ಮಡಿಕೇರಿ, ಸೆ. ೫: ಮಡಿಕೇರಿ ನಗರಸಭೆ ವ್ಯಾಪ್ತಿಯಲ್ಲಿ ಅಡಿಕೆ ತಟ್ಟೆಗಳು, ಪೇಪರ್ ಕಪ್, ಪೇಪರ್ ತಟ್ಟೆಗಳ ಬಳಕೆ ಹಾಗೂ ಮಾರಾಟ ನಿಷೇಧಿಸಿರುವ ಕ್ರಮಕ್ಕೆ ವಿವಿಧ ಸಂಘ ಸಂಸ್ಥೆಗಳು, ಸಾರ್ವನಿಕರಿಂದ ಆಕ್ಷೇಪ ವ್ಯಕ್ತವಾಗಿದೆ. ಅಡಿಕೆ ತಟ್ಟೆ, ಪೇಪರ್ ತಟ್ಟೆ, ಪೇಪರ್ ಕಪ್‌ಗಳು ಪರಿಸರಕ್ಕೆ ಮಾರಕವಲ್ಲದಿದ್ದರೂ ನಗರಸಭೆ ಈ ರೀತಿಯ ಕ್ರಮಕ್ಕೆ ಮುಂದಾಗಿರುವ ಬಗ್ಗೆ ವಿರೋಧ ವ್ಯಕ್ತಗೊಂಡಿದೆ.

ನಿಷೇಧಿಸುವ ಉದ್ದೇಶವಿಲ್ಲ - ಕಲಾವತಿ

ನಗರಸಭೆಯ ಕ್ರಮಕ್ಕೆ ವಿರೋಧ ವ್ಯಕ್ತಗೊಂಡಿರುವ ಬಗ್ಗೆ “ಶಕ್ತಿ'' ನಗರಸಭಾ ಅಧಕ್ಷೆ ಪಿ. ಕಲಾವತಿ ಅವರನ್ನು ಸಂಪರ್ಕಿಸಿದಾಗ ಪ್ರತಿಕ್ರಿಯಿಸಿದ ಅವರು, ಅಡಿಕೆ ತಟ್ಟೆ, ಪೇಪರ್ ತಟ್ಟೆಗಳು, ಕಪ್‌ಗಳನ್ನು ನಿಷೇಧಿಸಿರುವ ಯಾವುದೇ ಉದ್ದೇಶ ನಗರಸಭೆಗೆ ಇಲ್ಲ. ಮಡಿಕೇರಿ ನಗರ ವ್ಯಾಪ್ತಿಯಲ್ಲಿ ದಿನದಿಂದ ದಿನಕ್ಕೆ ಕಸದ ಸಮಸ್ಯೆ ಹೆಚ್ಚಾಗುತ್ತಿದ್ದು, ಈ ಹಿನ್ನೆಲೆಯಲ್ಲಿ ಅಡಿಕೆ ತಟ್ಟೆ, ಪೇಪರ್ ತಟ್ಟೆ, ಪೇಪರ್ ಕಪ್‌ಗಳ ಬಳಕೆಯನ್ನು ಆದಷ್ಟು ಕಡಿಮೆ ಮಾಡುವ ಸಂಬAಧ ವ್ಯಾಪಾರಿಗಳು ಹಾಗೂ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವುದು ನಗರಸಭೆಯ ಚಿಂತನೆಯಾಗಿದೆ. ವ್ಯಾಪಾರಿಗಳು ಈ ತಟ್ಟೆಗಳನ್ನು ಮಾರಾಟ ಮಾಡುವಾಗ ಎಲ್ಲೆಂದರಲ್ಲಿ ಅವುಗಳನ್ನು ಬಳಸಿ ಎಸೆಯದ ರೀತಿಯಲ್ಲಿ ಗ್ರಾಹಕರಿಗೆ ಜಾಗೃತಿ ಮೂಡಿಸುವ ಕೆಲಸ ಮಾಡಬೇಕೆನ್ನುವ ಉದ್ದೇಶದಿಂದ ನಗರಸಭೆಯಿಂದ ಅಂಗಡಿಗಳಲ್ಲಿ ನೋಟೀಸ್ ನೀಡಿ ಅರಿವು ಮೂಡಿಸಲು ಮುಂದಾಗಲಾಗಿದೆ ಎಂದು ಸ್ಪಷ್ಟಪಡಿಸಿದರು.

