ವೀರಾಜಪೇಟೆ, ಸೆ. ೬: ಮೇ ೨೨, ೨೦೨೬ರ ಹೊಸ ಕನಿಷ್ಟ ವೇತನದ ಅಧಿಸೂಚನೆಯನ್ನು ಯಥಾವತ್ತಾಗಿ ಜಾರಿಗೊಳಿಸಬೇಕು, ಅನಧಿಕೃತವಾಗಿ ರಚಿಸಲಾಗಿರುವ ಉಪಸಮಿತಿಯನ್ನು ವಿಸರ್ಜಿಸಬೇಕು ಹಾಗೂ ಕೇಂದ್ರ ಸರಕಾರದ ಕಾರ್ಮಿಕ ವಿರೋಧಿ ೪ ಲೇಬರ್ ಕೋಡ್ಗಳನ್ನು ಹಿಂಪಡೆಯಬೇಕು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಸಿಐಟಿಯು ನೇತೃತ್ವದಲ್ಲಿ ಸೆಪ್ಟೆಂಬರ್ ೮ರಂದು ಬೃಹತ್ ವಿಧಾನಸೌಧ ಚಲೋ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಸಿಐಟಿಯು ಪ್ರಮುಖರು ತಿಳಿಸಿದ್ದಾರೆ.
ವೀರಾಜಪೇಟೆಯಲ್ಲಿ ನಡೆದ ಸಭೆಯಲ್ಲಿ ಈ ವಿಷಯ ತಿಳಿಸಿದ ಸಿಐಟಿಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪಿ.ಆರ್. ಭರತ್, ಕಳೆದ ೮-೯ ವರ್ಷಗಳ ಸುದೀರ್ಘ ಹೋರಾಟದ ಫಲವಾಗಿ ಸಿದ್ದರಾಮಯ್ಯ ಅವರ ಸರಕಾರದ ಅವಧಿಯಲ್ಲಿ (೨೨ ಮೇ ೨೦೨೬) ರಾಜ್ಯಪಾಲರ ಅಂಕಿತ ಹಾಗೂ ಗೆಜೆಟ್ ನೋಟಿಫಿಕೇಶನ್ ಮೂಲಕ ಕನಿಷ್ಟ ವೇತನ ಅಧಿಸೂಚನೆ ಹೊರಬಿದ್ದಿತ್ತು. ಸಿಐಟಿಯು ಶೇ. ೧೦೦ರಷ್ಟು ವೇತನ ಹೆಚ್ಚಳಕ್ಕೆ ಬೇಡಿಕೆ ಇಟ್ಟಿತ್ತಾದರೂ, ಸರಕಾರ ಶೇ. ೩೬ರಷ್ಟು ಹೆಚ್ಚಳ ಮಾಡಿ ಆದೇಶಿಸಿತ್ತು. ಕೆಲವು ವಿಭಾಗದ ಕಾರ್ಮಿಕರಿಗೆ ೨ ತಿಂಗಳು ಈ ಹೊಸ ವೇತನ ದೊರೆತಿತ್ತು. ಆದರೆ ಪ್ರಸ್ತುತ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಕ್ಯಾಬಿನೆಟ್ನಲ್ಲಿ ಚರ್ಚೆಯಾಗಿಲ್ಲ ಎಂಬ ನೆಪವೊಡ್ಡಿ ತಡೆಹಿಡಿದಿದ್ದಾರೆ ಎಂದು ಆರೋಪಿಸಿದರು.
ಸಿಐಟಿಯು ಜಿಲ್ಲಾಧ್ಯಕ್ಷ ಎ.ಸಿ. ಸಾಬು ಮಾತನಾಡಿ, ಸರಕಾರ ಯುವಕರನ್ನು ಖಾಯಂಗೊಳಿಸದೆ ಗುತ್ತಿಗೆ ಹಾಗೂ ಹೊರಗುತ್ತಿಗೆ ಆಧಾರದಲ್ಲೇ ದುಡಿಸಿಕೊಳ್ಳುತ್ತಿದ್ದು, ಪಿಎಫ್ ಹಾಗೂ ಪೆನ್ಷನ್ ಸೇರಿದಂತೆ ಯಾವುದೇ ಮೂಲಭೂತ ಸೌಲಭ್ಯಗಳನ್ನು ನೀಡುತ್ತಿಲ್ಲ. ಪಂಚಾಯತ್ ಸಿಬ್ಬಂದಿಗೆ ನೀಡಿದ್ದ ಎರಡು ತಿಂಗಳ ಹೆಚ್ಚುವರಿ ಸಂಬಳವನ್ನು ಸರಕಾರ ವಾಪಸ್ ಪಡೆಯುತ್ತಿರುವುದು ತೀವ್ರ ಖಂಡನೀಯವಾಗಿದೆ. ಅಂಗನವಾಡಿ, ಬಿಸಿ ಊಟ, ಆಸ್ಪತ್ರೆ ನೌಕರರು, ತೋಟ ಕಾರ್ಮಿಕರು ಎಲ್ಲಾ ನೌಕರರನ್ನು ಕಾರ್ಮಿಕರೆಂದು ಪರಿಗಣಿಸಿ ಕನಿಷ್ಟ ವೇತನ ವ್ಯಾಪ್ತಿಗೆ ತರಬೇಕು ಎಂದು ಆಗ್ರಹಿಸಿದರು.
