ಮಡಿಕೇರಿ, ಸೆ. ೪: ಅರೆಭಾಷೆಗೆ ಒಂದು ಸಾಂಸ್ಕೃತಿಕ ನೆಲೆಗಟ್ಟನ್ನು ಹಾಕಿಕೊಟ್ಟು ವ್ಯಾಕರಣದ ಶಿಸ್ತನ್ನು ರೂಢಿಸಿದವರು ಭಾಷಾ ವಿಜ್ಞಾನಿ ಕೋಡಿ ಕುಶಾಲಪ್ಪ ಗೌಡರು ಎಂದು ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾದ ಸದಾನಂದ ಮಾವಜಿ ನುಡಿದರು.
ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ವತಿಯಿಂದ ದಕ್ಷಿಣ ಕನ್ನಡ ಗೌಡ ವಿದ್ಯಾಸಂಘ ಸುಳ್ಯ ಹಾಗೂ ಶ್ರೀ ಶಾರದಾ ಪದವಿ ಪೂರ್ವ ಕಾಲೇಜು ಸುಳ್ಯ ಇವರುಗಳ ಸಹಯೋಗದಲ್ಲಿ ನಡೆದ ಡಾ. ಕೋಡಿ ಕುಶಾಲಪ್ಪ ಗೌಡರ ನೆಂಪುನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಅರೆಭಾಷೆಯನ್ನು ಆಡುಭಾಷೆ ಎಂದು ಪರಿಗಣಿಸದೆ, ಅದರ ಭಾಷಿಕ ಸ್ವರೂಪ ಹಾಗೂ ವೈಶಿಷ್ಟö್ಯಗಳನ್ನು ವೈಜ್ಞಾನಿಕವಾಗಿ ಅಧ್ಯಯನ ಮಾಡಬೇಕೆಂಬ ದೃಷ್ಟಿಕೋನವನ್ನು ಬೆಳೆಸಿದವರಲ್ಲಿ ಕೋಡಿಯವರು ಪ್ರಮುಖರು ಎಂದು ಹೇಳುತ್ತಾ, ಕನ್ನಡದ ಸಹೋದರ ಭಾಷೆಗಳನ್ನು ಉಳಿಸಿ ಬೆಳೆಸುವ ಕರ್ತವ್ಯ ನಮ್ಮದು ಎಂದು ನುಡಿದರು.
ದಕ್ಷಿಣ ಕನ್ನಡ ಗೌಡ ವಿದ್ಯಾ ಸಂಘದ ಅಧ್ಯಕ್ಷರಾದ ಧನಂಜಯ ಅಡ್ಪಂಗಾಯ ಅವರು ಮಾತನಾಡಿ, ಗೌಡ ವಿದ್ಯಾಸಂಘವು ಹಲವಾರು ವಿದ್ಯಾರ್ಥಿಗಳಿಗೆ ಆಶ್ರಯವನ್ನು ನೀಡಿದ್ದು ಕೋಡಿಯವರು ಅಂತಹ ಅಗ್ರಗಣ್ಯರಲ್ಲಿ ಒಬ್ಬರು ಎಂದು ತಿಳಿಸಿದರು.
ಶಾರದಾ ಕಾಲೇಜಿನ ನಿವೃತ್ತ ಉಪನ್ಯಾಸಕರಾದ ಪ್ರಸನ್ನ ನಿಡ್ಯಮಲೆ ಹಾಗೂ ಕಾಲೇಜಿನ ಪ್ರಾಂಶುಪಾಲರಾದ ಸ್ವರ್ಣಕಲಾ ಅವರು ಕೋಡಿ ಕುಶಾಲಪ್ಪ ಗೌಡರ ಸಾಹಿತ್ಯಿಕ ಕೊಡುಗೆ ಸ್ಮರಿಸಿ ಅದರ ಮಹತ್ವ ವಿವರಿಸಿದರು.