ತಾಂತ್ರಿಕ ತೊಂದರೆಯಾಗಿದೆ - ರಮೇಶ್

ಮಡಿಕೇರಿ ನಗರಸಭಾ ಆಯುಕ್ತ ರಮೇಶ್ ಅವರು “ಶಕ್ತಿ''ಯೊಂದಿಗೆ ಮಾತನಾಡಿ, ಮಡಿಕೇರಿ ನಗರ ವ್ಯಾಪ್ತಿಯಲ್ಲಿ ಕಸ ಹಾಗೂ ಕಸದ ಜಾಗದ ಸಮಸ್ಯೆ ತೀವ್ರವಾಗಿದೆ. ಈ ಹಿನ್ನೆಲೆಯಲ್ಲಿ ಕಸವನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ವ್ಯಾಪಾರಿಗಳಿಗೆ ಜಾಗೃತಿ ಮೂಡಿಸುವ ಪ್ರಯತ್ನಕ್ಕೆ ನಗರಸಭೆ ಮುಂದಾಗಿದೆ. ಅಡಿಕೆ ತಟ್ಟೆ, ಪೇಪರ್ ತಟ್ಟೆಗಳ ಬಳಕೆಯನ್ನು ಆದಷ್ಟು ಕಡಿಮೆ ಮಾಡುವ ನಿಟ್ಟಿನಲ್ಲಿ ವರ್ತಕರಿಗೆ ತಿಳುವಳಿಕೆ ಮೂಡಿಸುವ ಪತ್ರವನ್ನು ನಗರಸಭೆಯಿಂದ ನೀಡಲಾಗಿದೆ. ಆದರೆ ತಾಂತ್ರಿಕ ಸಮಸ್ಯೆಯಿಂದಾಗಿ ಅದರ ಬಳಕೆ ಮಾರಾಟ ನಿಷೇಧ ಎಂದು ನಮೂದಾಗಿದೆ. ಅಡಿಕೆ ತಟ್ಟೆ, ಪೇಪರ್ ತಟ್ಟೆಗಳನ್ನು ಯಾವುದೇ ಕಾರಣಕ್ಕೂ ನಗರಸಭೆ ಏಕಪಕ್ಷೀಯವಾಗಿ ನಿಷೇಧ ಮಾಡಲು ಸಾಧ್ಯವಿಲ್ಲ. ಚೇಂಬರ್ ಆಫ್ ಕಾಮರ್ಸ್, ಸಂಘ ಸಂಸ್ಥೆಗಳು, ಸಾರ್ವಜನಿಕರ ಅಭಿಪ್ರಾಯ ಪಡೆಯದೆ ನಿಷೇಧದಂತಹ ತೀರ್ಮಾನ ಕೈಗೊಳ್ಳಲು ಸಾಧ್ಯವಿಲ್ಲ ಎಂದು ಹೇಳಿದರಲ್ಲದೆ, ಅಡಿಕೆ ತಟ್ಟೆ, ಪೇಪರ್ ತಟ್ಟೆಗಳ ಬಳಕೆಯನ್ನು ಆದಷ್ಟು ಕಡಿಮೆ ಮಾಡಿ ಹಾಗೂ ಬಳಿಸಿದ ಬಳಿಕ ಅವುಗಳನ್ನು ಸಮರ್ಪಕವಾಗಿ ವಿಲೇವಾರಿ ಮಾಡಿ ಎಂಬುದಷ್ಟೆ ನಮ್ಮ ಕಳಕಳಿ ಎಂದು ಮಾಹಿತಿ ನೀಡಿದರು.

ನಗರಸಭಾ ಸ್ಥಾಯಿ ಸಮಿತಿ ಅಧ್ಯಕ್ಷ ಅರುಣ್‌ಶೆಟ್ಟಿ ಅವರು ಕೂಡ ನಗರಸಭೆಯ ಕ್ರಮಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ. ನಗರಸಭೆ ಕೈಗೊಂಡ ಕ್ರಮದ ಬಗ್ಗೆ ತಮಗೆ ಯಾವುದೇ ಮಾಹಿತಿ ಇಲ್ಲದಿದ್ದು, ನಗರಸಭೆಯಲ್ಲಿ ಇವುಗಳ ನಿಷೇಧದ ಬಗ್ಗೆ ಯಾವ ಸಭೆಯಲ್ಲೂ ತೀರ್ಮಾನವಾಗಿಲ್ಲ ಎಂದು ವಿವರಿಸಿದ್ದಾರೆ.

