ಸೋಮವಾರಪೇಟೆ,ಸೆ.೪: ಕೊಡಗಿನ ರೈತರು ಹಾಗೂ ಜನಸಾಮಾನ್ಯರಿಗೆ ಮಾರಕವಾಗಿರುವ ಕಸ್ತೂರಿ ರಂಗನ್ ವರದಿಯನ್ನು ರಾಜ್ಯ ಹಾಗೂ ಕೇಂದ್ರ ಸರ್ಕಾರ ತಿರಸ್ಕರಿಸಬೇಕು. ರೈತರ ಜಮೀನನ್ನು ಸೆಕ್ಷನ್ ೪ ಮೂಲಕ ಅರಣ್ಯವನ್ನಾಗಿಸುವ ಯತ್ನವನ್ನು ಕೈಬಿಡಬೇಕೆಂದು ಆಗ್ರಹಿಸಿ ಸರ್ಕಾರಗಳ ಗಮನ ಸೆಳೆಯುವ ನಿಟ್ಟಿನಲ್ಲಿ ತಾ. ೧೧ರಂದು ರೈತ ಹೋರಾಟ ಸಮಿತಿ ನೇತೃತ್ವದಲ್ಲಿ ಮಡಿಕೇರಿಯಲ್ಲಿ ಬೃಹತ್ ಪ್ರತಿಭಟನೆ ನಡೆಯಲಿದೆ ಎಂದು ಹೋರಾಟ ಸಮಿತಿ ಅಧ್ಯಕ್ಷ ಸುರೇಶ್ ಚಕ್ರವರ್ತಿ ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಈಗಾಗಲೇ ಕಸ್ತೂರಿ ರಂಗನ್ ವರದಿ ಅನುಷ್ಠಾನ ಸಂಬAಧ ೭ನೇ ಕರಡು ಅಧಿಸೂಚನೆ ಬಂದಿದೆ. ಅಧಿಸೂಚನೆಯ ಪ್ರಕಾರ ಕೊಡಗಿನಲ್ಲಿರುವ ೫೫ ಗ್ರಾಮಗಳನ್ನು ಪಟ್ಟಿ ಮಾಡಲಾಗಿದೆ. ಈ ಗ್ರಾಮಗಳ ಅಂಚಿನಿAದ ೧೦ ರಿಂದ ೧೩ ಕಿ.ಮೀ. ವ್ಯಾಪ್ತಿಗೆ ಈ ವರದಿ ಪ್ರಭಾವ ಬೀರಲಿದೆ. ಹೀಗಾದಲ್ಲಿ ಕೊಡಗಿನಲ್ಲಿ ಜನಸಾಮಾನ್ಯರು ಬದುಕುವುದೇ ಕಷ್ಟಕರವಾಗಲಿದೆ ಎಂದರು.

ಈ ನಡುವೆ ಕೆಲ ಖಾಸಗಿ ವ್ಯಕ್ತಿಗಳು ಕಸ್ತೂರಿ ರಂಗನ್ ವರದಿ ಅನುಷ್ಠಾನದಿಂದ ಏನೂ ಆಗುವುದಿಲ್ಲ; ಕೆಲವರು ರೈತರನ್ನು ಅನಗತ್ಯವಾಗಿ ಪ್ರಚೋದನೆ ಮಾಡುತ್ತಿದ್ದಾರೆ ಎಂದು ಹೇಳಿಕೆ ನೀಡುವ ಮೂಲಕ ರೈತರನ್ನು ದಾರಿ ತಪ್ಪಿಸಿ, ಭವಿಷ್ಯದಲ್ಲಿ ಒಕ್ಕಲೆಬ್ಬಿಸುವ ಯತ್ನವನ್ನು ನಡೆಸುತ್ತಿರುವುದು ಖಂಡನೀಯ. ಇಂತಹ ಹೇಳಿಕೆಗಳ ವಿರುದ್ಧ ರೈತರು ಈಗಲೇ ಎಚ್ಚೆತ್ತುಕೊಳ್ಳಬೇಕು ಎಂದು ಸುರೇಶ್ ಹೇಳಿದರು.

