ಮಡಿಕೇರಿ ಸೆ. ೧: ಸರ್ಕಾರದಿಂದ ಮಾನ್ಯತೆ ಪಡೆದ ವಿಶ್ವವಿದ್ಯಾನಿಲಯಗಳಲ್ಲಿ ೨೦೨೬-೨೭ನೇ ಸಾಲಿನಲ್ಲಿ ಪೂರ್ಣ ಕಾಲಿಕವಾಗಿ ಪಿಎಚ್‌ಡಿ ಸಂಶೋಧನೆ ಕೈಗೊಳ್ಳುತ್ತಿರುವ ಅಲ್ಪಸಂಖ್ಯಾತ ಅಭ್ಯರ್ಥಿಗಳಿಗೆ (ಜೆಆರ್‌ಎಫ್ ಮಾದರಿ) ಫೆಲೋಶಿಪ್ ಪಾವತಿಸುವ ಸಂಬAಧ ಪಿಹೆಚ್.ಡಿ ಫೆಲೋಶಿಪ್ ಯೋಜನೆಯಡಿ ಸೇವಾ ಸಿಂಧು ಪೋರ್ಟಲ್‌ನಲ್ಲಿ ಆನ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.

ಅರ್ಹ ವಿದ್ಯಾರ್ಥಿಗಳು ಕೂಡಲೇ ಇದರ ಸದುಪಯೋಗ ಪಡಿಸಿಕೊಳ್ಳಲು ಕೋರಿದೆ. ಅರ್ಜಿ ಸಲ್ಲಿಸಲು ಅಕ್ಟೋಬರ್ ೩೧ ಕೊನೆಯ ದಿನವಾಗಿದೆ.

ಸಂಶೋಧನಾರ್ಥಿಗಳು ಕರ್ನಾಟಕ ರಾಜ್ಯದ ನಿವಾಸಿಯಾಗಿರಬೇಕು. ಅಲ್ಪಸಂಖ್ಯಾತರ ಸಮುದಾಯದ ಮುಸ್ಲಿಂ, ಕ್ರಿಶ್ಚಿಯನ್, ಜೈನ್, ಬೌದ್ದ, ಸಿಖ್ ಮತ್ತು ಪಾರ್ಸಿ ವರ್ಗಕ್ಕೆ ಸೇರಿದವರಾಗಿರಬೇಕು. ಸರ್ಕಾರಿ/ಖಾಸಗಿ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಅಭ್ಯರ್ಥಿಗಳು ಫೆಲೋಶಿಪ್‌ಗಾಗಿ ಅರ್ಜಿ ಸಲ್ಲಿಸಲು ಅರ್ಹರಿರುವುದಿಲ್ಲ. ವಿದ್ಯಾರ್ಥಿಯ/ಪಾಲಕರ/ಪೋಷಕರ ಕುಟುಂಬದ ವಾರ್ಷಿಕ ಆದಾಯವು ಎಲ್ಲಾ ಮೂಲಗಳಿಂದ ರೂ.೮ ಲಕ್ಷಗಳನ್ನು ಮೀರಬಾರದು. ವಿದ್ಯಾರ್ಥಿಯ ಗರಿಷ್ಠ ವಯೋಮಿತಿ ೩೫ ವರ್ಷ ಮೀರಬಾರದು.

ವಿದ್ಯಾರ್ಥಿಯು ಸರ್ಕಾರದಿಂದ ಶಾಸನಬದ್ದ ಮಾನ್ಯತೆ ಪಡೆದ ವಿಶ್ವವಿದ್ಯಾಲಯಗಳಲ್ಲಿ ಪಿಎಚ್.ಡಿ. ಕೋರ್ಸಿಗೆ ಪ್ರವೇಶ ಪಡೆದಿರಬೇಕು.

ಈ ಯೋಜನೆಯ ಪ್ರಯೋಜನ ಪಡೆಯಲು ವಿದ್ಯಾರ್ಥಿಗಳು ತಮ್ಮ ಬ್ಯಾಂಕ್ ಖಾತೆಗೆ ಆಧಾರ್ ಜೋಡಣೆ ಆಗಿರುವ ಬಗ್ಗೆ ಹಾಗೂ ಎನ್‌ಪಿಸಿಐ ಮ್ಯಾಪಿಂಗ್ ಆಕ್ಟಿವ್ ಆಗಿರುವ ಬಗ್ಗೆ ಖಚಿತಪಡಿಸಿಕೊಳ್ಳತಕ್ಕದ್ದು. ಈ ಯೋಜನೆಯ ಪ್ರಕ್ರಿಯೆಯು ಸರ್ಕಾರದಿಂದ ಕಾಲಕಾಲಕ್ಕೆ ಹೊರಡಿಸಲಾಗುವ ಸರ್ಕಾರದ ಆದೇಶಗಳು ಹಾಗೂ ಮಾರ್ಗಸೂಚಿಗಳಿಗೆ ಒಳಪಟ್ಟಿರುತ್ತದೆ.

ಹೆಚ್ಚಿನ ಮಾಹಿತಿಗೆ ತಾಲೂಕು ಮಾಹಿತಿ ಕೇಂದ್ರ ಸೋಮವಾರಪೇಟೆ ದೂ.ಸಂ. ೮೫೪೮೦೬೮೫೧೯, ಜಿಲ್ಲಾ ಅಲ್ಪಸಂಖ್ಯಾತರ ಮಾಹಿತಿ ಕೇಂದ್ರ, ಮೌಲಾನಾ ಆಜಾದ್ ಭವನ, ಎಫ್‌ಎಂಸಿ ಕಾಲೇಜು ಹತ್ತಿರ, ಮಡಿಕೇರಿ ಕೊಡಗು ಜಿಲ್ಲೆ ೯೯೭೨೭೯೯೦೯೧, ತಾಲೂಕು ಮಾಹಿತಿ ಕೇಂದ್ರ ವೀರಾಜಪೇಟೆ ದೂ.ಸಂ.೯೯೦೦೭೩೧೦೩೭ ಅನ್ನು ಸಂಪರ್ಕಿಸಬಹುದು ಎಂದು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ಸಚಿನ್ ಸಿ.ಎಸ್. ಅವರು ತಿಳಿಸಿದ್ದಾರೆ.