ಸೋಮವಾರಪೇಟೆ, ಸೆ. ೨: ಗದ್ದೆಗಳಲ್ಲಿ ಪ್ರತಿವರ್ಷ ನಾಟಿ ಮಾಡಿದರೆ ಹವಾಮಾನದಲ್ಲಿ ಸಮತೋಲನ ಕಾಯ್ದುಕೊಳ್ಳಬಹುದು. ಭತ್ತ ಬೆಳೆಯುವ ಗದ್ದೆಗಳನ್ನು ಪಾಳು ಬಿಟ್ಟು ವಾಣಿಜ್ಯ ಉದ್ದೇಶಕ್ಕೆ ಬಳಸಿದರೆ ಮುಂದಿನ ಪೀಳಿಗೆ ಸಂಕಷ್ಟಕ್ಕೆ ಒಳಗಾಗಬಹುದು ಎಂದು ಸಿಗ್ಮಾ ನೆಟ್ ವರ್ಕ್ ಸಂಸ್ಥೆಯ ಸಂಸ್ಥಾಪಕ ಶರಣ್ ಪೂಣಚ್ಚ ಹೇಳಿದರು.

ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಸೋಮವಾರಪೇಟೆ ತಾಲೂಕು ಘಟಕದ ವತಿಯಿಂದ ಸಮೀಪದ ಆಲೂರು ಸಿದ್ದಾಪುರದ ಕೃಷ್ಣಪ್ಪ ಅವರ ಗದ್ದೆಯಲ್ಲಿ ಆಯೋಜಿಸಿದ್ದ ೨ನೇ ವರ್ಷದ ಭತ್ತಸಸಿ ನಾಟಿ ಕಾರ್ಯಕ್ರಮದಲ್ಲಿ ಭಾಗವಹಿಸಿ, ಕೆಸರು ಗದ್ದೆಯಲ್ಲಿ ನಾಟಿ ಮಾಡಿ ಅವರು ಮಾತನಾಡಿದರು.

ಗದ್ದೆ ನಾಟಿ ಮಾಡುವುದರಿಂದ ಭೂಮಿಯಲ್ಲಿ ನೀರಿನ ಮಟ್ಟ ಹೆಚ್ಚಲು ಸಹಕಾರಿಯಾಗುತ್ತದೆ. ಗದ್ದೆಯನ್ನು ಉಳುಮೆ ಮಾಡಿ ನಾಟಿ ಮಾಡುವುದರಿಂದ ಪ್ರಕೃತಿಗೂ ಅಪಾರ ಕೊಡುಗೆ ನೀಡಿದಂತಾಗುತ್ತದೆ ಎಂದ ಅವರು, ಇತ್ತೀಚಿನ ದಿನಗಳಲ್ಲಿ ಗದ್ದೆ ನಾಟಿಗಳು ಕ್ಷೀಣಿಸುತ್ತಿರುವುದು ಭವಿಷ್ಯಕ್ಕೆ ಮಾರಕ ಎಂದರು.

ಜನರು ಸ್ವಯಂಪ್ರೇರಿತರಾಗಿ ನಾಟಿ ಕಾರ್ಯಕ್ಕೆ ಮುಂದಾಗಬೇಕು. ಯುವಜನತೆ ಇಂದು ಕೃತಕ ಬುದ್ಧಿಮತ್ತೆ (ತಂತ್ರಜ್ಞಾನದತ್ತ ಹೆಚ್ಚು ಆಸಕ್ತಿ ತೋರುತ್ತಿದ್ದಾರೆ. ಸರ್ಕಾರವೂ ನಗರ ಪ್ರದೇಶಗಳ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡುತ್ತಿದ್ದು, ಗ್ರಾಮೀಣ ಭಾಗದ ಅಭಿವೃದ್ಧಿಗೆ ಸಮಾನ ಆದ್ಯತೆ ನೀಡಬೇಕು ಎಂದರು.

ಸೋಮವಾರಪೇಟೆ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ವಿಶ್ವ ಕುಂಬೂರು ಅಧ್ಯಕ್ಷತೆ ವಹಿಸಿದ್ದರು. ವೀರಾಜಪೇಟೆ ಘಟಕದ ಅಧ್ಯಕ್ಷ ರೆಜಿತ್ ಕುಮಾರ್ ಗುಹ್ಯ ಮಾತನಾಡಿದರು. ನಾಟಿ ಕಾರ್ಯಕ್ರಮದಲ್ಲಿ ಪತ್ರಕರ್ತರ ಸಂಘದ ಸದಸ್ಯರುಗಳು, ಸ್ಥಳೀಯ ಸರ್ಕಾರಿ ವಿದ್ಯಾರ್ಥಿ ವಸತಿ ನಿಲಯದ ವಿದ್ಯಾರ್ಥಿಗಳು, ಅಡುಗೆ ಸಿಬ್ಬಂದಿ ವರ್ಗದವರು, ಸಾರ್ವಜನಿಕರು ಪಾಲ್ಗೊಂಡು ನಾಟಿ ಕಾರ್ಯದಲ್ಲಿ ಭಾಗವಹಿಸಿದರು. ಇದೆ ಸಂದರ್ಭ ಗದ್ದೆ ಮಾಲೀಕ ಕೃಷ್ಣಪ್ಪ ಅವರನ್ನು ಸಂಘದ ವತಿಯಿಂದ ಸನ್ಮಾನಿಸಲಾಯಿತು.

ನಿರ್ದೇಶಕ ವಿಜಯ್ ಹಾನಗಲ್ ಕಾರ್ಯಕ್ರಮ ನಿರೂಪಿಸಿದರು. ಜಿಲ್ಲಾ ಕಾರ್ಯದರ್ಶಿ ಚೆರಿಯಮನೆ ಸುರೇಶ್ ಸ್ವಾಗತಿಸಿದರು. ಖಜಾಂಚಿ ಬಿ.ಎ. ಭಾಸ್ಕರ್ ವಂದಿಸಿದರು