ಚೆಯ್ಯಂಡಾಣೆ /ಕಡಂಗ, ಸೆ. ೪: ಧರ್ಮಗಳನ್ನು ಮರೆತು ನಡೆಸುವ ಕಾರ್ಯಕ್ರಮ ನಿಜಕ್ಕೂ ಶ್ಲಾಘನೀಯ ಎಂದು ಕಡಂಗ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಕೋಡಿರ ಪ್ರಸನ್ನ ತಮ್ಮಯ್ಯ ಹೇಳಿದರು.

ಇವರು ಈದ್ ಮಿಲಾದ್ ಪ್ರಯುಕ್ತ ಕಡಂಗ ಬದ್ರಿಯಾ ಮಸೀದಿಯ ವತಿಯಿಂದ ಆಯೋಜಿಸಿದ ಮಾದಕ ವಸ್ತುಗಳ ವಿರುದ್ಧ ಬೃಹತ್ ಜನಜಾಗೃತಿ ಜಾಥಾ ಹಾಗೂ ಜಾಗೃತಿ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿದರು. ನಮ್ಮ ದೇಶವು ಹಲವು ಧರ್ಮಗಳಿಂದ ಕಟ್ಟಿದ ಸುಂದರ ದೇಶ,ಇಂದು ನಾವು ಮಾದಕ ದ್ರವ್ಯ ಎಂಬ ಪಿಡುಗಿನಿಂದ ನಮ್ಮ ಯುವ ಪೀಳಿಗೆಯನ್ನು ಉಳಿಸಬೇಕಾಗಿದೆ. ಇದರ ಬಳಕೆಯಿಂದ ಯುವಕ, ಯುವತಿಯರು ವಿವಿಧ ಅಪರಾಧ ಪ್ರಕರಣಗಳಲ್ಲಿ ಸಿಲುಕಿ ತಮ್ಮ ಭವಿಷ್ಯವನ್ನು ಹಾಳು ಮಾಡುತ್ತಿದ್ದಾರೆ.ನಾವೆಲ್ಲರೂ ಧರ್ಮಗಳನ್ನು ಮರೆತು ಇಂತಹ ಕಾರ್ಯಕ್ರಮಗಳನ್ನು ಆಯೋಜಿಸ ಬೇಕು ಎಂದರು. ವೀರಾಜಪೇಟೆ ಗ್ರಾಮಾಂತರ ಠಾಣಾಧಿಕಾರಿ ಎನ್.ಜೆ.ಲತಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿ ಸಮಾಜದಲ್ಲಿ ಯುವಕ ಯುವತಿಯರು, ಅಪ್ರಾಪ್ತರು ಮಾದಕ ವ್ಯಸನಿಗಳಾಗುತ್ತಿದ್ದಾರೆ.ಇದನ್ನು ನಿಯಂತ್ರಿಸಲು ನಾವೆಲ್ಲರೂ ಪಣತೊಡಬೇಕಾಗಿದೆ ಎಂದರು. ಲೇಖಕ ಮೊಹಮ್ಮದ್ ನಿಝಾರ್ ಸಖಾಫಿ ಮಾತನಾಡಿ ಸಮಾಜದಲ್ಲಿ ವ್ಯಾಪಕವಾಗಿರುವ ಮಾದಕ ವ್ಯಸನ ಪಿಡುಗನ್ನು ಸಮಾಜದಿಂದ ಕಿತ್ತೊಗೆಯಲು ನಾವೆಲ್ಲರೂ ಒಟ್ಟಾಗಿ ಸಾಮರಸ್ಯದಿಂದ ಯಾವುದೇ ಜಾತಿ,ಭೇದಭಾವವಿಲ್ಲದೆ ಹೋರಾಡಬೇಕಿದೆ.ಆದರೆ ಮಾತ್ರ ನಮ್ಮ ನಾಡು,ದೇಶ ಮಾದಕ ವ್ಯಸನ ಮುಕ್ತವಾಗಲು ಸಾಧ್ಯವೆಂದರು. ಪತ್ರಕರ್ತ ನೌಫಲ್ ಎಂ.ಬಿ. ಮಾತನಾಡಿ ಪ್ರವಾದಿಯವರ ಜನ್ಮದಿನಾಚರಣೆಯ ಪ್ರಯುಕ್ತ ಬದ್ರಿಯಾ ಮಸೀದಿಯವರು ಕೈಗೊಂಡಿರುವ ಮಾದಕ ವಸ್ತುಗಳ ಬಳಕೆಯ ವಿರುದ್ಧದ ಜನ ಜಾಗೃತಿ ಅಭಿಯಾನ ಕಾರ್ಯಕ್ರಮವು ಸಮಾಜಕ್ಕೆ ಮಾದರಿಯಾಗಿದೆ. ನಿವೃತ್ತ ಸೈನಿಕ ಎಂ.ಕೆ.ಅಬ್ದುಲ್ ಸಲಾಂ ಮಾತನಾಡಿ ಮಾದಕ ವಸ್ತುಗಳ ಸೇವನೆಯಿಂದ ನಮ್ಮ ಯುವ ಪೀಳಿಗೆಯನ್ನು ರಕ್ಷಿಸಬೇಕಾದರೆ ನಾವು ಪೊಲೀಸ್ ಇಲಾಖೆಯೊಂದಿಗೆ ಕೈಜೋಡಿಸಬೇಕು,ಮಾದಕ ವ್ಯಸನಿಗಳನ್ನು ಬುಡದಿಂದ ಕಿತ್ತರೆ ಮಾತ್ರ ಅದನ್ನು ತಡೆಗಟ್ಟಲು ಸಾಧ್ಯ,ಡ್ರಗ್ಸ್ ಮಾತ್ರವಲ್ಲ ಯಾವುದೇ ಸಮಾಜಘಾತುಕ ಚಟುವಟಿಕೆಗಳು ಕಂಡುಬAದರೆ ಪೊಲೀಸ್ ಇಲಾಖೆಯೊಂದಿಗೆ ಸಾರ್ವಜನಿಕರು ಸಹಕರಿಸುವಂತೆ ತಿಳಿಸಿದರು.

