ಕುಶಾಲನಗರ, ಸೆ. ೨: ಕುಶಾಲನಗರ ಪುರಸಭೆ ವ್ಯಾಪ್ತಿಯ ಗೃಹ ಮತ್ತು ವಾಣಿಜ್ಯ ಕಟ್ಟಡಗಳಿಗೆ ಒಳಚರಂಡಿ ಸಂಪರ್ಕ ಒದಗಿಸಲಾಗುತ್ತಿದ್ದು ತಕ್ಷಣ ಮನೆಯ ಮತ್ತು ವಾಣಿಜ್ಯ ಕಟ್ಟಡಗಳ ಮಾಲೀಕರು ಒಳಚರಂಡಿ ಜಾಲಕ್ಕೆ ಸಂಪರ್ಕ ಕಲ್ಪಿಸಿಕೊಳ್ಳುವಂತೆ ಮಡಿಕೇರಿ ಕ್ಷೇತ್ರ ಶಾಸಕ ಡಾ ಮಂತರ್ ಗೌಡ ತಿಳಿಸಿದ್ದಾರೆ. ಕುಶಾಲನಗರ ಪುರಸಭೆ ಸಭಾಂಗಣದಲ್ಲಿ ಒಳಚರಂಡಿ ಯೋಜನೆಯ ಪ್ರಗತಿ ಪರಿಶೀಲನೆ ಸಭೆಯ ಅಧ್ಯಕ್ಷತೆ ವಹಿಸಿ ಸಂಬAಧಿಸಿದ ಅಧಿಕಾರಿಗಳೊಂದಿಗೆ ಕಾಮಗಾರಿ ಬಗ್ಗೆ ಚರ್ಚಿಸಿದ ನಂತರ ಮಾತನಾಡಿದ ಅವರು, ಕುಶಾಲನಗರ ಒಳಚರಂಡಿ ಮಂಡಳಿ ಮೂಲಕ ಸಂಪರ್ಕ ಪಡೆಯಬೇಕಾಗಿದ್ದು, ಈ ಸಂಬAಧ ಕುಶಾಲನಗರ ಪುರಸಭೆಗೆ ನಿಗದಿತ ಸಂಪರ್ಕ ಶುಲ್ಕ ಪಾವತಿಸಿ ಆಕ್ಷೇಪಣಾ ರಹಿತ ದೃಢೀಕರಣ ಪತ್ರ ಪಡೆಯಬೇಕಾಗಿದೆ ಯೋಜನೆಯ ಯಶಸ್ವಿಗೆ ಪುರಸಭೆ ವ್ಯಾಪ್ತಿಯ ನಿವಾಸಿಗಳು ಕೈಜೋಡಿಸಿ ಯೋಜನೆಯನ್ನು ಸದುಪಯೋಗಪಡಿಸಿಕೊಳ್ಳುವಂತೆ ತಿಳಿಸಿದರು.

ಒಳಚರಂಡಿ ಯೋಜನೆಯ ವಾಣಿಜ್ಯ ಮತ್ತು ವಸತಿ ಸಂಪರ್ಕ ಶುಲ್ಕ ಒಂದು ಬಾರಿ ಮತ್ತು ನಿರ್ವಹಣಾ ಶುಲ್ಕ ವಾರ್ಷಿಕ ದರ ನಿಗದಿಪಡಿಸಲಾಗಿತ್ತು. ಸಭೆಯಲ್ಲಿ ಚರ್ಚಿಸಿದ ನಂತರ ಸಂಪರ್ಕ ಶುಲ್ಕವನ್ನು ಮಾತ್ರ ತಕ್ಷಣ ಪಾವತಿಸುವಂತೆ ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಗಿದೆ. ಉಳಿದಂತೆ ವಾರ್ಷಿಕ ನಿರ್ವಹಣಾ ಶುಲ್ಕವನ್ನು ಮುಂದಿನ ಹಣಕಾಸು ವರ್ಷದಲ್ಲಿ ಪಾವತಿಸಲು ಅವಕಾಶ ಕಲ್ಪಿಸಲಾಗುವುದು ಎಂದು ಹೇಳಿದರು.

ಕಲ್ಯಾಣ ಮಂಟಪ ಹೊಟೇಲ್ ಮತ್ತು ವಸತಿಗೃಹಗಳಿಗೆ ಎರಡು ಗ್ರೇಡ್‌ಗಳಲ್ಲಿ ಸಂಪರ್ಕ ಶುಲ್ಕ ನಿಗದಿಪಡಿಸಲಾಗಿದ್ದು ಇತರ ಎಲ್ಲ ಸಣ್ಣ ಉದ್ಯಮಿಗಳು ಮತ್ತು ಗೃಹ ಬಳಕೆಗೆ ಪ್ರತ್ಯೇಕ ಮೊತ್ತದ ಶುಲ್ಕ ನಿಗದಿಪಡಿಸಲಾಗಿದೆ. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ವಸತಿ ಸಂಪರ್ಕಗಳಿಗೆ ಸಂಪರ್ಕ ಶುಲ್ಕವನ್ನು ಪುರಸಭೆ ವಿಶೇಷ ನಿಧಿಯಿಂದ ಭರಿಸಲಾಗುವುದು.

