ಹೆಬ್ಬಾಲೆ, ಆ. ೪: ಮಕ್ಕಳ ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹಿಸುವ ಶಿಕ್ಷಕರು ತಮ್ಮಲ್ಲಿರುವ ಕ್ರೀಡಾ ಹಾಗೂ ಸಾಂಸ್ಕೃತಿಕ ಪ್ರತಿಭೆಯನ್ನು ಅನಾವರಣಗೊಳಿಸಲು ಇಂತಹ ಕ್ರೀಡಾಕೂಟ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ಉತ್ತಮ ವೇದಿಕೆಯಾಗಿವೆ. ಇವು ಶಿಕ್ಷಕರ ವೃತ್ತಿ ಜೀವನದಲ್ಲಿ ಚಿರಸ್ಮರಣೀಯವಾಗಿ ಉಳಿಯುತ್ತವೆ ಎಂದು ತಹಶೀಲ್ದಾರ್ ಕೃಷ್ಣಮೂರ್ತಿ ಹೇಳಿದರು.

ಕೊಡಗು ಜಿಲ್ಲಾ ಪಂಚಾಯಿತಿ, ಶಾಲಾ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಹಾಗೂ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಮತ್ತು ಕರ್ನಾಟಕ ರಾಜ್ಯ ಪ್ರೌಢಶಾಲಾ ಸಹಶಿಕ್ಷಕರ ಸಂಘದ ಸೋಮವಾರಪೇಟೆ ಹಾಗೂ ಕುಶಾಲನಗರ ತಾಲೂಕು ಘಟಕಗಳ ವತಿಯಿಂದ ಹೆಬ್ಬಾಲೆ ಸಂಯುಕ್ತ ಪದವಿ ಪೂರ್ವ ಕಾಲೇಜು ಆವರಣದಲ್ಲಿ ರಾಷ್ಟಿçÃಯ ಕ್ರೀಡಾ ದಿನಾಚರಣೆ ಹಾಗೂ ಶಿಕ್ಷಕರ ದಿನಾಚರಣೆ ಅಂಗವಾಗಿ ಆಯೋಜಿಸಿದ್ದ ಕ್ರೀಡಾಕೂಟ ಮತ್ತು ಸಾಂಸ್ಕೃತಿಕ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಮಕ್ಕಳ ಪ್ರತಿಭೆಗಳನ್ನು ಗುರುತಿಸಿ ಬೆಳೆಸುವ ಶಿಕ್ಷಕರು ತಮ್ಮ ಪ್ರತಿಭೆಗಳಿಗೂ ಸೂಕ್ತ ವೇದಿಕೆ ಕಲ್ಪಿಸಿಕೊಳ್ಳಬೇಕು. ಕ್ರೀಡೆ ಮತ್ತು ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಭಾಗವಹಿಸುವುದರಿಂದ ವೃತ್ತಿಜೀವನದ ಒತ್ತಡ ಕಡಿಮೆಯಾಗುವುದರ ಜತೆಗೆ ಪರಸ್ಪರ ಬಾಂಧವ್ಯವೂ ವೃದ್ಧಿಯಾಗುತ್ತದೆ ಎಂದರು.

ಕ್ಷೇತ್ರ ಶಿಕ್ಷಣಾಧಿಕಾರಿ ಎಂ. ಕೃಷ್ಣಪ್ಪ ಮಾತನಾಡಿ, ಶಿಕ್ಷಕರ ಬದುಕು ಕೇವಲ ಬೋಧನೆಗೆ ಸೀಮಿತವಾಗಿಲ್ಲ. ಹೆಚ್ಚುತ್ತಿರುವ ಕಾರ್ಯಭಾರ ಹಾಗೂ ನಿರಂತರ ಜವಾಬ್ದಾರಿಗಳಿಂದ ವೃತ್ತಿ ಬದುಕು ಒತ್ತಡದಿಂದ ಕೂಡಿದೆ. ಸಮಾಜವನ್ನು ಕಟ್ಟುವ ಹಾಗೂ ಉತ್ತಮ ಪ್ರಜೆಗಳನ್ನು ರೂಪಿಸುವ ಶಿಕ್ಷಕರು ಒತ್ತಡರಹಿತ ಜೀವನ ನಡೆಸಬೇಕು. ಸಮಾಜದ ಪ್ರಗತಿಗೆ ತಮ್ಮದೇ ಆದ ಕೊಡುಗೆ ನೀಡಬೇಕು ಎಂದು ಸಲಹೆ ನೀಡಿದರು.

ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಪ್ರಧಾನ ಕಾರ್ಯದರ್ಶಿ ಎಚ್.ಎಸ್. ಚೇತನ್ ಮಾತನಾಡಿ, ಇಂತಹ ಕ್ರೀಡಾ ಹಾಗೂ ಸಾಂಸ್ಕೃತಿಕ ಸ್ಪರ್ಧೆಗಳು ಶಿಕ್ಷಕರ ದಿನನಿತ್ಯದ ಚಟುವಟಿಕೆಗಳಿಗೆ ಉತ್ಸಾಹ ಮತ್ತು ಪ್ರೇರಣೆ ನೀಡುತ್ತವೆ. ಮಕ್ಕಳ ಕಲಿಕೆಯ ಜತೆಗೆ ಶಿಕ್ಷಕರು ತಮ್ಮ ಪ್ರತಿಭೆಯನ್ನು ಪ್ರದರ್ಶಿಸಲು ಇವು ಉತ್ತಮ ವೇದಿಕೆಗಳಾಗಿವೆ ಎಂದರು.

ಈ ಸಂದರ್ಭ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ರಾಜ್ಯ ಉಪಾಧ್ಯಕ್ಷ ಎಚ್.ಎನ್. ಮಂಜುನಾಥ್, ಜಿಲ್ಲಾ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಪ್ರಸನ್ನಕುಮಾರ್, ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಟಿ.ಕೆ. ಬಸವರಾಜು, ಸಹ ಕಾರ್ಯದರ್ಶಿ ಟಿ.ಆರ್. ರಮೇಶ್, ಪ್ರೌಢಶಾಲಾ ಸಹಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಹೆಚ್.ಜೆ. ಕುಮಾರ್, ತಾಲೂಕು ಪ್ರೌಢಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಟಿ.ಆರ್. ರತ್ನಕುಮಾರ್, ಕಾರ್ಯದರ್ಶಿ ಟಿ.ವಿ. ಶೈಲಾ, ಸಂಘಟನಾ ಕಾರ್ಯದರ್ಶಿ ದಯಾನಂದ ಪ್ರಕಾಶ್, ಉದ್ಯಮಿಗಳಾದ ಗಿರೀಶ್ ಮಲ್ಲಪ್ಪ, ಆದಂ, ಭಾಷಾ, ರಿಯಾಜ್, ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಎಚ್.ಎಸ್. ರಘು, ಮುಖ್ಯ ಶಿಕ್ಷಕ ಬಸವರಾಜಶೆಟ್ಟಿ ಮತ್ತಿತರರು ಪಾಲ್ಗೊಂಡಿದ್ದರು.

ಕುಶಾಲನಗರ ಹಾಗೂ ಸೋಮವಾರಪೇಟೆ ತಾಲೂಕು ವ್ಯಾಪ್ತಿಯ ವಿವಿಧ ಶಾಲೆಗಳಿಂದ ಆಗಮಿಸಿದ್ದ ಶಿಕ್ಷಕರು ವಿವಿಧ ಕ್ರೀಡೆ ಮತ್ತು ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ಭಾಗವಹಿಸಿ ತಮ್ಮ ಪ್ರತಿಭೆಯನ್ನು ಅನಾವರಣಗೊಳಿಸಿದರು.

ವಾಲಿಬಾಲ್, ಥ್ರೋಬಾಲ್, ಹಗ್ಗಜಗ್ಗಾಟ, ಸಂಗೀತ ಕುರ್ಚಿ, ಭಾರದ ಗುಂಡು ಎಸೆತ, ಭಾವಗೀತೆ, ಜಾನಪದ ಗೀತೆ, ಸಮೂಹ ನೃತ್ಯ, ಭರತನಾಟ್ಯ ಹಾಗೂ ಛದ್ಮವೇಷ ಸೇರಿದಂತೆ ವಿವಿಧ ಸ್ಪರ್ಧೆಗಳು ನಡೆದವು.

ನಾಡಿನ ಕಲೆ, ಸಂಸ್ಕೃತಿ ಹಾಗೂ ಪರಂಪರೆಯನ್ನು ಬಿಂಬಿಸುವ ಹಾಡುಗಳಿಗೆ ಪ್ರಾಥಮಿಕ ಶಾಲಾ ಮಹಿಳಾ ಶಿಕ್ಷಕಿಯರು ಪ್ರದರ್ಶಿಸಿದ ಮನಮೋಹಕ ಸಮೂಹ ನೃತ್ಯಗಳು ನೆರೆದಿದ್ದ ಪ್ರೇಕ್ಷಕರ ಮನಸೂರೆಗೊಂಡವು.