ನಂತರ ನಡೆದ ಉಪನ್ಯಾಸ ಕಾರ್ಯಕ್ರಮದಲ್ಲಿ ಕೋಡಿ ಕುಶಾಲಪ್ಪ ಗೌಡರ ಶಿಷ್ಯ ಸಾಹಿತಿ ಸಂಜೀವ ಕುದುಪಜೆ ಅವರು ತಮ್ಮ ಗುರುಗಳಾದ ಕೋಡಿಯವರೊಂದಿಗಿನ ಒಡನಾಟವನ್ನು ಸ್ಮರಿಸಿದರು. ಭಾಷಾ ವಿಜ್ಞಾನಿಯಾಗಿದ್ದ ಕೋಡಿಯವರು ಅರೆಭಾಷೆಯ ಬಗ್ಗೆ ಆಂಗ್ಲಭಾಷೆಯಲ್ಲಿ ಬರೆದು ಭಾಷೆಯನ್ನು ವಿಶ್ವವ್ಯಾಪಿಯಾಗಿ ಪಸರಿಸಿದರು. ಕೋಡಿ ಅವರು ಭಾಷಾ ವಿದ್ವಾಂಸರಾಗಿದ್ದರೂ ಅವರೊಳಗಿದ್ದ ಹಾಸ್ಯಪ್ರಜ್ಞೆ, ವಿನೋದ ಮನೋಭಾವ ಹಾಗೂ ಲಾಲಿತ್ಯ ಬಗ್ಗೆ ವಿವರಿಸಿದರು.
“ಅರೆಭಾಷೆ-ಕೋಡಿ ಕುಶಾಲಪ್ಪ ಗೌಡರ ಕೊಡುಗೆ” ಎಂಬ ವಿಷಯದ ಕುರಿತು ಮಾತನಾಡಿದ ಮಡಿಕೇರಿಯ ಫೀಲ್ಡ್ಮಾರ್ಷಲ್ ಕಾರ್ಯಪ್ಪ ಕಾಲೇಜಿನ ನಿವೃತ್ತ ಕನ್ನಡ ಉಪನ್ಯಾಸಕರಾದ ಡಾ. ಎನ್.ವಿ. ಕರುಣಾಕರ ಅವರ, ಕೋಡಿ ಅವರು ಪಂಪಭಾರತ ಆಧಾರಿತ ಅರೆಭಾಷೆ ಮಹಾಭಾರತ ಕೃತಿ ರಚಿಸಿದರೂ ಅವರು ಅದರಲ್ಲಿ ತಮ್ಮ ಸ್ವಂತಿಕೆಯನ್ನು ತುಂಬಿದವರು ಎಂದರು. ತಮ್ಮ ಅರೆಭಾಷೆ ಕೃತಿಯಲ್ಲಿ ಅರೆಭಾಷಿಕರ ಜನಜೀವನದ ಹೂರಣವನ್ನು ತುಂಬಿಸಿ ಅದನ್ನು ಮತ್ತಷ್ಟು ಆಪ್ತವಾಗಿಸಿದವರು ಎಂದು ನುಡಿದರು.
ಕಾರ್ಯಕ್ರಮದ ಸದಸ್ಯ ಸಂಚಾಲಕರಾಗಿದ್ದ ಗೋಪಾಲ ಪೆರಾಜೆ ಪ್ರಾಸ್ತಾವಿಕ ಮಾತುಗಳನ್ನಾಡಿ ಸ್ವಾಗತಿಸಿದರು. ಅಕಾಡೆಮಿಯ ಸದಸ್ಯೆ ಚಂದ್ರಾವತಿ ಬಡ್ಡಡ್ಕ ವಂದಿಸಿದರು. ಸದಸ್ಯರಾದ ಚಂದ್ರಶೇಖರ ಪೇರಾಲು ಹಾಗೂ ಡಾ. ಎನ್.ಎ. ಜ್ಞಾನೇಶ್ ಅವರುಗಳು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಪೂಜಾಶ್ರೀ ವಿತೇಶ್ ಕೋಡಿ ಅವರು ಕಾರ್ಯಕ್ರಮವನ್ನು ನಿರೂಪಿಸಿದರು.