ಕಸ್ತೂರಿ ರಂಗನ್ ವರದಿಯಲ್ಲಿ ಕೊಡಗಿನ ೫೫ ಗ್ರಾಮಗಳು ಉಲ್ಲೇಖವಾಗಿವೆ. ಗ್ರಾಮಗಳ ಅಂಚಿನಿAದ ೧೩ ಕಿ.ಮೀ. ವ್ಯಾಪ್ತಿಗೆ ಈ ವರದಿಯ ಪ್ರಭಾವ ಇರಲಿದೆ. ಉದಾಹರಣೆಗೆ ಸೋಮವಾರಪೇಟೆ ತಾಲೂಕಿನ ಶನಿವಾರಸಂತೆ ಸಮೀಪದ ನಿಡ್ತ ಗ್ರಾಮದಲ್ಲಿ ನಿಡ್ತ ಅರಣ್ಯವಿದ್ದು, ಇದು ಬಾಣಾವರ, ಅಬ್ಬೂರುಕಟ್ಟೆ, ಆಡಿನಾಡೂರುವರೆಗೆ ವ್ಯಾಪ್ತಿಯನ್ನು ಹೊಂದಿದೆ. ವರದಿಯ ಅನ್ವಯ ಸೋಮವಾರಪೇಟೆ ಪಟ್ಟಣ ಸೇರಿದಂತೆ ನೇರುಗಳಲೆ, ಗಣಗೂರು, ಗೌಡಳ್ಳಿ ಗ್ರಾಮ ಪಂಚಾಯಿತಿಗಳು ಒಳಪಡಲಿವೆ. ಇದೇ ರೀತಿ ಕೊಡ್ಲಿಪೇಟೆ, ಕುಟ್ಟ, ವೀರಾಜಪೇಟೆ, ಸಂಪಾಜೆ, ಮಡಿಕೇರಿ, ಕುಶಾಲನಗರ ಯಡವನಾಡು, ಆನೆಕಾಡು ಫಾರೆಸ್ಟ್, ಸಿದ್ದಾಪುರದಲ್ಲಿ ಮಾಲ್ದಾರೆ ಫಾರೆಸ್ಟ್ ಇದೆ ಎಂದರು.

ಪರಿಸರವಾದಿಗಳೆಂದು ಹೇಳಿಕೊಳ್ಳುವ ಕೆಲವರು ಕಸ್ತೂರಿ ರಂಗನ್ ವರದಿ ಅನುಷ್ಠಾನದಿಂದ ಸಮಸ್ಯೆಯೇ ಇಲ್ಲ ಎಂದು ಹೇಳುವ ಮೂಲಕ ರೈತರ ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ನಮ್ಮ ಹಾಗೂ ಮಕ್ಕಳ ಭವಿಷ್ಯಕ್ಕಾಗಿ ನಮ್ಮ ಭೂಮಿ ಉಳಿಯಬೇಕಾಗಿದೆ. ಇದನ್ನು ಅರಣ್ಯ ಅಥವಾ ಪರಿಸರ ಸೂಕ್ಷö್ಮ ಪ್ರದೇಶವಾಗಿ ಘೋಷಣೆ ಮಾಡಲು ಯಾವ ರೈತರೂ ಅವಕಾಶ ನೀಡಬಾರದು. ಈ ನಿಟ್ಟಿನಲ್ಲಿ ಹೋರಾಟ ಅನಿವಾರ್ಯವಾಗಿದೆ ಎಂದು ಸುರೇಶ್ ಚಕ್ರವರ್ತಿ ಹೇಳಿದರು.

ರಾಜ್ಯ ಸರ್ಕಾರದಿಂದ ಈ ಬಗ್ಗೆ ಪ್ರಸ್ತಾವನೆ ಹೋಗಿ ಕೇಂದ್ರ ಸರ್ಕಾರದಿಂದ ವರದಿಯನ್ನು ಪುನರ್ ಪರಿಶೀಲನೆ ಮಾಡಬೇಕಿದೆ. ಇಲ್ಲಿಂದ ಯಾವುದೇ ವರದಿ ಹೋಗದಿದ್ದರೆ ಕೇಂದ್ರ ಸರ್ಕಾರ ಏಕಮುಖ ತೀರ್ಮಾನ ಕೈಗೊಳ್ಳುವ ಸಾಧ್ಯತೆಯಿದೆ. ಈ ಹಿನ್ನೆಲೆ ತಾ. ೧೧ರಂದು ಪ್ರತಿಭಟನೆ ನಡೆಸುವ ಮೂಲಕ ರಾಜ್ಯ ಹಾಗೂ ಕೇಂದ್ರ ಸರ್ಕಾರದ ಗಮನ ಸೆಳೆಯಬೇಕಿದೆ ಎಂದರು.

