ವೀರಾಜಪೇಟೆ, ಸೆ. ೨: ಶಬರಿಮಲೆ ಅಯ್ಯಪ್ಪ ಸ್ವಾಮಿ ಹಾಗೂ ಮಾಳಿಗಪುರತ್ತಮ್ಮ ದೇವಿಯ ವಿರುದ್ಧ ಅವಹೇಳನಕಾರಿ ಭಾಷಣ ಮಾಡಿರುವ ಕಮ್ಯುನಿಸ್ಟ್ ಪಕ್ಷದ ಮುಖಂಡ ಸನ್ನಿ ಕಫಿಕಾಡ್ ವಿರುದ್ಧ ವೀರಾಜಪೇಟೆಯಲ್ಲಿ ಬೃಹತ್ ಪ್ರತಿಭಟನೆ ನಡೆಯಿತು. ಇಲ್ಲಿನ ಶ್ರೀ ಮಲೆತಿರಕೆ ಅಯ್ಯಪ್ಪ ದೇವಾಲಯದ ಅಯ್ಯಪ್ಪ ಭಕ್ತರು ಹಾಗೂ ವಿವಿಧ ಹಿಂದೂ ಸಂಘಟನೆಗಳ ಸದಸ್ಯರು ಜಂಟಿಯಾಗಿ ನಗರದ ಗಡಿಯಾರ ಕಂಬದ ಬಳಿ ಜಮಾಯಿಸಿ ಆಕ್ರೋಶ ವ್ಯಕ್ತಪಡಿಸಿದರು.

ಕೇರಳ ರಾಜ್ಯದ ಮಲಪ್ಪುರಂ ಜಿಲ್ಲೆಯ ತಿರೂರು ತಾಲೂಕಿನ ಸರ್ಕಾರಿ ಪ್ರಾಥಮಿಕ ಶಾಲೆಯ ಕಾರ್ಯಕ್ರಮವೊಂದರಲ್ಲಿ ಸನ್ನಿ ಕಫಿಕಾಡ್ ಅವರು ದೇವತಾ ನಿಂದನೆ ಮಾಡಿದ್ದಾರೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.

ಪ್ರತಿಭಟನೆಯ ನೇತೃತ್ವ ವಹಿಸಿದ್ದ ಸುರೇಶ್ ಮಾತನಾಡಿ, ಶಬರಿಮಲೆ ಅಯ್ಯಪ್ಪ ಸನ್ನಿಧಿಯು ಕೋಟ್ಯಂತರ ಹಿಂದೂಗಳ ಪವಿತ್ರ ಹಾಗೂ ಭಾವನಾತ್ಮಕ ಕೇಂದ್ರವಾಗಿದೆ. ವರ್ಷವಿಡೀ ಕೋಟ್ಯಂತರ ಭಕ್ತರು ಇಲ್ಲಿಗೆ ಭೇಟಿ ನೀಡುತ್ತಾರೆ. ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವ ಉದ್ದೇಶದಿಂದಲೇ ಆ ವ್ಯಕ್ತಿ ಇಂತಹ ಕೀಳು ಮಟ್ಟದ ಭಾಷಣ ಮಾಡಿದ್ದಾರೆ. ಆತನ ವಿರುದ್ಧ ತಕ್ಷಣವೇ ಧಾರ್ಮಿಕ ವಿರೋಧಿ ಕಾಯ್ದೆಯಡಿ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಮತ್ತೊಬ್ಬ ಮುಖಂಡ ಟಿ.ವಿ. ಅನಿಲ್ ಕುಮಾರ್ ಮಾತನಾಡಿ, ಶಬರಿಮಲೆ ಅಯ್ಯಪ್ಪ ದೇವರ ವಿರುದ್ಧ ಈ ರೀತಿಯ ಅಪಪ್ರಚಾರ ನಡೆಯುತ್ತಿರುವುದು ಇದ ಮೊದಲಲ್ಲ. ಸಾರ್ವಜನಿಕ ಶಾಲೆಯಲ್ಲಿ ಸಣ್ಣ ಮಕ್ಕಳ ಮುಂದೆ ದೇವರು ಮತ್ತು ದೇವತೆಯ ಬಗ್ಗೆ ಇಷ್ಟು ಕೀಳಾಗಿ ಮಾತನಾಡಿರುವುದು ಖಂಡನೀಯ. ಪೊಲೀಸರು ಈತನ ವಿರುದ್ಧ ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡು ಶಿಕ್ಷೆ ವಿಧಿಸಬೇಕು ಎಂದರು.

ಪ್ರತಿಭಟನೆಯಲ್ಲಿ ಪ್ರಮುಖರಾದ ಭಾಸ್ಕರ, ಸ್ನೇಕ್ ಸತೀಶ್, ಗಣೇಶ, ಸುಮೇಶ್, ಜನು, ಚಂದ್ರು, ಸಜೀವನ್, ಮೋಹನ್, ಉಣ್ಣಿ ಸೇರಿದಂತೆ ನೂರಾರು ಅಯ್ಯಪ್ಪ ಭಕ್ತರು ಹಾಗೂ ಸಾರ್ವಜನಿಕರು ಪಾಲ್ಗೊಂಡಿದ್ದರು.