ವೀರಾಜಪೇಟೆ ಠಾಣಾಧಿಕಾರಿ ವಾಣಿ ಕಾರ್ಯಕ್ರಮದಲ್ಲಿ ಮಾತನಾಡಿದರು. ಬದ್ರಿಯಾ ಮದರಸದಿಂದ ಆರಂಭಗೊAಡ ಜಾಥಾವು ಪಟ್ಟಣದ ಮುಖ್ಯ ಬೀದಿಗಳಲ್ಲಿ ಸಂಚರಿಸಿ,ಬದ್ರಿಯಾ ಮಸೀದಿಯ ಮುಖ್ಯ ದ್ವಾರದ ಬಳಿ ಸಮಾಪನಗೊಂಡಿತು. ಜಾಥಾದಲ್ಲಿ ಮಾದಕ ವ್ಯಸನದ ದುಷ್ಪರಿಣಾಮಗಳ ಕುರಿತು ಪೋಸ್ಟರ್ ಹಾಗೂ ಘೋಷ ವಾಕ್ಯ ಮೊಳಗಿತು. ಈ ಸಂದರ್ಭದಲ್ಲಿ ಬದ್ರಿಯಾ ಮುಸ್ಲಿಂ ಜಮಾಅತ್ ಅಧ್ಯಕ್ಷ ಉಸ್ಮಾನ್ ಹಾಜಿ,ನರಿಯಂದಡ ಗ್ರಾಮ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಕೋಡಿರ ವಿನೋದ್ ನಾಣಯ್ಯ,ಬದ್ರಿಯಾ ಜಮಾಅತ್ ಯುಎಇ ಅಧ್ಯಕ್ಷ ಹಂಸ,ಜಮಾಅತ್ ಆಡಳಿತ ಮಂಡಳಿ ಪದಾಧಿಕಾರಿಗಳು, ಎಸ್‌ಎಸ್‌ಎಫ್,

ಎಸ್‌ವೈಎಸ್, ಕೆಎಂಜೆ, ಎಸ್‌ಬಿಎಸ್ ಕಾರ್ಯಕರ್ತರು ಹಾಗೂ ಮತ್ತಿತರರು ಉಪಸ್ಥಿತರಿದ್ದರು. ಬದ್ರಿಯಾ ಸುನ್ನಿ ಮುಸ್ಲಿಂ ಜಮಾಅತ್ ಉಪಾಧ್ಯಕ್ಷ ರಶೀದ್ ಐಬಿಎಂ ಸ್ವಾಗತಿಸಿ, ಪ್ರಧಾನ ಕಾರ್ಯದರ್ಶಿ ರಾಶೀದ್

ಸರ್ವರನ್ನು ವಂದಿಸಿದರು. -ಅಶ್ರಫ್ /ನೌಫಲ್