತಿಗೆದಾರರನ್ನು ಕರೆದು ಕಟ್ಟುನಿಟ್ಟಿನ ಸೂಚನೆ ನೀಡಿ ಕೆಲಸ ಪೂರ್ಣಗೊಳಿಸಲು ಶಾಸಕರು ಕ್ರಮ ಕೈಗೊಳ್ಳಬೇಕು. ತಪ್ಪಿದಲ್ಲಿ ಸೋಮವಾರ ಸೋಮವಾರಪೇಟೆ ಪಟ್ಟಣ ಪಂಚಾಯಿತಿ, ಮಂಗಳವಾರ ಕುಶಾಲನಗರ ಹಾಗೂ ಶುಕ್ರವಾರ ಮಡಿಕೇರಿಯಲ್ಲಿ ಬಿಜೆಪಿ ವತಿಯಿಂದ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದರು.

ಈಗಾಗಲೇ ಮುಖ್ಯಮಂತ್ರಿಗಳೂ ಸಹ ಕಳಪೆ ಕಾಮಗಾರಿಯನ್ನು ಸಹಿಸುವುದಿಲ್ಲ ಎಂದಿದ್ದಾರೆ. ಸ್ಥಳೀಯ ಶಾಸಕರು ಕಳಪೆ ಕಾಮಗಾರಿ ಬಗ್ಗೆ ತಕ್ಷಣ ಗಮನ ಹರಿಸಬೇಕು ಎಂದು ಮಾಜಿ ಶಾಸಕ ರಂಜನ್ ಒತ್ತಾಯಿಸಿದರು.

ಟರ್ಫ್ ಮೈದಾನ ಸುಸ್ಥಿತಿಗೆ ಆಗ್ರಹ: ತಮ್ಮ ಅವಧಿಯಲ್ಲಿ ಸೋಮವಾರಪೇಟೆಯ ಹಾಕಿ ಪ್ರೇಮಿಗಳ ಅಭಿಲಾಷೆಯಂತೆ ಅಂತರರಾಷ್ಟಿçÃಯ ಗುಣಮಟ್ಟದಲ್ಲಿ ಟರ್ಫ್ ಮೈದಾನ ನಿರ್ಮಿಸಿದ್ದು, ಸಂಬAಧಿಸಿದ ಗುತ್ತಿಗೆದಾರ ಕಂಪೆನಿಯವರು ೭ ವರ್ಷ ನಿರ್ವಹಣೆ ಮಾಡಬೇಕು. ಆದರೆ ಪ್ರಸ್ತುತ ಟರ್ಫ್ ಮೈದಾನ ಅವ್ಯವಸ್ಥೆಯಿಂದ ಕೂಡಿದೆ. ತಕ್ಷಣ ಇಲಾಖೆಯ ಇಂಜಿನಿಯರ್ ಸ್ಥಳಕ್ಕೆ ಆಗಮಿಸಿ ಮೈದಾನದ ಸುಸ್ಥಿತಿಗೆ ಕ್ರಮ ವಹಿಸಬೇಕು ಎಂದು ಅಪ್ಪಚ್ಚು ರಂಜನ್ ಒತ್ತಾಯಿಸಿದರು.

ಈ ಸಂದರ್ಭ ಪ್ರಮುಖರಾದ ಕಿಬ್ಬೆಟ್ಟ ಧರ್ಮಪ್ಪ, ಎಸ್.ಆರ್. ಸೋಮೇಶ್, ಹರೀಶ್‌ಕುಮಾರ್, ಶರತ್‌ಚಂದ್ರ ಸೇರಿದಂತೆ ಇತರರು ಇದ್ದರು.