ಕಟ್ಟಡ ಬಾಡಿಗೆ ನೀಡಿದ್ದಲ್ಲಿ ಇದು ಅನ್ವಯವಾಗುವುದಿಲ್ಲ ಎಂದು ಅಧಿಕಾರಿಗಳು ಸಭೆಗೆ ಮಾಹಿತಿ ಒದಗಿಸಿದರು. ಕಳೆದ ಮೂರು ತಿಂಗಳಿನಿAದ ಸಂಪರ್ಕ ಶುಲ್ಕ ಪಾವತಿಸುವಂತೆ ಜನರಿಗೆ ಮಾಹಿತಿ ನೀಡಿದ್ದು ಇದುವರೆಗೆ ಕೇವಲ ೩೦ ಸಂಪರ್ಕಗಳಿಗೆ ಮಾತ್ರ ಶುಲ್ಕ ಪಾವತಿಸಿರುವ ಬಗ್ಗೆ ಅಧಿಕಾರಿಗಳು ಸಭೆಗೆ ಮಾಹಿತಿ ಒದಗಿಸಿದರು.

ಆಯಾ ವಾರ್ಡ್ಗಳಲ್ಲಿ ವಾರ್ಡ್ ಸಭೆ ಏರ್ಪಡಿಸುವ ಮೂಲಕ ಅಧಿಕಾರಿಗಳು ಈ ಬಗ್ಗೆ ನಾಗರಿಕರಲ್ಲಿ ಮಾಹಿತಿ ನೀಡುವ ಕೆಲಸ ಮಾಡಬೇಕಾಗಿದೆ ಎಂದು ಶಾಸಕರು ಹೇಳಿದರು.

ಪುರಸಭೆ ವ್ಯಾಪ್ತಿಯಲ್ಲಿ ಸುಮಾರು ೬,೫೦೦ ಸಂಪರ್ಕಗಳು ಇದ್ದು ಜನರು ಸ್ಪಂದನ ನೀಡದಿರುವ ಬಗ್ಗೆ ಸಭೆಯಲ್ಲಿ ಸುದೀರ್ಘ ಚರ್ಚೆ ನಡೆಯಿತು.

ನಂತರ ಶಾಸಕರ ನಿರ್ದೇಶನದ ಮೇರೆಗೆ ಕುಶಾಲನಗರ ಚೇಂಬರ್ ಆಫ್ ಕಾಮರ್ಸ್ ಪ್ರತಿನಿಧಿಗಳನ್ನು ಸಭೆಗೆ ಆಹ್ವಾನಿಸಿ ವಿಷಯ ಪ್ರಸ್ತಾಪಿಸಲಾಯಿತು.

ಸಂಪರ್ಕ ಶುಲ್ಕ ಮತ್ತು ನಿರ್ವಹಣಾ ಶುಲ್ಕದ ಮೊತ್ತ ದುಬಾರಿಯಾಗಿದ್ದು ಈ ಬಗ್ಗೆ ರಿಯಾಯಿತಿ ನೀಡಬೇಕೆಂದು ಸಭೆಯಲ್ಲಿ ಪಾಲ್ಗೊಂಡ ಚೇಂಬರ್ ಆಫ್ ಕಾಮರ್ಸ್ ಅಧ್ಯಕ್ಷರಾದ ಕೆ ಎಸ್ ನಾಗೇಶ್ ಮತ್ತು ಪ್ರತಿನಿಧಿಗಳು ತಮ್ಮ ಅಭಿಪ್ರಾಯ ಮಂಡಿಸಿದರು.