ಸಮಿತಿಯ ಕಾನೂನು ಸಲಹೆಗಾರ ಬಿ.ಜೆ. ದೀಪಕ್ ಮಾತನಾಡಿ, ೭ನೇ ಅಧಿಸೂಚನೆಗೆ ಪ್ರತಿಗ್ರಾಮ ಪಂಚಾಯಿತಿಯಿAದ ತಕರಾರು ಸಲ್ಲಿಸುವಂತೆ ಈ ಹಿಂದೆಯೇ ಮನವಿ ಮಾಡಲಾಗಿದೆ. ಅಧಿಸೂಚನೆಗೆ ಮಾರ್ಪಾಡುಗಳು ಆಗಬೇಕಿದೆ. ಬದಲಾವಣೆ ಮಾಡಬೇಕಿದೆ. ಪ್ರತಿ ಗ್ರಾಮ ಪಂಚಾಯಿತಿಯಲ್ಲಿ ವಿಶೇಷ ಗ್ರಾಮ ಸಭೆ ಕರೆದು ವರದಿಯ ಬಗ್ಗೆ ಚರ್ಚೆ ನಡೆಸಿ, ಜನರ ಅಭಿಪ್ರಾಯವನ್ನು ಸರ್ಕಾರಕ್ಕೆ ತಿಳಿಸುವಂತೆ, ತಕರಾರು ಸಲ್ಲಿಸುವಂತೆ ತಾ.ಪಂ. ಕಾರ್ಯನಿರ್ವಹಣಾಧಿಕಾರಿ, ಜಿ.ಪಂ. ಮುಖ್ಯಕಾರ್ಯನಿರ್ವಹಣಾಧಿಕಾರಿಗಳಿಗೆ ಮನವಿ ಮಾಡಿದ್ದೆವು. ಈವರೆಗೆ ಅಧಿಕಾರಿಗಳು ಸಭೆ ಕರೆದಿಲ್ಲ. ಈ ಹಿನ್ನೆಲೆ ಎಲ್ಲಾ ಗ್ರಾಮ ಸಮಿತಿಗಳು ಸ್ವಯಂಪ್ರೇರಿತರಾಗಿ ತಕರಾರು ಸಲ್ಲಿಸಬೇಕು ಎಂದರು.

ಇದು ೭ನೇ ಅಧಿಸೂಚನೆಯಷ್ಟೇ; ಇದಾದ ನಂತರ ೮, ನಂತರ ೯ನೇ ಅಧಿಸೂಚನೆ ಬರುತ್ತದೆ. ವಾಸ್ತವವಾಗಿ ಏನೂ ಆಗುವುದಿಲ್ಲ ಎಂದು ಕೆಲವರು ನಿರ್ಲಕ್ಷö್ಯದ ಹೇಳಿಕೆ ನೀಡುತ್ತಿರುವುದು ಸರಿಯಲ್ಲ. ೭ನೇ ಅಧಿಸೂಚನೆಗೆ ತಕರಾರು ಸಲ್ಲಿಸದೇ ಹೋದಲ್ಲಿ, ಇದೇ ಅಂತಿಮವಾಗಲಿದೆ. ತಕರಾರು ಸಲ್ಲಿಸಿದರೆ ಮಾರ್ಪಾಡು ಅಥವಾ ಕೈಬಿಡಲಾಗುತ್ತದೆ. ಈ ಹಿಂದೆ ಕೇರಳ ಸರ್ಕಾರ ವರದಿಗೆ ತಕರಾರು ಸಲ್ಲಿಸಿದ ಹಿನ್ನೆಲೆ ೭ನೇ ಕರಡು ಅಧಿಸೂಚನೆಯಲ್ಲಿ ಕೇರಳ ರಾಜ್ಯದ ಹೆಸರು ಇಲ್ಲ ಎಂಬುದನ್ನು ಮನಗಾಣಬೇಕಿದೆ ಎಂದು ದೀಪಕ್ ಹೇಳಿದರು.