ಜಿಲ್ಲಾ ಖಜಾಂಚಿ ಎನ್.ಡಿ. ಕುಟ್ಟಪ್ಪ ಮಾತನಾಡಿ, ಜಿಲ್ಲೆಯಲ್ಲಿ ದಿನೇ ದಿನೇ ಹೆಚ್ಚುತ್ತಿರುವ ಮಾನವ-ಕಾಡುಪ್ರಾಣಿ ಸಂಘರ್ಷ ತಡೆಯಲು ಸರಕಾರ ವೈಜ್ಞಾನಿಕ ಪರಿಹಾರ ಕಂಡುಕೊಳ್ಳಬೇಕು ಹಾಗೂ ಅರಣ್ಯ ನೀತಿಯನ್ನು ಪುನಃ ಪರಿಶೀಲಿಸಬೇಕು. ಸ್ವಂತ ಮನೆ ಹಾಗೂ ನಿವೇಶನವಿಲ್ಲದೆ ಲೈನ್ ಮನೆ ಹಾಗೂ ಬಾಡಿಗೆ ಕೊಠಡಿಗಳಲ್ಲಿ ವಾಸಿಸುತ್ತಿರುವ ತೋಟದ ಕಾರ್ಮಿಕರಿಗೆ ತಕ್ಷಣ ನಿವೇಶನ ಒದಗಿಸಬೇಕು ಎಂದರು.
ಜಿಲ್ಲಾ ಕಾರ್ಯದರ್ಶಿ ಕೆ.ಎಸ್. ಶಾಜಿ ರಮೇಶ್ ಮಾತನಾಡಿ, ಬಿ ಕಟ್ಟಡ, ಹಮಾಲಿ, ಬೀದಿಬದಿ ವ್ಯಾಪಾರಿ, ಆಟೋ ಚಾಲಕರು ಹಾಗೂ ಟೈಲರ್ಗಳಿಗೆ ಸೂಕ್ತ ಸಾಮಾಜಿಕ ಭದ್ರತಾ ಮಂಡಳಿ ರಚಿಸಬೇಕು ಮತ್ತು ೨೦೧೮-೧೯ರ ಪ್ರಕೃತಿ ವಿಕೋಪದ ಸಂತ್ರಸ್ತರ ಸಮಸ್ಯೆಗಳನ್ನು ಬಗೆಹರಿಸಬೇಕು ಎಂದು ಒತ್ತಾಯಿಸಿದರು.
ಅಂಗನವಾಡಿ, ಬಿಸಿ ಊಟ, ಆಸ್ಪತ್ರೆ, ಗ್ರಾಮ ಪಂಚಾಯಿತಿ, ಕಟ್ಟಡ, ಹಮಾಲಿ, ಪ್ಲಾಂಟೇಶನ್, ತೋಟ ಕಾರ್ಮಿಕ ಹಾಗೂ ಕಾಂಟ್ರಾಕ್ಟ್ ನೌಕರರ ಸಂಘಟನೆಗಳು ಈ ಹೋರಾಟಕ್ಕೆ ಬೆಂಬಲ ನೀಡಿದ್ದು, ಸೆಪ್ಟೆಂಬರ್ ೮ರ ವಿಧಾನಸೌಧ ಚಲೋದಲ್ಲಿ ಕೊಡಗು ಜಿಲ್ಲೆಯಿಂದ ೧,೦೦೦ಕ್ಕೂ ಹೆಚ್ಚು ಕಾರ್ಮಿಕರು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು. ಈ ಸಂದರ್ಭ ಸಂಘಟನೆಯ ಪ್ರಮುಖರು ಉಪಸ್ಥಿತರಿದ್ದರು.