ಚೇಂಬರ್ ವಿರೋಧ

ಸಾರ್ವಜನಿಕರ ಸಲಹೆ ಪಡೆಯದೆ ಅವೈಜ್ಞಾನಿಕವಾಗಿ ಅಡಿಕೆ ತಟ್ಟೆ ಮತ್ತು ಕಾಗದದ ತಟ್ಟೆ, ಲೋಟಗಳನ್ನು ಮಡಿಕೇರಿಯಲ್ಲಿ ನಿಷೇಧಿಸಿರುವ ನಗರಸಭಾ ನಿರ್ಧಾರವನ್ನು ಚೇಂಬರ್ ಆಫ್ ಕಾಮರ್ಸ್ ಖಂಡಿಸಿದೆ. ಈ ಬಗ್ಗೆ ನಗರ ಚೇಂಬರ್ ಅಧ್ಯಕ್ಷ ಸಂತೋಷ್ ಅಣ್ವೇಕರ್ ಹೇಳಿಕೆ ನೀಡಿ ಹಲವು ನಗರಸಭಾ ಸದಸ್ಯರ ಗಮನಕ್ಕೂ ಬಾರದೆ ಈ ತೀರ್ಮಾನ ಕೈಗೊಳ್ಳಲಾಗಿದ್ದು, ನಗರಸಭೆ ಕೂಡಲೇ ಆದೇಶವನ್ನು ಹಿಂಪಡೆಯಬೇಕೆAದು ಆಗ್ರಹಿಸಿದ್ದಾರೆ. ತಾ. ೭ ರಂದು ಚೇಂಬರ್‌ನ ತುರ್ತು ಸಭೆ ನಡೆಸಿ ನಗರಸಭೆಯ ಅಧ್ಯಕ್ಷರು ಹಾಗೂ ಆಯುಕ್ತರನ್ನು ಭೇಟಿ ಮಾಡಲಾಗುವುದು ಎಂದು ತಿಳಿಸಿದ್ದಾರೆ.

ಚೇಂಬರ್ ನಿರ್ದೇಶಕ ಎಂ. ಧನಂಜಯ್ ಪತ್ರಿಕಾ ಹೇಳಿಕೆ ನೀಡಿ ರಾಜ್ಯದ ಯಾವುದೇ ಊರಿನಲ್ಲಿ ಇರದ ಕಾನೂನುಗಳನ್ನು ಮಡಿಕೇರಿ ನಗರಸಭೆ ಸಾಮಾನ್ಯರ ಮೇಲೆ ಹೇರುತ್ತಿದ್ದು, ಪರಿಸರಸ್ನೇಹಿ ಆಗಿರುವ ಅಡಿಕೆ ತಟ್ಟೆಗಳ ನಿಷೇಧ ಅವೈಜ್ಞಾನಿಕ ಎಂದಿದ್ದಾರೆ. ಸಾರ್ವಜನಿಕರು ಹಾಗೂ ವ್ಯಾಪಾರಸ್ಥರಿಗೆ ಸಮಸ್ಯೆ ಆಗುವಂತ ಯಾವುದೇ ತೀರ್ಮಾನ ಕೈಗೊಳ್ಳುವ ಮೊದಲು ನಗರಸಭೆ ಸಾರ್ವಜನಿಕ ಸಭೆ ನಡೆಸಿ ಅಭಿಪ್ರಾಯ ಪಡೆದು ಮುಂದಿನ ಹೆಜ್ಜೆ ಇರಿಸಬೇಕು ಎಂದು ಸಲಹೆ ನೀಡಿದ್ದಾರೆ.

ಜಿಲ್ಲಾ ಚೇಂಬರ್ ಆಫ್ ಕಾಮರ್ಸ್ನ ಮಾಜಿ ಅಧ್ಯಕ್ಷ ಜಿ. ಚಿದ್ವಿಲಾಸ್, ಹಾಲಿ ಉಪಾಧ್ಯಕ್ಷರುಗಳಾದ ಅಂಬೆಕಲ್ ನವೀನ್ ಹಾಗೂ ಸುನಿಲ್ ಮಾದಪ್ಪ ಇವರುಗಳು ಕೂಡಾ ನಗರಸಭೆಯ ತೀರ್ಮಾನ ಸರಿಯಾದುದಲ್ಲ ಎಂದಿದ್ದಾರೆ. ಮುಂದಿನ ವಾರ ಗಣೇಶೋತ್ಸವ ಹಬ್ಬ ಬರಲಿದ್ದು, ಅನೇಕ ದೇವಾಲಯಗಳು ಹಾಗೂ ಸಾರ್ವಜನಿಕ ಗಣೇಶೋತ್ಸವ ಸಮಿತಿಗಳು ಅನ್ನದಾನ ಮಾಡಲು ಅಡಿಕೆ ತಟ್ಟೆಯನ್ನು ಬಳಸುತ್ತಿದ್ದು, ನಗರಸಭೆ ಅನಗತ್ಯ ಗೊಂದಲ ಸೃಷ್ಟಿಸಿ ಕಾನೂನಿನ ಸಂಘರ್ಷಕ್ಕೆ ಅವಕಾಶ ಮಾಡಿಕೊಡುತ್ತಿದೆ; ಹಾಗಾಗಿ ಕೂಡಲೇ ಆದೇಶವನ್ನು ಹಿಂದಕ್ಕೆ ಪಡೆಯುವಂತೆ ಸಲಹೆ ನೀಡಿದ್ದಾರೆ.