ಪುರಸಭೆಯಿಂದ ಒಳಚರಂಡಿ ಮಂಡಳಿಗೆ ಕಾಮಗಾರಿ ಸಂಬAಧ ೧ ಕೋಟಿ ೫೭ ಲಕ್ಷ ಹಣ ಪಾವತಿಸಬೇಕಾಗಿದೆ ಮತ್ತು ವಾರ್ಷಿಕ ೨ ಕೋಟಿ ರೂಗಳ ನಿರ್ವಹಣಾ ವೆಚ್ಚ ಭರಿಸಬೇಕಾಗಿದೆ ಎಂದು ಮುಖ್ಯ ಅಧಿಕಾರಿ ಟಿ ಎಸ್ ಗಿರೀಶ್ ಸಭೆಗೆ ತಿಳಿಸಿದರು. ಸಂಪರ್ಕ ಶುಲ್ಕ ಪಾವತಿಸಿದ ನಂತರ ಕಟ್ಟಡದ ಮಾಲೀಕರು ತಮ್ಮ ಕಟ್ಟಡದಿಂದ ಒಳಚರಂಡಿ ಪೈಪುಗಳಿಗೆ ಸಂಪರ್ಕ ಕಲ್ಪಿಸುವ ಕಾಮಗಾರಿ ವೆಚ್ಚವನ್ನು ಸ್ವತಹ ಭರಿಸಬೇಕಾಗುತ್ತದೆ ಎಂದು ಒಳಚರಂಡಿ ಮಂಡಳಿ ಸಹಾಯಕ ಕಾರ್ಯಪಾಲಕ ಅಭಿಯಂತರ ಅಧಿಕಾರಿ ಪ್ರಸನ್ನ ಕುಮಾರ್ ಸಭೆಗೆ ತಿಳಿಸಿದರು. ಮಂಡಳಿಯ ಲೈಸೆನ್ಸ್ ಹೊಂದಿರುವ ಗುತ್ತಿಗೆದಾರರ ಮೂಲಕ ಸಂಪರ್ಕ ಕಾಮಗಾರಿ ನಡೆಸಲು ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಹೇಳಿದರು.

ಸಭೆಯಲ್ಲಿ ಉಪಸ್ಥಿತರಿದ್ದ ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ಕಾರ್ಯ ಪಾಲಕ ಅಭಿಯಂತರ ಜಯಕುಮಾರ್ ಮಾತನಾಡಿ, ಕುಶಾಲನಗರದ ಹಿಂದಿನ ಪಟ್ಟಣ ಪಂಚಾಯಿತಿ ವ್ಯಾಪ್ತಿ ಮುಳ್ಳುಸೋಗೆ ಗ್ರಾಮ ಮತ್ತು ಭಾಗಶಃ ಗುಮ್ಮನ ಕೊಲ್ಲಿ ಗ್ರಾಮಗಳಲ್ಲಿ ಒಟ್ಟು ೭೬ ಕಿಲೋಮೀಟರ್ ಉದ್ದ ಒಳಚರಂಡಿ ಜಾಲವನ್ನು ಅಳವಡಿಸಲಾಗಿದೆ ಎರಡು ವೆಟ್ ವೆಲ್ ಗಳನ್ನು ನಿರ್ಮಾಣ ಮಾಡಿದ್ದು ೪.೫ ದಶಲಕ್ಷ ಲೀಟರ್ ಸಾಮರ್ಥ್ಯದ ಮಲಿನ ನೀರು ಶುದ್ಧೀಕರಣ ಘಟಕ ವೆಟ್ ವೆಲ್‌ಗಳಿಂದ ಏರು ಕೊಳವೆ ಸಾಲು ಅಳವಡಿಸುವ ಕಾಮಗಾರಿ ಪೂರ್ಣಗೊಂಡಿದೆ. ಪಟ್ಟಣದ ಸುಮಾರು ೩೫ ಬಡಾವಣೆಗಳು ಮತ್ತು ಕುಶಾಲನಗರ ರಥ ಬೀದಿ ಹಾರಂಗಿ ಜಂಕ್ಷನ್ ತನಕ ಗಣಪತಿ ದೇವಾಲಯದಿಂದ ಕೊಪ್ಪ ಗೇಟ್ ತನಕ ಮುಖ್ಯ ರಸ್ತೆಯಲ್ಲಿ ಹಾಗೂ ಕೆಲವು ಕಾಮಗಾರಿಗಳು ಪೂರ್ಣಗೊಂಡಿದೆ ಎಂದು ತಿಳಿಸಿದರು.

ಪಟ್ಟಣ ವ್ಯಾಪ್ತಿಯ ಸಾರ್ವಜನಿಕರು ತಮ್ಮ ಮನೆಯಲ್ಲಿನ ಶೌಚಾಲಯ ಸ್ನಾನಗೃಹ ಹಾಗೂ ಅಡುಗೆಮನೆಯ ತ್ಯಾಜ್ಯ ನೀರನ್ನು ಮಾತ್ರ ಪಟ್ಟಣದ ಒಳಚರಂಡಿ ವ್ಯವಸ್ಥೆಗೆ ಬಿಡುವುದು ಈ ಸಂಬAಧ ಶೌಚಾಲಯ, ಸ್ನಾನಗೃಹ ಹಾಗೂ ಅಡುಗೆ ಮನೆಗಳಿಂದ ಕೊಳವೆ ಸಾಲು ಅಳವಡಿಸಿ ಜಂಕ್ಷನ್ ಚೇಂಬರ್ ನಿರ್ಮಿಸಿ ಕಾಮನ್ ಚೇಂಬರ್ ಮೂಲಕ ಅಳವಡಿಸಿರುವ ಮುಖ್ಯ ಚೇಂಬರ್ ಮೂಲಕ ಜೋಡಣೆ ಮಾಡುವ ಕೆಲಸ ಇನ್ನಷ್ಟೇ ನಡೆಯಬೇಕಾಗಿದೆ ಎಂದರು.