ಇದೇ ವಿಚಾರವಾಗಿ ಚಿಕ್ಕಮಗಳೂರಿನಲ್ಲಿ ನಡೆದ ಸಭೆಯಲ್ಲಿ ಅಲ್ಲಿನ ಸಂಸದರು ಭಾಗಿಯಾಗಿದ್ದರು. ಮಲೆನಾಡು ಭಾಗದ ಎಲ್ಲಾ ಶಾಸಕರು, ಸಂಸದರನ್ನು ಒಳಗೊಂಡAತೆ ಸಭೆ ನಡೆಸಿ, ಸರ್ಕಾರದ ಸಚಿವರನ್ನು ಭೇಟಿ ಮಾಡುವ ಬಗ್ಗೆ ತೀರ್ಮಾನಿಸಲಾಗಿದೆ. ಇದರೊಂದಿಗೆ ಸಾರ್ವಜನಿಕರನ್ನು ಒಳಗೊಂಡAತೆ ವಿಶೇಷ ನಿಯೋಗ ಕೇಂದ್ರ ಸರ್ಕಾರದ ಸಚಿವರನ್ನೂ ಭೇಟಿ ಮಾಡಿಸುವ ಭರವಸೆ ನೀಡಿದ್ದಾರೆ ಎಂದರು.

ಪರಿಸರ ಸೂಕ್ಷö್ಮ ವಲಯವನ್ನು ಶೂನ್ಯಕ್ಕೆ ಇಳಿಸಬೇಕೆಂಬುದು ನಮ್ಮ ಆಗ್ರಹವಾಗಿದೆ. ತಕ್ಷಣ ರಾಜ್ಯ ಸರ್ಕಾರದಿಂದ ಸಮಿತಿ ರಚನೆ ಮಾಡಿ ಮಾರ್ಪಾಡುಗಳ ಬಗ್ಗೆ ಅಧ್ಯಯನ ನಡೆಸಿ ಕೇಂದ್ರಕ್ಕೆ ವರದಿ ಸಲ್ಲಿಸಿದರೆ ೮ನೇ ಅಧಿಸೂಚನೆಯಲ್ಲಿ ಕರ್ನಾಟಕದ ಹೆಸರು ಬರುವುದಿಲ್ಲ. ಕೇವಲ ವರದಿಯನ್ನು ತಿರಸ್ಕಾರ ಮಾಡಿದರೆ ಯಾವುದೇ ಪ್ರಯೋಜನವಿಲ್ಲ. ತಕರಾರು, ಮಾರ್ಪಾಡುಗಳ ಬಗ್ಗೆ ವಿವರಣೆ ಒದಗಿಸಬೇಕು. ಕಸ್ತೂರಿ ರಂಗನ್, ಸೆಕ್ಷನ್೪, ಸಿ ಮತ್ತು ಡಿ ಲ್ಯಾಂಡ್ ಸಮಸ್ಯೆಗಳನ್ನು ಒಟ್ಟು ಬಗೆಹರಿಸಬೇಕೆಂದು ಪ್ರತಿಭಟನೆಯಲ್ಲಿ ಒತ್ತಾಯಿಸಲಾಗುವುದು ಎಂದರು.

ತಾ. ೧೧ರಂದು ಬೆಳಿಗ್ಗೆ ೧೦.೩೦ಕ್ಕೆ ಸುದರ್ಶನ ವೃತ್ತದಲ್ಲಿ ಜಮಾವಣೆಗೊಂಡು ನಂತರ ಪ್ರತಿಭಟನಾ ಮೆರವಣಿಗೆಯ ಮೂಲಕ ಗಾಂಧಿ ಮೈದಾನಕ್ಕೆ ತೆರಳಿ ನಂತರ ಜಿಲ್ಲಾಧಿಕಾರಿಗಳ ಕಚೇರಿಗೆ ತೆರಳಲಾಗುವುದು. ಪ್ರತಿಭಟನೆಯಲ್ಲಿ ಜಿಲ್ಲೆಯ ವಿವಿಧ ಭಾಗಗಳಿಂದ ರೈತರು, ಸಂಘ ಸಂಸ್ಥೆಗಳ ಕಾರ್ಯಕರ್ತರು, ರಾಜಕೀಯ ರಹಿತವಾಗಿ ಸಾರ್ವಜನಿಕರು ಭಾಗವಹಿಸಲಿದ್ದಾರೆ ಎಂದು ಮಾಹಿತಿ ನೀಡಿದರು. ಗೋಷ್ಠಿಯಲ್ಲಿ ಸಮಿತಿಯ ನಿರ್ದೇಶಕರುಗಳಾದ ಕೂತಿ ದಿವಾಕರ್, ಗೌಡಳ್ಳಿ ಪೃಥ್ವಿ, ಅಬ್ಬೂರುಕಟ್ಟೆ ಸಂಭ್ರಮ್ ಇದ್ದರು.