ಮಾದಾಪುರ: ಸೆ. ೬: ಡಾರ್ಜಿಲಿಂಗ್ ಗೂರ್ಖಾಲ್ಯಾಂಡ್, ವಿಶಾಖಪಟ್ಟಣಂ ಹಾಗೂ ಗೋದಾವರಿ ಗುಡ್ಡಗಾಡು ಪ್ರಾಂತ್ಯಗಳ ಮಾದರಿಯಲ್ಲಿ ಸಂವಿಧಾನದ ೫ನೇ ಪರಿಚ್ಛೇದದ ಅಡಿಯಲ್ಲಿ ಕೊಡವಲ್ಯಾಂಡ್‌ಗೆ ಭೌಗೋಳಿಕ-ರಾಜಕೀಯ ಸ್ವಾಯತ್ತತೆ ನೀಡುವುದೊಂದೇ ಆದಿಮಸಂಜಾತ ಕೊಡವರು ಎದುರಿಸುತ್ತಿರುವ ಭೌಗೋಳಿಕ-ರಾಜಕೀಯ ದುರಂತಕ್ಕೆ ಪರಿಹಾರ ಎಂದು ಸಿಎನ್‌ಸಿ ಅಧ್ಯಕ್ಷ ಎನ್.ಯು.ನಾಚಪ್ಪ ಪ್ರತಿಪಾದಿಸಿದರು.
ಮಾದಾಪುರದಲ್ಲಿ ಶನಿವಾರ ಆಯೋಜಿಸಿದ್ದ ಸಿಎನ್‌ಸಿಯ ೨ನೇ ಮಾನವ ಸರಪಳಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಆದಿಮಸಂಜಾತ ಕೊಡವರನ್ನು ಸಂವಿಧಾನದ ಅಡಿಯಲ್ಲಿ ವಿಶಿಷ್ಟ ಪ್ರಕೃತಿ ಆರಾಧಕ ಧಾರ್ಮಿಕ ಸಮುದಾಯವೆಂದು ಗುರುತಿಸಿ, ಕೊಡವಲ್ಯಾಂಡ್‌ಗೆ ಭೌಗೋಳಿಕ-ರಾಜಕೀಯ ಸ್ವಾಯತ್ತತೆ ಹಾಗೂ ಸ್ವಯಂ-ಆಡಳಿತದ ಭದ್ರತೆ ನೀಡಿದರೆ ಮಾತ್ರ ಕೊಡವರ ಜಮೀನು, ಜಲ, ಸಂಸ್ಕೃತಿ, ಪರಂಪರೆ, ಪರಿಸರ ಮತ್ತು ಜೀವವೈವಿಧ್ಯವನ್ನು ರಕ್ಷಿಸಲು ಸಾಧ್ಯ ಎಂದರು.
ಕೊಡವರ ಪವಿತ್ರ ಕ್ಷೇತ್ರಗಳಾದ ಮಂದ್, ವಿಶಿಷ್ಟ ಕೊಡವ ವಂಶಾವಳಿ ಹಾಗೂ ಸಾಂಪ್ರದಾಯಿಕ ತಾಯ್ನಾಡಿನ ಇತಿಹಾಸವನ್ನು ಮುನ್ನೆಲೆಗೆ ತರಬೇಕು. ೨೦೨೭ರ ರಾಷ್ಟ್ರೀಯ ಜನಗಣತಿಯಲ್ಲಿ ಕೊಡವರನ್ನು ವಿಶಿಷ್ಟ ಜನಾಂಗೀಯ ಸಮುದಾಯವಾಗಿ ಪ್ರತ್ಯೇಕವಾಗಿ ದಾಖಲಿಸಬೇಕು ಎಂದು ಅವರು ಒತ್ತಾಯಿಸಿದರು.
ಕಾರ್ಯಕ್ರಮದಲ್ಲಿ ಉದ್ದಿನಾಡಂಡ ಮುತ್ತಕ್ಕಿ, ಪಾಸುರ ರಜನಿ ರಾಜ, ಮೇದರ ಪ್ರತೀಕ ಕಂಠಿ, ಕನ್ನಿಕಂಡ ಜಾನಕಿ, ಬಾಳೆಯಡ ಪೊನ್ನಮ್ಮ, ಮಂಡಿರ ಪೂವಮ್ಮ ಸೇರಿದಂತೆ ಹಲವು ಪ್ರಮುಖರು ಹಾಗೂ ಸಿಎನ್‌ಸಿ ಬೆಂಬಲಿಗರು ಪಾಲ್ಗೊಂಡಿದ್ದರು.
ಸಿಎನ್‌ಸಿ ವತಿಯಿಂದ ಮುಂದಿನ ಮಾನವ ಸರಪಳಿ ಕಾರ್ಯಕ್ರಮವನ್ನು ಸೆಪ್ಟೆಂಬರ್ ೧೯ರಂದು ಚೆಟ್ಟಳ್ಳಿಯಲ್ಲಿ ಆಯೋಜಿಸಲಾಗುವುದು ಎಂದು ನಾಚಪ್ಪ ಹೇಳಿದರು.