ಮAಡಳಿಯ ಅನುಮೋದಿತ ಪ್ಲಂಬರ್‌ಗಳ ಮೂಲಕ ಮಾತ್ರ ಒಳಚರಂಡಿ ಜೋಡಣೆ ಕಾಮಗಾರಿ ನಡೆಯಲಿದೆ ಎಂದು ಅಧಿಕಾರಿಗಳ ತಿಳಿಸಿದರು.

ಕುಶಾಲನಗರ ಪಟ್ಟಣಕ್ಕೆ ಒಳಚರಂಡಿ ಕಲ್ಪಿಸುವ ಯೋಜನೆಯ ೨೦೧೨ರಲ್ಲಿ ಸರ್ಕಾರ ಅಂದಾಜು ೪೩ ಕೋಟಿ ವೆಚ್ಚದಲ್ಲಿ ಯೋಜನೆ ರೂಪಿಸಿದ್ದು ೨೦೧೪ರಲ್ಲಿ ಕಾಮಗಾರಿ ಆರಂಭಗೊAಡಿದ್ದು ಕಳೆದ ೧೨ ವರ್ಷಗಳಿಂದ ಕಾಮಗಾರಿ ಕುಂಟುತ್ತಾ ಸಾಗಿದೆ. ಈ ಹಿನ್ನೆಲೆಯಲ್ಲಿ ಪಟ್ಟಣದ ನಾಗರಿಕರು ಯೋಜನೆಯ ಬಗ್ಗೆ ವಿಶ್ವಾಸ ಕಳೆದುಕೊಂಡಿರುವುದಾಗಿ ಸಭೆಯಲ್ಲಿ ಅಭಿಪ್ರಾಯ ವ್ಯಕ್ತಗೊಂಡಿದ್ದು ಕೂಡಲೇ ಕುಶಾಲನಗರ ಪಟ್ಟಣದ ಒಳಚರಂಡಿ ಯೋಜನೆಯನ್ನು ಪೂರ್ಣಗೊಳಿಸಿ ಲೋಕಾರ್ಪಣೆ ಮಾಡುವಂತೆ ಶಾಸಕರು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.

ಇದೇ ಸಂದರ್ಭ ಕುಶಾಲನಗರದಲ್ಲಿ ಕೈಗೊಂಡಿರುವ ೨೪x೭ ಕುಡಿಯುವ ನೀರು ಸರಬರಾಜು ಯೋಜನೆಯ ಕಾಮಗಾರಿ ಬಗ್ಗೆ ಅಧಿಕಾರಿಗಳು ಸಭೆಯಲ್ಲಿ ಮಾಹಿತಿ ನೀಡಿದರು.

ಸಭೆಯಲ್ಲಿ ಗ್ಯಾರಂಟಿ ಅನುಷ್ಠಾನ ಸಮಿತಿಯ ಅಧ್ಯಕ್ಷÀ ವಿಪಿ ಶಶಿಧರ್, ಕುಶಾಲನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಪ್ರಮೋದ್ ಮುತ್ತಪ್ಪ, ಪುರಸಭೆ ಆಡಳಿತ ಅಧಿಕಾರಿ ನಿತಿನ್ ಚಿಕ್ಕಿ, ಒಳಚರಂಡಿ ಯೋಜನೆಯ ಕಾರ್ಯಪಾಲಕ ಅಭಿಯಂತರ ಜಯಕುಮಾರ್, ಪುರಸಭೆ ಮುಖ್ಯ ಅಧಿಕಾರಿ ಟಿ.ಎಸ್. ಗಿರೀಶ್, ಜಿಲ್ಲಾಧಿಕಾರಿಗಳ ಕಚೇರಿಯ ಕಾರ್ಯಪಾಲಕ ಅಭಿಯಂತರ ಶ್ರೀನಿವಾಸ್, ಒಳಚರಂಡಿ ಮಂಡಳಿ ಸಹಾಯಕ ಇಂಜಿನಿಯರ್ ಅಭಿಷೇಕ್, ಕುಶಾಲನಗರ ಪುರಸಭೆ ಆರೋಗ್ಯ ಅಧಿಕಾರಿ ಉದಯಕುಮಾರ್, ಇಂಜಿನಿಯರ್ ಅರ್ಬಸ್ ಅಹಮದ್ ಇದ್ದರು.