ವೀರಾಜಪೇಟೆ, ಸೆ. ೬: ಕೇರಳದ ಸಾಂಪ್ರದಾಯಿಕ ಚಂಡೆ ವಾದ್ಯ, ಬ್ಯಾಂಡ್ ಸೆಟ್ ಹಾಗೂ ಕಣ್ಮನ ಸೆಳೆಯುವ ನವಿಲು ನರ್ತನದೊಂದಿಗೆ ಇಲ್ಲಿನ ಮೀನುಪೇಟೆಯ ಶ್ರೀ ಮುತ್ತಪ್ಪ ಮಲಯಾಳಿ ಸಮಾಜದ ವತಿಯಿಂದ ೧೮ನೇ ವರ್ಷದ ಓಣಂ ಆಚರಣೆಯನ್ನು ಸಂಭ್ರಮದಿAದ ಆಚರಿಸಲಾಯಿತು.
ಬೆಳಿಗ್ಗೆ ೮.೩೦ಕ್ಕೆ ಶ್ರೀ ಮುತ್ತಪ್ಪ ಸನ್ನಿಧಿಯಲ್ಲಿ ಮಹಾಬಲಿಯನ್ನು ಭಕ್ತಿಯಿಂದ ಬರಮಾಡಿಕೊಂಡು, ದೀಪ ಬೆಳಗಿಸುವುದರೊಂದಿಗೆ ಸಾಂಸ್ಕೃತಿಕ ಹಾಗೂ ಧಾರ್ಮಿಕ ಕಾರ್ಯಕ್ರಮಗಳಿಗೆ ಅಧಿಕೃತ ಚಾಲನೆ ನೀಡಲಾಯಿತು.
ಬೆಳಿಗ್ಗೆ ೯.೩೦ಕ್ಕೆ ಶ್ರೀ ಮುತ್ತಪ್ಪ ದೇವಾಲಯದಿಂದ ಆರಂಭವಾದ ಮಹಾಬಲಿ (ಮಾವೇಲಿ) ಮೆರವಣಿಗೆಯು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಾಗಿತು. ಮೆರವಣಿಗೆಯಲ್ಲಿ ಪುಟಾಣಿ ಮಕ್ಕಳು ಶ್ರೀಕೃಷ್ಣನ ವೇಷ ಧರಿಸಿ ಗಮನ ಸೆಳೆದರು. ಮೆರವಣಿಗೆಯಲ್ಲಿ ಭಾಗವಹಿಸಿದ ಸಾರ್ವಜನಿಕರಿಗೆ ಗಡಿಯಾರ ಕಂಬದ ಬಳಿ ಉಚಿತ ಲಕ್ಕಿ ಕೂಪನ್ಗಳನ್ನು ವಿತರಿಸಲಾಯಿತು.
ಮೆರವಣಿಗೆಯುದ್ದಕ್ಕೂ ಮೊಳಗಿದ ಸಾಂಪ್ರದಾಯಿಕ ಚಂಡೆ ವಾದನ ಮತ್ತು ಬ್ಯಾಂಡ್ ಸೆಟ್ಗೆ ಸಾರ್ವಜನಿಕರು ಹೆಜ್ಜೆ ಹಾಕಿದರು. ಇದರೊಂದಿಗೆ ನವಿಲು ನರ್ತನ ವೇಷಧಾರಿಗಳ ನೃತ್ಯ ಮೆರವಣಿಗೆಗೆ ಭವ್ಯ ಮೆರುಗು ನೀಡಿತು.
ಹಬ್ಬದ ಅಂಗವಾಗಿ ಬೆಳಿಗ್ಗೆ ೯ ರಿಂದ ೧೧ ರವರೆಗೆ ಸಾರ್ವಜನಿಕರಿಗಾಗಿ ಹೂವಿನ ರಂಗೋಲಿ (ಪೂಕಳಂ) ಸ್ಪರ್ಧೆಯನ್ನು ಆಯೋಜಿಸಲಾಗಿತ್ತು.
ಮಧ್ಯಾಹ್ನ ೧೨ ಗಂಟೆಗೆ ಸಾಂಪ್ರದಾಯಿಕ ಓಣಂ ಸದ್ಯವನ್ನು ಉಣಬಡಿಸಲಾಯಿತು.
ಈ ಸಂದರ್ಭ ಶ್ರೀ ಮುತ್ತಪ್ಪ ಮಲಯಾಳಿ ಸಮಾಜದ ಅಧ್ಯಕ್ಷ ಪಿ. ಜಿ ಸುಮೇಶ್, ಕಾರ್ಯದರ್ಶಿ ಬಾಬು, ಸಜೀವನ್, ಪದ್ಮನಾಭ ಸೇರಿದಂತೆ ಸಮಾಜದ ಉಪಾಧ್ಯಕ್ಷರು, ಆಡಳಿತ ಮಂಡಳಿ ಪದಾಧಿಕಾರಿಗಳು ವೀರಾಜಪೇಟೆ ಹಾಗೂ ಸುತ್ತಮುತ್ತಲಿನ ಮಲಯಾಳಿ ಸಮಾಜದವರು ಭಾಗವಹಿಸಿದ್ದರು.