ಕೊಡ್ಲಿಪೇಟೆ, ಸೆ. ೧: ಸಮೀಪದ ಹ್ಯಾಂಡ್ಪೋಸ್ಟ್ನ ಮಸ್ಜಿದುನ್ನೂರ್ ಸುನ್ನಿ ಜುಮ್ಮಾ ಮಸೀದಿ ವತಿಯಿಂದ ನೂರ್ ಮಹಲ್ನಲ್ಲಿ ನಾಲ್ಕು ದಿನಗಳ ಕಾಲ ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಈದ್ ಮಿಲಾದ್ ಹಾಗೂ ಸ್ವಲಾತ್ ವಾರ್ಷಿಕೋತ್ಸವ ಸಡಗರದಿಂದ ನಡೆಯಿತು.
ಕಾರ್ಯಕ್ರಮದಲ್ಲಿ ಅಸ್ಲಂ ಅಝ್ಹರಿ, ರಾಫಿ ಹಿಮಾಮಿ ಅವರು ಧಾರ್ಮಿಕ ಪ್ರವಚನ ನೀಡಿದರು.
ಸ್ವಲಾತ್ ಹಾಗೂ ಅಧ್ಯಾತ್ಮಿಕ ವೇದಿಕೆಯ ನೇತೃತ್ವವನ್ನು ಝೈನಲ್ ಆಬಿದಿನ್ ತಂಙಳ್ ಮೇಲಾಟೂರು ವಹಿಸಿ ಪ್ರಾರ್ಥನೆ ನೆರವೇರಿಸಿದರು. ಈ ಸಂದರ್ಭ ಮಸ್ಜಿದುನ್ನೂರ್ ಧರ್ಮಗುರುಗಳಾದ ರಫೀಕ್ ದಾರಿಮಿ ಅವರು ಮುಖ್ಯ ಪ್ರಭಾಷಣ ಮಾಡಿದರು.
ಮೀಲಾದ್ ಜಲ್ಸಾ ಕಾರ್ಯಕ್ರಮದಲ್ಲಿ ಮದ್ರಸ ವಿದ್ಯಾರ್ಥಿಗಳಿಂದ ಪ್ರವಾದಿ ಮುಹಮ್ಮದ್ ಅವರ ಕೀರ್ತನೆಗಳನ್ನು ಒಳಗೊಂಡ ಹಾಡು, ಭಾಷಣ, ಕವ್ವಾಲಿ ಹಾಗೂ ಬುರ್ದಾ ಸೇರಿದಂತೆ ವಿವಿಧ ಕಾರ್ಯಕ್ರಮಗಳು ಜರುಗಿದವು.
ಸಮಾರೋಪ ಸಮಾರಂಭ ಹಾಗೂ ಬಹುಮಾನ ವಿತರಣಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಸ್ಜಿದುನ್ನೂರ್ ಅಧ್ಯಕ್ಷ ಅಬೂಬಕ್ಕರ್ ಸಿದ್ದೀಕ್ ಹಾಜಿ ವಹಿಸಿದ್ದರು. ಸಲಹಾ ಸಮಿತಿ ಸದಸ್ಯ ಕೆ.ಹೆಚ್. ಅಬ್ದುಲ್ ಮಜೀದ್, ಪ್ರಧಾನ ಕಾರ್ಯದರ್ಶಿ ಮಹಮ್ಮದ್ ಹನೀಫ್, ಕಾರ್ಯದರ್ಶಿ ಮುನೀರ್, ಮದ್ರಸ ಮುಖ್ಯ ಪ್ರಾಧ್ಯಾಪಕ ರಝಾಕ್ ಫೈಝಿ ಹಾಗೂ ಝಹೀರ್ ನಿಝಾಮಿ ಕಾರ್ಯಕ್ರಮ ನಿರ್ವಹಿಸಿದರು. ಅಧ್ಯಾಪಕರಾದ ಸ್ವಾಲಿಹ್ ರಹ್ಮಾನಿ, ಸಮದ್ ಫೈಝಿ, ಸಮೀರ್ ಸಖಾಫಿ, ಯಾಕೂಬ್ ಗೌಸಿ ಹಾಗೂ ಆರೀಸ್ ಜೌಹರಿ ಸೇರಿದಂತೆ ಸಲಹಾ ಸಮಿತಿ, ಆಡಳಿತ ಸಮಿತಿ ಹಾಗೂ ನೂರ್ ಯೂತ್ ಸಮಿತಿಯ ಪದಾಧಿಕಾರಿಗಳು ಮತ್ತು ಸದಸ್ಯರು ಉಪಸ್ಥಿತರಿದ್ದರು.
ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳು, ಹಾಜರಾತಿಯಲ್ಲಿ ಅಗ್ರಸ್ಥಾನ ಪಡೆದವರು ಹಾಗೂ ಹಾಡು, ಭಾಷಣ ಸೇರಿದಂತೆ ವಿವಿಧ ವೇದಿಕೆ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ ಮದ್ರಸ ವಿದ್ಯಾರ್ಥಿಗಳಿಗೆ ಬಹುಮಾನಗಳನ್ನು ವಿತರಿಸಲಾಯಿತು.
ಪಟ್ಟಣದಲ್ಲಿ ಮಿಲಾದ್ ರ್ಯಾಲಿ
ಹ್ಯಾಂಡ್ಪೋಸ್ಟ್ ಮಸ್ಜಿದುನ್ನೂರ್ ಜುಮ್ಮಾ ಮಸೀದಿ ಹಾಗೂ ನೂರ್ ಯೂತ್ ಅಸೋಸಿಯೇಷನ್ ವತಿಯಿಂದ ಅದ್ದೂರಿ ಮಿಲಾದ್ ರ್ಯಾಲಿ ನಡೆಯಿತು.
ಬ್ಯಾಡಗೊಟ್ಟ ಮದ್ರಸದಿಂದ ಆರಂಭಗೊAಡ ರ್ಯಾಲಿಯು ಪ್ರಮುಖ ಮಾರ್ಗಗಳ ಮೂಲಕ ಸಾಗಿತು. ರ್ಯಾಲಿಯಲ್ಲಿ ತಜಲ್ಲಿಯಾತ್ ಹ್ಯಾಂಡ್ಪೋಸ್ಟ್, ಖುವ್ವತುಲ್ ಇಸ್ಲಾಂ ಕಲ್ಲಾರೆ ಹಾಗೂ ಹಿದಾಯತ್ತುಸ್ವಿಬಿಯಾನ್ ಬ್ಯಾಡಗೊಟ್ಟ ಮದ್ರಸಗಳ ವಿದ್ಯಾರ್ಥಿಗಳು ಭಾಗವಹಿಸಿದ್ದರು. ವಿದ್ಯಾರ್ಥಿಗಳ ಧಫ್, ಸ್ಕೌಟ್ ಹಾಗೂ ಫ್ಲವರ್ ಶೋ ರ್ಯಾಲಿಯ ಪ್ರಮುಖ ಆಕರ್ಷಣೆಯಾಗಿತ್ತು.