ಮಡಿಕೇರಿ, ಸೆ. ೧: ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಸಫಾಯಿ ಕರ್ಮಚಾರಿ ಕಾವಲು ಸಮಿತಿ ವತಿಯಿಂದ ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಯಿತು.

ಗಾಂಧಿ ಮೈದಾನದಿಂದ ಜಿಲ್ಲಾಡಳಿತ ಭವನದ ತನಕ ಜಾಥಾ ನಡೆಸಿದ ಪ್ರತಿಭಟನಾನಿರತರು ತಮ್ಮ ಹಕ್ಕೊತ್ತಾಯ ಮಂಡಿಸಿ ಅಧಿಕಾರಿಗಳ ಮೂಲಕ ಸರಕಾರಕ್ಕೆ ಮನವಿ ಸಲ್ಲಿಸಿದರು.

ಮಲ ಸ್ವಚ್ಛತಾ ಕೆಲಸವನ್ನು ಅಧುನಿಕ ಯಂತ್ರೋಪಕರಣದ ಮೂಲಕವೇ ನಿರ್ವಹಿಸುವುದು ಕಡ್ಡಾಯಗೊಳಿಸಬೇಕು, ಮ್ಯಾನ್ಯುಯಲ್ ಸ್ಕಾö್ಯವೆಂಜರ್‌ಗಳ ಸಮಗ್ರ, ಪಾರದರ್ಶಕ ಸಮೀಕ್ಷೆ ನಡೆಸಬೇಕು, ಪುನರ್ವಸತಿ ಕಲ್ಪಿಸಬೇಕು, ಶಾಶ್ವತ ಪರ್ಯಾಯ ಉದ್ಯೋಗ ಕಲ್ಪಿಸಬೇಕು, ಸ್ವಯಂ ಉದ್ಯೋಗಕ್ಕೆ ನೆರವು ನೀಡಬೇಕು, ಸಫಾಯಿ ಕರ್ಮಚಾರಿಗಳಿಗೆ ಆರೋಗ್ಯ ವಿಮೆ ಸೌಲಭ್ಯ ಕಲ್ಪಿಸಬೇಕು, ಶಿಕ್ಷಣ, ಸಾಮಾಜಿಕ ಭದ್ರತೆ, ಮಾಸಿಕ ಪಿಂಚಣಿ ವ್ಯವಸ್ಥೆ ಒದಗಿಸಬೇಕು ಸೇರಿದಂತೆ ವಿವಿಧ ಬೇಡಿಕೆಗಳನ್ನು ಮುಂದಿಟ್ಟರು.

ಜಿಲ್ಲಾಧ್ಯಕ್ಷ ರಾಮಚಂದ್ರ, ಉಪಾಧ್ಯಕ್ಷ ರಮೇಶ್, ಜಿಲ್ಲಾ ಸಮಿತಿಯ ಸಂಚಾಲಕ ಆರ್. ರಂಗಸ್ವಾಮಿ, ಪ್ರಮುಖರಾದ ಹೋಬಳೇಶ್, ಚಂದ್ರಮಣಿ ಸೇರಿದಂತೆ ಇನ್ನಿತರರು ಹಾಜರಿದ್ದರು.